ಸಾರಾಂಶ
ವೀಕ್ಷಕರ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದವರು ಖುಷಿಯಲ್ಲಿದ್ದು, ಪೂರ್ವತಯಾರಿ ನಡೆಸಿದ್ದರು. ಇದೀಗ ಸಭೆ ಮುಂದೂಡಿರುವುದರಿಂದ ಮತ್ತೆ ನೂತನ ಅಧ್ಯಕ್ಷರ ಆಯ್ಕೆ ನೆನೆಗುದಿಗೆ ಬೀಳುವಂತಾಗಿರುವುದು ಆಕಾಂಕ್ಷಿಗಳಲ್ಲಿ ಬೇಸರ ಮೂಡಿಸಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಒಂದು ಹಾಗೂ ಒಂದಕ್ಕಿಂತ ಹೆಚ್ಚು ಅವಧಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರನ್ನು ಬದಲಾವಣೆ ಮಾಡಬೇಕೆಂಬ ಎಐಸಿಸಿ ಸೂಚನೆ ಮೇರೆಗೆ ಕೆಪಿಸಿಸಿ ನೇಮಿಸಿದ್ದ ವೀಕ್ಷಕರ ಜಿಲ್ಲಾ ಭೇಟಿ ದಿಢೀರ್ ಮುಂದೂಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬದಲಾವಣೆ ಸದ್ಯಕ್ಕಿಲ್ಲ ಎನ್ನುವಂತಾಗಿದೆ.ಕಾರಣಾಂತರಗಳಿಂದ ವೀಕ್ಷಕರ ಭೇಟಿ ಪ್ರಕ್ರಿಯೆಯನ್ನು ಸದ್ಯಕ್ಕೆ ಮುಂದೂಡಲಾಗಿದ್ದು, ಮುಂದಿನ ಸೂಚನೆವರೆಗೆ ಅಧ್ಯಕ್ಷರ ಬದಲಾವಣೆ ಸಂಬಂಧ ಯಾವುದೇ ಸಭೆಗಳನ್ನು ನಡೆಸಬಾರದು. ಈಗಾಗಲೇ ಕರೆದಿರುವ ಸಭೆಗಳನ್ನು ರದ್ದುಗೊಳಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ (ಆಡಳಿತ) ಜಿ.ಸಿ.ಚಂದ್ರಶೇಖರ್ ಪತ್ರ ಮುಖೇನ ಸೂಚಿಸಿದ್ದಾರೆ.
ವೀಕ್ಷಕರ ಭೇಟಿ ಮುಂದೂಡಿಕೆಯಿಂದ ಹಲವು ವರ್ಷಗಳಿಂದ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಿಗೆ ನಿರಾಸೆಯಾಗಿದ್ದರೆ, ಅಧ್ಯಕ್ಷರಾಗಿರುವವರು ನಿಟ್ಟುಸಿರು ಬಿಡುವಂತೆ ಮಾಡಿದೆ.ಜಿಲ್ಲಾಧ್ಯಕ್ಷರ ಬದಲಾವಣೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಜಿಲ್ಲೆಗೆ ವಿಧಾನಪರಿಷತ್ ಸದಸ್ಯ ಎಸ್.ರವಿ, ಭಾರತೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್‌ಕುಮಾರ್ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದರು.
ಶುಕ್ರವಾರ (ಜು.11) ವೀಕ್ಷಕರು ಮಂಡ್ಯಕ್ಕೆ ಭೇಟಿ ನೀಡಿ ಸಚಿವರು, ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು, ೨೦೨೩ರ ವಿಧಾನಸಭೆ ಚುನಾವಣಾ ಅಭ್ಯರ್ಥಿಗಳು, ಲೋಕಸಭೆ ಚುನಾವಣೆ ಅಭ್ಯರ್ಥಿಗಳು, ಎಐಸಿಸಿ, ಕೆಪಿಸಿಸಿ ಸದಸ್ಯರು, ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಸದಸ್ಯರೊಂದಿಗೆ ಹೊಸ ಅಧ್ಯಕ್ಷರ ಆಯ್ಕೆ ಕುರಿತು ಸಮಾಲೋಚನೆ ನಡೆಸಿ, ಹೊಸ ಆಕಾಂಕ್ಷಿಗಳ ಕುರಿತು ಮಾಹಿತಿ ಸಂಗ್ರಹಿಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಬೇಕಿತ್ತು.ವೀಕ್ಷಕರ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದವರು ಖುಷಿಯಲ್ಲಿದ್ದು, ಪೂರ್ವತಯಾರಿ ನಡೆಸಿದ್ದರು. ಇದೀಗ ಸಭೆ ಮುಂದೂಡಿರುವುದರಿಂದ ಮತ್ತೆ ನೂತನ ಅಧ್ಯಕ್ಷರ ಆಯ್ಕೆ ನೆನೆಗುದಿಗೆ ಬೀಳುವಂತಾಗಿರುವುದು ಆಕಾಂಕ್ಷಿಗಳಲ್ಲಿ ಬೇಸರ ಮೂಡಿಸಿದೆ.