ಭದ್ರಾ ಮೇಲ್ದಂಡೆ ಹಣವೂ ಇಲ್ಲ, ಭಾರತ್‌ ಅಕ್ಕಿಯೂ ಸಿಗ್ಲಿಲ್ಲ

| Published : Aug 05 2024, 12:32 AM IST

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ನೀಡದಿರುವುದು, ಲೋಕಸಭೆ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭಾರತ್ ಅಕ್ಕಿ ವಿತರಿಸದ ಕೇಂದ್ರ ಸರ್ಕಾರದ ಕ್ರಮಗಳ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ನಗರದಲ್ಲಿ ಭಾನುವಾರ ಖಾಲಿ ಚೊಂಬು ಹಿಡಿದುಕೊಂಡು ಬಿಜೆಪಿ ವಿರುದ್ಧ ಪ್ರತಿಭಟಿಸಲಾಯಿತು.

- ಕೇಂದ್ರ ಸರ್ಕಾರ ನಡೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಆರೋಪ । ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟವರ ವಶ, ಬಿಡುಗಡೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ನೀಡದಿರುವುದು, ಲೋಕಸಭೆ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭಾರತ್ ಅಕ್ಕಿ ವಿತರಿಸದ ಕೇಂದ್ರ ಸರ್ಕಾರದ ಕ್ರಮಗಳ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ನಗರದಲ್ಲಿ ಭಾನುವಾರ ಖಾಲಿ ಚೊಂಬು ಹಿಡಿದುಕೊಂಡು ಬಿಜೆಪಿ ವಿರುದ್ಧ ಪ್ರತಿಭಟಿಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಇತರರ ನೇತೃತ್ವದಲ್ಲಿ ಖಾಲಿ ಚೊಂಬುಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟರು. ಈ ಸಂದರ್ಭ ಮೆರವಣಿಗೆಯನ್ನು ಪೊಲೀಸರು ತಡೆದು, ಪೊಲೀಸ್ ಕವಾಯಿತು ಮೈದಾನಕ್ಕೆ ಕರೆದೊಯ್ದರು. ಬಳಿಕ ವಶಕ್ಕೆ ಪಡೆದಿದ್ದವರನ್ನು ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಪ್ರತಿಭಟನೆಯಲ್ಲಿ ಮಾತನಾಡಿ, ಸ್ವತಃ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಗೆ ಅನುದಾನ ನೀಡುವುದಾಗಿ ಹಿಂದಿನ ಬಜೆಟ್‌ನಲ್ಲೇ ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ, ಈ ಬಜೆಟ್‌ನಲ್ಲೂ ಹಣ ನೀಡಿಲ್ಲ. ಭಾರತ್ ಅಕ್ಕಿ ಸಹ ಚುನಾವಣೆಗೆ ಗಿಮಿಕ್ ಎಂಬಂತಾಗಿದೆ. ರಾಜ್ಯಪಾಲರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ದ್ವೇಷದ ರಾಜಕೀಯ ಕೇಂದ್ರವು ಮಾಡುತ್ತಿದೆ. ಸಿದ್ದರಾಮಯ್ಯ ಆಡಳಿತ ತೆರೆದ ಪುಸ್ತಕದಂತಿದೆ. ಅನೇಕ ಯೋಜನೆ ತಂದು, ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.

ಪಾಲಿಕೆ ಹಿರಿಯ ಸದಸ್ಯ ಕೆ.ಚಮನ್‌ ಸಾಬ್ ಮಾತನಾಡಿ, 15 ಬಜೆಟ್ ಮಂಡಿಸಿದ ಹಣಕಾಸು ಸಚಿವನಾಗಿ, ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ದುಡಿದಿದ್ದಾರೆ. ಹಲವಾರು ಮಹತ್ವದ ಹುದ್ದೆಯಲ್ಲಿದ್ದರೂ ಒಂದೇ ಒಂದು ಕಪ್ಪುಚುಕ್ಕೆಯೂ ಇಲ್ಲದ ನಾಯಕ ಸಿದ್ದರಾಮಯ್ಯ. ಅಂಥವರ ವರ್ಚಸ್ಸಿಗೆ, ವ್ಯಕ್ತಿತ್ವಕ್ಕೆ ಮಸಿ ಬಳಿದು, ರಾಜಕೀಯವಾಗಿ ಮುಗಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯ ಜಿ.ಎಸ್.ಮಂಜುನಾಥ ಗಡಿಗುಡಾಳ, ಹಿರಿಯ ಮುಖಂಡರಾದ ಕೆ.ಜಿ. ಶಿವಕುಮಾರ, ಆಯೂಬ್ ಪೈಲ್ವಾನ್, ಎ.ನಾಗರಾಜ, ಹದಡಿ ಜಿ.ಸಿ.ನಿಂಗಪ್ಪ, ಎಲ್.ಡಿ.ಗೋಣೆಪ್ಪ, ಎಸ್.ಮಲ್ಲಿಕಾರ್ಜುನ, ಆರೀಫ್ ಖಾನ್, ಮಂಜಮ್ಮ, ಕವಿತಾ ಚಂದ್ರಶೇಖರ , ಮಂಗಳ, ದಾಕ್ಷಾಯಣಮ್ಮ, ಶುಭಮಂಗಳ, ರಾಜೇಶ್ವರಿ, ಹರೀಶ, ಕೇರಂ ಗಣೇಶ, ರಾಕೇಶ, ಡೋಲಿ ಚಂದ್ರು, ಯುವರಾಜ, ಸುರೇಶ್ ಕೋಗುಂಡೆ, ಅಕ್ಕಿ ರಾಮಚಂದ್ರ, ಎಸ್.ಎಲ್.ಆನಂದಪ್ಪ, ಎಚ್.ಜೆ.ಮೈನುದ್ದೀನ್, ಎಲ್.ಎಂ.ಹೆಚ್.ಸಾಗರ್, ಕಾಯಿಪೇಟೆ ಹಾಲೇಶ, ಅಬ್ದುಲ್ ಜಬ್ಬಾರ್, ಇತರರು ಇದ್ದರು.

- - -

ಕೋಟ್‌ ಕರ್ನಾಟಕದಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ನೀಡುತ್ತಿರುವುದು ಸರಿಯಲ್ಲ. ಬಿಜೆಪಿ ಕೈಗೊಂಡಿರುವುದು ಪಾಪದ ಪಾದಯಾತ್ರೆ. ಬಿಜೆಪಿ ತಾನು ಮಾಡಿದ ಪಾಪ ತೊಳೆಯಲು ಮಾಡುತ್ತಿರುವ ಪಾದಯಾತ್ರೆಯಾಗಿದೆ

- ಎಚ್‌.ಬಿ. ಮಂಜಪ್ಪ, ಜಿಲ್ಲಾಧ್ಯಕ್ಷ, ಕಾಂಗ್ರೆಸ್‌

- - - -4ಕೆಡಿವಿಜಿ1:

ಭದ್ರಾ ಮೇಲ್ದಂಡೆಗೆ ಅನುದಾನ, ಭಾರತ್ ಅಕ್ಕಿ ನೀಡದ ಕೇಂದ್ರದ ವಿರುದ್ಧ ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಚ್‌.ಬಿ.ಮಂಜಪ್ಪ, ದಿನೇಶ ಕೆ. ಶೆಟ್ಟಿ ಇತರರ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. -4ಕೆಡಿವಿಜಿ2, 3, 4:

ಭದ್ರಾ ಮೇಲ್ದಂಡೆಗೆ ಅನುದಾನ, ಭಾರತ್ ಅಕ್ಕಿ ನೀಡದ ಕೇಂದ್ರದ ವಿರುದ್ಧ ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಚ್‌.ಬಿ.ಮಂಜಪ್ಪ, ದಿನೇಶ ಕೆ.ಶೆಟ್ಟಿ ಇತರರ ನೇತೃತ್ವದಲ್ಲಿ ಪ್ರತಿಭಟಿಸಿ, ಬಿಜೆಪಿ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ಹೊರಡುತ್ತಿದ್ದಂತೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.