ಈಡಿಗರು ಸಮಾಜ ಸೇವೆಗೆ ಹೆಸರುವಾಸಿ

| Published : Mar 06 2024, 02:17 AM IST

ಸಾರಾಂಶ

ಈಡಿಗ ಸಮಾಜಕ್ಕೆ ಪ್ರಾಚೀನ ಇತಿಹಾಸವಿದ್ದು, ಸಮಾಜಸೇವೆಗೆ ಹೆಸರುವಾಸಿಯಾಗಿದೆ. ಇತಿಹಾಸದ ಉದ್ದಕ್ಕೂ ಈಡಿಗರ ಸಾಧನೆಯ ಉಲ್ಲೇಖವಿದೆ. ಈ ಸಮುದಾಯದವರು ಜಿಲ್ಲೆಯಲ್ಲಿ ಬಗರ್‌ಹುಕುಂ ಹೋರಾಟ, ನೀರಾವರಿ ಹೋರಾಟ, ಜೀತ ಪದ್ಧತಿ ವಿಮುಕ್ತಿ ಹೋರಾಟ ನಡೆಸಿದ ದಾಖಲೆಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಾಗರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ ಈಡಿಗ ಸಮಾಜಕ್ಕೆ ಪ್ರಾಚೀನ ಇತಿಹಾಸವಿದ್ದು, ಸಮಾಜಸೇವೆಗೆ ಹೆಸರುವಾಸಿಯಾಗಿದೆ. ಇತಿಹಾಸದ ಉದ್ದಕ್ಕೂ ಈಡಿಗರ ಸಾಧನೆಯ ಉಲ್ಲೇಖವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಪಟ್ಟಣದಲ್ಲಿ ಈಡಿಗ, ಬಿಲ್ಲವ, ನಾಮಧಾರಿ ದೀವರು ಸೇರಿದಂತೆ ೨೬ ಪಂಗಡಗಳ ನೇತೃತ್ವದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶಕ್ತಿಸಾಗರ ಸಂಗಮ ರಾಜ್ಯಮಟ್ಟದ ಸಮಾವೇಶದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಈ ಸಮುದಾಯದವರು ಜಿಲ್ಲೆಯಲ್ಲಿ ಬಗರ್‌ಹುಕುಂ ಹೋರಾಟ, ನೀರಾವರಿ ಹೋರಾಟ, ಜೀತ ಪದ್ಧತಿ ವಿಮುಕ್ತಿ ಹೋರಾಟ ನಡೆಸಿದ ದಾಖಲೆಗಳಿವೆ ಎಂದು ನೆನಪಿಸಿಕೊಂಡರು.

ಜಾತಿ ನಿರ್ಮೂಲನೆ ಹೋರಾಟಕ್ಕೆ ನಾರಾಯಣ ಗುರುಗಳು ಹೊಸ ದಾರಿ ತೋರಿಸಿದ್ದಾರೆ. ಇಡೀ ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ ನಾರಾಯಣ ಗುರುಗಳು ಶಿಕ್ಷಣಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅಂಥ ಗುರುಗಳನ್ನು ಹೊಂದಿರುವ ಬಿಲ್ಲವ, ಈಡಿಗ ಸಮಾಜದವರು ಬಹಳ ಆತ್ಮೀಯತೆ, ಪ್ರೀತಿ- ವಿಶ್ವಾಸದಿಂದ ಸನ್ಮಾನ ಮಾಡಿದ್ದಾರೆ. ಜೀವನದ ಕೊನೆಯ ಉಸಿರು ಇರುವವರೆಗೆ ಈ ನಾಡಿನ ಕಲ್ಯಾಣಕ್ಕಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

ಕರ್ನಾಟಕದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದೀವರು ಸೇರಿದಂತೆ ೨೬ ಪಂಗಡಗಳಿಗೆ ತಮ್ಮದೇ ಮಹತ್ವವಿದೆ. ಕರಾವಳಿ ಭಾಗದಲ್ಲಿ ಕಡಲ ಜೊತೆ ಸೆಣಸಾಡುತ್ತ, ಮಲೆನಾಡು ಭಾಗದಲ್ಲಿ ಕೃಷಿಯಲ್ಲಿ ಸಂತೃಪ್ತಿ ಕಾಣುತ್ತಿರುವ ಶ್ರಮಿಕ ಸಮುದಾಯ ನಿಮ್ಮದಾಗಿದೆ. ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎನ್ನುವ ನಾರಾಯಣ ಗುರುಗಳ ತತ್ವ ಪಾಲಿಸಿದರೆ ಜಗತ್ತಿನ ಯಾವ ಶಕ್ತಿಯೂ ಭಾರತವನ್ನು ಎದುರಿಸಲು ಆಗುವುದಿಲ್ಲ ಎಂದು ಹೇಳಿದರು.

ಭೂಮಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ:

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶರಾವತಿ ಅಣೆಕಟ್ಟು ನಿರ್ಮಾಣದಿಂದ ಈ ಭಾಗದ ಹಿಂದುಳಿದ ವರ್ಗದವರು ಸಂತ್ರಸ್ತರಾಗಿದ್ದಾರೆ. 1978ರವರೆಗೂ ಭೂಮಿಯ ಮಾಲೀಕತ್ವ ನೀಡುವ ಕಾನೂನು ರಾಜ್ಯ ಸರ್ಕಾರದ ಬಳಿ ಇತ್ತು. ಅನಂತರ ಕೇಂದ್ರ ಸರ್ಕಾರ ಹಾಗೂ ಸುಪ್ರಿಂಕೋರ್ಟ್‌ ಅನುಮತಿ ಅಗತ್ಯವಾಯಿತು. ಇದರ ಪರಿಣಾಮದಿಂದ ಸಾವಿರಾರು ಜನರಿಗೆ ಹಕ್ಕುಪತ್ರ ಸಿಗದೇ ತೊಂದರೆಯಾಗುತ್ತಿದೆ. ಈ ಹಿಂದೆ ಕಾಗೋಡು ತಿಮ್ಮಪ್ಪ ಅವರು ಮಾಡಿದ ಪ್ರಯತ್ನಕ್ಕೆ ಕೇಂದ್ರದ ಅನುಮತಿ ದೊರಕಿತ್ತು. ಆದರೆ, ಯಾರೋ ಕೋರ್ಟಿಗೆ ಹೋದ ಪರಿಣಾಮ ನೀಡಿದ ಹಕ್ಕುಪತ್ರ ರದ್ದಾಯಿತು. ರೈತರಿಗೆ ಭೂಮಿ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನನಗೆ ಹಾಗೂ ತಂದೆ ಯಡಿಯೂರಪ್ಪ ಅವರಿಗೆ ಈ ಸಮಾಜದ ಸೇವೆ ಮಾಡುವ ಅವಕಾಶ ದೊರಕಿರುವುದು ನಮ್ಮ ಭಾಗ್ಯವೆಂದು ಭಾವಿಸುತ್ತೇನೆ. ಈ ಸಮಾಜದ, ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನಂಬಿಕೆ ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ವಿಧಾನ ಪರಿಷತ್ತು ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಯಡಿಯೂರಪ್ಪ ಅವರು ರಾಜ್ಯದಲ್ಲಿ ನಮ್ಮ ಸಮುದಾಯಗಳಿಗೆ ಶಕ್ತಿ ತುಂಬಿದ್ದಾರೆ. ತಾವು ಅಧಿಕಾರದಲ್ಲಿ ಇದ್ದಾಗಲೆಲ್ಲ ಸಮುದಾಯ ಬೇಕು-ಬೇಡಗಳಿಗೆ ಸ್ಪಂದಿಸಿದ್ದಾರೆ. ಇದೀಗ ಅವರ ಪುತ್ರ ಸಂಸದ ಬಿ.ವೈ. ರಾಘವೇಂದ್ರ ಅಪ್ಪನ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ಹೇಳಿದರು.

ಧರ್ಮಸ್ಥಳದ ನಿತ್ಯಾನಂದ ಮಠದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಅವಧೂತ ವಿನಯ ಗುರೂಜಿ, ನಾರಾಯಣ ಗುರೂಜಿ, ಪ್ರಣವಾನಂದ ಸ್ವಾಮೀಜಿ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಉಮಕಾಂತ್ ಕೋಟ್ಯಾನ್, ಗುರುರಾಜ್ ಗಂಟಿಹೊಳಿ, ಚೆನ್ನಬಸಪ್ಪ, ಭಾರತಿ ಶೆಟ್ಟಿ, ಡಿ.ಎಸ್.ಅರುಣ್, ರುದ್ರೇಗೌಡ, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಮಾಜಿ ಶಾಸಕರಾದ ಸ್ವಾಮಿ ರಾವ್, ಸುನೀಲ ನಾಯಕ್, ರೂಪಾಲಿ ನಾಯಕ್, ಜೆ.ಪಿ.ಎನ್. ಪ್ರತಿಷ್ಠಾನದ ಜೆ.ಪಿ.ಸುಧಾಕರ್, ಪ್ರಮುಖರಾದ ರಾಜು ತಲ್ಲೂರು, ಕೆ.ಎಸ್.ಪ್ರಶಾಂತ್, ಬಸವರಾಜ್ ಓಟೂರು, ರತ್ನಾಕರ ಹೋನಗೊಡು, ಗುರುಮೂರ್ತಿ, ಡಾ.ರಾಜನಂದಿನಿ ಕಾಗೋಡು, ದೇವೇಂದ್ರಪ್ಪ ಯಲಕುಂದ್ಲಿ, ರಾಜಶೇಖರ್ ಗಾಳಿಪುರ, ಆನಂದ ಜನ್ನೇಹಕ್ಕು, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಸೇರಿದಂತೆ ಹಲವರು ಹಾಜರಿದ್ದರು.

- - -

(ಬಾಕ್ಸ್-1)ಭಕ್ತವತ್ಸಲಂ ಸಮಿತಿ ವರದಿ ಶಿಫಾರಸಿಗೆ ಒತ್ತಾಯ

ಶಾಸಕ ಸುನೀಲ್‌ಕುಮಾರ್ ಮಾತನಾಡಿ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ನಮ್ಮ ಸಮುದಾಯಕ್ಕೆ ಯಡಿಯೂರಪ್ಪನವರು ಸಾಮಾಜಿಕ ನ್ಯಾಯ ದೊರಕಿಸಿದ್ದಾರೆ. ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ರಚನೆ ಮಾಡಿದ್ದ ಭಕ್ತವತ್ಸಲಂ ಸಮಿತಿ ಹಿಂದುಳಿದ ವರ್ಗಗಳಿಗೆ ಸಮಾನಹಕ್ಕು ನೀಡುವ ವರದಿ ನೀಡಿದೆ. ಆದರೆ, ಕಾಂಗ್ರೆಸ್ ಸರ್ಕಾರ ಈ ವರದಿಯನ್ನು ತಿರಸ್ಕಾರ ಮಾಡಿ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದೆ. ರಾಜ್ಯ ಸರ್ಕಾರ ತಕ್ಷಣ ವರದಿಯನ್ನು ಮರುಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು. - - - (ಬಾಕ್ಸ್-2)ಜಾತಿ ಧರ್ಮ ನೋಡದೇ ಹೋರಾಟ

ಮಾಜಿ ಸಚಿವ ಎಚ್.ಹಾಲಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಡಿಯೂರಪ್ಪ ಅವರು ಹೋರಾಟ ಮಾಡುವಾಗ ಜಾತಿ, ಧರ್ಮ ನೋಡಿಲ್ಲ. ಜನರ ಅಭಿವೃದ್ಧಿಗಾಗಿ ದುಡಿದರು, ಹೋರಾಟ ಮಾಡಿದರು. ರಾಮಕೃಷ್ಣ ಹೆಗಡೆ, ಬಂಗಾರಪ್ಪ ಅವರಂತೆಯೇ ಸರ್ವ ಜನಾಂಗದ ನಾಯಕರಾಗಿ ಯಡಿಯೂರಪ್ಪ ಬೆಳೆದವರು ಎಂದರು.

ಆಡಳಿತದಲ್ಲಿ ಇರುವಾಗ ಸಮಾಜಗಳಿಗೆ, ಸಮುದಾಯಕ್ಕೆ ಕೇವಲ ಅನುದಾನ ಮಾತ್ರ ಕೊಟ್ಟಿಲ್ಲ, ಯೋಜನೆಗಳ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿದ್ದಾರೆ. ಹತ್ತಾರು ಜನಪರ ಯೋಜನೆಗಳಿಂದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪ ಅವರನ್ನು ಸನ್ಮಾನಿಸುವ ಮೂಲಕ ನಮ್ಮನ್ನು ನಾವು ಗೌರವಿಸಿಕೊಂಡAತೆ ಆಗುತ್ತದೆ ಎಂದು ಹೇಳಿದರು. - - - -೫ಕೆ.ಎಸ್.ಎ.ಜಿ.೧:

ಸಾಗರದಲ್ಲಿ ಈಡಿಗ, ಬಿಲ್ಲವ, ನಾಮಧಾರಿ ದೀವರು ಸೇರಿದಂತೆ ೨೬ ಪಂಗಡಗಳ ನೇತೃತ್ವದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶಕ್ತಿ ಸಾಗರ ಸಂಗಮ ರಾಜ್ಯಮಟ್ಟದ ಸಮಾವೇಶದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಯಿತು.