ಸಾರಾಂಶ
- ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರಗಳ ವಿರುದ್ಧ ಶೃಂಗೇರಿ ಕ್ಷೇತ್ರಮಟ್ಟದ ಬೃಹತ್ ಜನಾಗ್ರಹ ಸಭೆ
ಕನ್ನಡಪ್ರಭ ವಾರ್ತೆ, ಕೊಪ್ಪಅನ್ಯಶಕ್ತಿ, ಧರ್ಮ ವಿರೋಧಿಗಳು ನಮ್ಮ ಧರ್ಮ ಧರ್ಮಗಳ ಮೇಲೆ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಎನ್.ಆರ್.ಪುರ ಬಸ್ತಿಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು.ಭಾನುವಾರ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಪುಣ್ಯ ಕ್ಷೇತ್ರಗಳ ಸಂರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಜನಾಗ್ರಹ ಸಭೆಯಲ್ಲಿ ಮಾತನಾಡಿ ದೇಶದಲ್ಲಿ ಭಯೋತ್ಪಾದಕರಿಗೆ ತಕ್ಕ ಉತ್ತರವನ್ನ ಕೇಂದ್ರ ಸರ್ಕಾರ ನೀಡಿದೆ. ಇನ್ನೊಂದಿಷ್ಟು ದೇಶದ ಒಳಗೆ ಮಾನಸಿಕ ಭಯೋತ್ಪಾದಕರಿದ್ದಾರೆ ಅವರಿಗೂ ಸಹ ಉತ್ತರ ನೀಡಬೇಕು. ಧರ್ಮಸ್ಥಳಕ್ಕೆ ಕಳಂಕ ಬಂದ ಮೇಲೆ ಹಿಂದೂ ಸಮಾಜ ಹಾಗೂ ಧರ್ಮಗುರುಗಳು ಏಕೆ, ಏನು ಮಾತನಾಡುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದರು. ಆದರೆ ಈಗ ಸತ್ಯ ಹೊರ ಬಂದಿದೆ. ಅಣ್ಣಪ್ಪ ಹಾಗೂ ಮಂಜುನಾಥ ಸ್ವಾಮಿ ಸತ್ಯವನ್ನು ತೊರಿಸುವ ಕೆಲಸ ಮಾಡಿದ್ದಾರೆ ಎಂದರು.ಧರ್ಮಸ್ಥಳದ ಮೇಲೆ ನಿಮ್ಮ ಷಡ್ಯಂತ್ರಗಳನ್ನು ಯಾಕೆ ಹುಟ್ಟುಹಾಕುತ್ತಿದ್ದೀರಾ ಭಗವಂತನ ದೃಷ್ಟಿಯಲ್ಲಿ ನೀವು ತಪ್ಪಿಸಿ ಕೊಳ್ಳಲು ಆಗಲ್ಲ. ಮುಖ್ಯಮಂತ್ರಿಗಳು ಮಂಜುನಾಥ ಸ್ವಾಮಿ ಕ್ಷೇತ್ರದ ಮೇಲೆ ಕಳಂಕ ಮಾಡಲು ಮುಂದಾದರೆ ನಿಮ್ಮ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತ ಪಡಿಸುತ್ತಾರೆ ಎಂದು ಎಚ್ಚರಿಸಿದರು.ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ ಹಿಂದುಗಳ ಶ್ರದ್ಧಾ ಕ್ಷೇತ್ರಗಳ ವಿರುದ್ಧ ನಿರಂತರ ಅಪಪ್ರಚಾರ ನಡೆಸಿ ಹಿಂದೂ ಗಳ ನಂಬಿಕೆ ಮೇಲೆ ಘಾಸಿ ಉಂಟುಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ನಮ್ಮ ದೇಶ ನಿಂತಿ ರುವುದೇ ಭಾವನೆಗಳ ಮೇಲೆ ಹಾಗಾಗಿ ಇಂದಿಗೂ ಸಹ ಸದೃಢವಾಗಿದೆ. ಈ ಭಾವನೆ, ನಂಬಿಕೆಗೆಗೆ ಪೆಟ್ಟು ಕೊಡಲು ವಿದೇಶಿ ಹಣ ಬಳಕೆ ಮಾಡಲಾಗುತ್ತಿದೆ. ಇದರಿಂದ ಹಿಂದೂಗಳ ಮನಸ್ಸಿನಲ್ಲಿ ದೇವರು, ಧರ್ಮದ ಬಗ್ಗೆ ಕಂದಕ ಸೃಷ್ಠಿ ಮಾಡಲಾಗುತ್ತಿದೆ ಎಂದು ದೂರಿದರು.
ಅನ್ಯಕೋಮಿನವರಿಗೆ ಅವರ ಧರ್ಮದ ನೂನ್ಯತೆ ಪ್ರಶ್ನಿಸುವ ಬದಲು, ಶಬರಿಮಲೆ, ಧರ್ಮಸ್ಥಳ ಎಂದು ಬೊಬ್ಬೆ ಇಡುತ್ತಿದ್ದಾರೆ. ಹಿಂದೂ ಶ್ರದ್ಧಾ ಕೇಂದ್ರಗಳ ಮೇಲೆ ಭಕ್ತಿ ಕಡಿಮೆ ಆದರೆ ಮತಾಂತರ ಮಾಡಿಸುವುದು ಸುಲಭವಾಗುತ್ತದೆ. ಇದು ಅಂತರಾಷ್ಟ್ರೀಯ ಷಡ್ಯಂತ್ರ. ಹಾಗಾಗಿ ಧರ್ಮಸ್ಥಳ ಟಾರ್ಗೆಟ್ ಆಗಿದೆ. ಬುರುಡೆ ಹಿಡಿದುಕೊಂಡು ನ್ಯಾಯಾಲಯದ ಮುಂದೆ ಬಂದ ವ್ಯಕ್ತಿ ಮೇಲೆ ಪ್ರಕರಣ ದಾಖಲು ಮಾಡಬೇಕು. ಆತನ ವಿರುದ್ಧ ತನಿಖೆಯಾಗಬೇಕು ಎಂದ ಅವರು, ರಾಜ್ಯ ಸರ್ಕಾರ ಧರ್ಮಸ್ಥಳ ವಿಚಾರದಲ್ಲಿ ತಕ್ಷಣ ಎಸ್.ಐ.ಟಿ ರಚನೆ ಮಾಡಿದೆ ಎಂದರು.ಧರ್ಮಸ್ಥಳದಲ್ಲಿ ಗುಂಡಿಗಳನ್ನು ಅಗೆಸಿದರು ಸಹ ಒಂದು ಅಸ್ಥಿಪಂಜರ ಪತ್ತೆಯಾಗಿಲ್ಲ. ಎಸ್.ಐಟಿ ತನಿಖೆ ಆರಂಭವಾಗಿದೆ ಈಗ ಬಣ್ಣ ಬಯಲಾಗಿದೆ ಇಂದು ಜನರು ಜಾಗೃತವಾಗಿ ಷಡ್ಯಂತ್ರದ ವಿರುದ್ಧ ಬೀದಿಗೆ ಇಳಿದಿದ್ದಾರೆ. ಧರ್ಮಸ್ಥಳದ ಒಬ್ಬ ರೌಡಿ ಶೀಟರ್ ಷಡ್ಯಂತ್ರದ ಸೂತ್ರದಾರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣ ತೊಡಗಿಸಿದ್ದಾರೆ. ಷಡ್ಯಂತ್ರ ರೂಪಿಸಿದವರಿಗೆ ಶಿಕ್ಷೆ ಕೊಡಿಸುವ ತನಕ ನಾವು ಹೋರಾಟ ಮಾಡುತ್ತೇವೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಷಡ್ಯಂತ್ರ ಬಯಲು ಮಾಡುತ್ತೇವೆ ಎಂದಿದ್ದಾರೆ. ಮುಖ್ಯಮಂತ್ರಿ ಹಾಗೂ ಡಿಸಿಎಂ ಎಸ್‌ಐಟಿ ತನಿಖೆ ಮಾಡಿಸಿದ್ದರಿಂದ ಅಲ್ಲಿನ ಸತ್ಯ ಬಯಲಾಗಿದೆ ಎಂದು ತಿಳಿಸಿದರು.ಕೊಪ್ಪ, ಶೃಂಗೇರಿ, ನ.ರಾ.ಪುರ ತಾಲೂಕುಗಳ ಧರ್ಮಸ್ಥಳ ಗ್ರಾಮೀಣಭಾಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಸದಸ್ಯರು, ಹಿಂದೂ ಭಕ್ತಾದಿಗಳು, ಬಿಜೆಪಿ ಮುಖಂಡರು, ಹೋರಾಟ ಸಮಿತಿ ಸೇರಿದಂತೆ ಸಹಸ್ರಾರು ಜನ ಪ್ರತಿಭಟನೆಯಲ್ಲಿ ಭಾಗಿಯಾದರು.