ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಕಾಂಗ್ರೆಸ್ ಸರ್ಕಾರ ಇನ್ನೂ ಎರಡುವರೆ ವರ್ಷ ರಾಜ್ಯದಲ್ಲಿ ಸುಭದ್ರವಾಗಿ ಆಡಳಿತ ನಡೆಸಲಿದೆ. ನವೆಂಬರ್‌ನಲ್ಲಿ ಯಾವುದೇ ಅಲ್ಲೋಲ- ಕಲ್ಲೋಲವಾಗಲ್ಲ. ಬಿಜೆಪಿ ನಾಯಕರು ಹಗಲುಗನಸು ಕಾಣುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ತಿರುಗೇಟು ನೀಡಿದರು.ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಭರವಸೆ ಕೊಡುತ್ತೇನೆ. ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಏನೂ ಆಗಲ್ಲ. ಬದಲಾವಣೆ ಮಾಡಿ ನಮ್ಮ ಪಕ್ಷದಲ್ಲಿ ಯಾವುದೇ ಶಾಸಕರಾಗಲಿ, ಸಚಿವರಾಗಲಿ ಹೇಳಿದ್ದಾರಾ ಅಥವಾ ಕೇಳಿದ್ದಾರಾ ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ರಾಷ್ಟ್ರೀಯ ಪಕ್ಷ. ಇಷ್ಟು ವರ್ಷ ರಾಜ್ಯದಲ್ಲಿ ಅಧಿಕಾರ ನಡೆಸಿದೆ. ಇದುವರೆಗೂ 113 ಸ್ಥಾನಗಳನ್ನು ಪಡೆದು ಸ್ವತಂತ್ರ್ಯವಾಗಿ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ. ಯಡಿಯೂರಪ್ಪನವರು ಹುಟ್ಟು ಹೋರಾಟಗಾರ ಏನುತ್ತಾರೆ. ಅವರ ತಂದೆ ಬೇರೆ ಪಕ್ಷಗಳ ಶಾಸಕರನ್ನು ಕರೆತಂದು ಮುಖ್ಯಮಂತ್ರಿಗಳಾದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಲೇವಡಿ ಮಾಡಿದರು.ಕಾಂಗ್ರೆಸ್ ಎಲ್ಲಾ ಶಾಸಕರು ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡಿದ್ದೇವೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಯಾವುದೇ ಶಾಸಕರಾಗಲಿ, ಸಚಿವರಾಗಲಿ ಹೈಕಮಾಂಡ್ ಮೇಲೆ ಸಿಎಂ ಬದಲಾವಣೆ ಮಾಡುವಂತೆ ಒತ್ತಡ ಹಾಕುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ನವೆಂಬರ್ ಕ್ರಾಂತಿ ರಾಜ್ಯ ಬಿಜೆಪಿಯಲ್ಲೇ ಆಗಬಹುದು. ಆ ಪಕ್ಷದ ಪದಾಧಿಕಾರಿಗಳ ಬದಲಾವಣೆಯಾಗಬಹುದು ಅಥವಾ ನಾಯಕತ್ವ ಬದಲಾವಣೆ ಆಗಬಹುದು. ಕಾಂಗ್ರೆಸ್‌ನಲ್ಲಿ ಅಂತಹ ಬೆಳವಣಿಗೆಗಳು ನಡೆಯುತ್ತಿಲ್ಲ ಎಂದರು.ಲಿಂಗಾಯುತ ಮಠಗಳ ಶ್ರೀಗಳಿಂದಸಿಎಂ ಓಲೈಕೆ, ಒಂದು ಪಕ್ಷದ ಕಡೆ ಇರುವ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರನ್ನು ಕೇಳಬೇಕು ಎಂದು ಉತ್ತರ ನೀಡದೆ ಜಾರಿಕೊಂಡರು.ವಿಪಕ್ಷ ನಾಯಕರಿಂದ ಪ್ರತಿಭಟನೆಗಳಿಗೆ ಕುಮ್ಮಕ್ಕು: ಕೆ.ಎಂ.ಉದಯ್ ಕಿಡಿ
ಕನ್ನಡಪ್ರಭ ವಾರ್ತೆ ಮದ್ದೂರುವಿಧಾನಸಭಾ ಕ್ಷೇತ್ರದಲ್ಲಿ ಕ್ಷಿಪ್ರಗತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ವಿಪಕ್ಷ ನಾಯಕರು ಇಲ್ಲಸಲ್ಲದ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಹರಿಹಾಯ್ದರು.
ತಾಲೂಕಿನ ಹೆಮ್ಮನಹಳ್ಳಿ, ಚಾಮನಹಳ್ಳಿ ಹಾಗೂ ಬೆಸಗರಹಳ್ಳಿ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಸ್ಮಶಾನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ತಾಲೂಕಿನಲ್ಲಿ ಕೇವಲ 2 ವರ್ಷಗಳಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ. ಆದರೆ, ಕ್ಷೇತ್ರದ ಅಭಿವೃದ್ಧಿ ಸಹಿಸದ ವಿಪಕ್ಷಗಳು ಇಲ್ಲಸಲ್ಲದ ವಿಚಾರ ಮುಂದಿಟ್ಟುಕೊಂಡು ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕ್ಷೇತ್ರದ ಅಭಿವೃದ್ಧಿಯನ್ನು ಯಾರು ತಾನೇ ಬೇಡ ಎನ್ನುತ್ತಾರೆ. 15 -20 ವರ್ಷಗಳ ಕಾಲ ಆಡಳಿತ ನಡೆಸಿದಂತವರು ನಮ್ಮ ಆಡಳಿತ ಅವಧಿಯಲ್ಲಿ ಇಂತಹ ಕೆಲಸ ಮಾಡಲು ಸಾಧ್ಯವಾಗಿಲ್ಲ. ಇವರ ಅವಧಿಯಲ್ಲಿ ಇಷ್ಟೋಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಗುತ್ತಿದೆ ಎಂಬ ಅಸೂಯೆಯಿಂದ ಇಂತಹ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.ಮದ್ದೂರು ಪುರಸಭೆಯನ್ನು ಮೆಲ್ದರ್ಜೆಗೆರಿಸಲು ಸೋಮನಹಳ್ಳಿ, ಚಾಮನಹಳ್ಳಿ, ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆ ನಂತರವೇ ಪುರಸಭೆಯನ್ನು ರಾಜ್ಯ ಸರ್ಕಾರ ಮೆಲ್ದರ್ಜೆಗೆರಿಸಿ ನಗರಸಭೆಯನ್ನಾಗಿ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಬಲವಂತದ ಪ್ರಕ್ರಿಯೆ ಏನು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ನಮಗೆ ಕ್ಷೇತ್ರದ ಅಭಿವೃದ್ಧಿಯಷ್ಟೆ ಮುಖ್ಯ. ಯಾರು ವಿರೋಧ ಮಾಡಿದರೂ ನಮ್ಮ ಕೆಲಸ ನಿರಂತರವಾಗಿ ನಡೆಯಲಿದೆ. ಈಗಾಗಲೇ ನಗರಸಭೆ ವ್ಯಾಪ್ತಿಯ ಅಭಿವೃದ್ಧಿಗೆ ರೂಪುರೇಷೆ ಸಿದ್ಧವಾಗಿದ್ದು, ವಿವಿಧ ಇಲಾಖೆಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಈ ವೇಳೆ ಕಿಸಾನ್ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಗ್ರಾಮ ಪಂಚಾಯ್ತಿ ಸದಸ್ಯರಾದ ಅನಂತು, ಜಗದೀಶ, ಕುಚೇಲ, ಮುಖಂಡರಾದ ರಾಜೇಶ, ದೇಶಹಳ್ಳಿ ಗೌತಮ್, ಅಶೋಕ್ , ವಸಂತ, ಚಿಕ್ಕಸ್ವಾಮಿ ಇದ್ದರು.