ಸಾರಾಂಶ
ಕುಡಿದು ಖಾಲಿಯಾಗಿದ್ದ ಮದ್ಯದ ಬಾಟಲಿಗಳನ್ನು ಮನೆ ಮುಂದೆ ಹಾಕಬಾರದೆಂದು ಬುದ್ಧಿವಾದ ಹೇಳಿದ ಮನೆ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ಹತ್ಯೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಕೆರೂರ ಸಮೀಪದ ರಡ್ಡೇರತಿಮ್ಮಾಪೂರದಲ್ಲಿ ಸೋಮವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಕೆರೂರ
ಕುಡಿದು ಖಾಲಿಯಾಗಿದ್ದ ಮದ್ಯದ ಬಾಟಲಿಗಳನ್ನು ಮನೆ ಮುಂದೆ ಹಾಕಬಾರದೆಂದು ಬುದ್ಧಿವಾದ ಹೇಳಿದ ಮನೆ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ಹತ್ಯೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಕೆರೂರ ಸಮೀಪದ ರಡ್ಡೇರತಿಮ್ಮಾಪೂರದಲ್ಲಿ ಸೋಮವಾರ ನಡೆದಿದೆ.ರಡ್ಡೇರತಿಮ್ಮಾಪೂರದ ವೆಂಕಣ್ಣ ಫಕೀರೆಡ್ಡಿ ಶೇಶಪ್ಪನವರ (35) ಮೃತಪಟ್ಟ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಐದು ಜನರನ್ನು ಬಂಧಿಸಿದ್ದಾರೆ. ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ. ಈ ಕುರಿತು ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹನಮಂತ ಕೆಂಚಪ್ಪ ನೀಲಾರ ಸೇರಿದಂತೆ ಹಲವರು ಆರೋಪಿಗಳಾಗಿದ್ದಾರೆ.ಏನಿದು ಪ್ರಕರಣ?:
ರಡ್ಡೇರತಿಮ್ಮಾಪೂರ ಗ್ರಾಮದಲ್ಲಿ ಆರೋಪಿ ಹನಮಂತ ನೀಲಾರ ಎಂಬಾತ ಮದ್ಯ ಕುಡಿದು ಖಾಲಿ ಬಾಟಲಿಗಳನ್ನು ವೆಂಕಣ್ಣ ಶೇಶಪ್ಪನವರ ಮನೆ ಮುಂದೆ ಹಾಕುತ್ತಿದ್ದ. ಇಲ್ಲಿ ಖಾಲಿ ಬಾಟಲಿಗಳನ್ನು ಹಾಕಬೇಡ ಎಂದು ಆತ ಹನಮಂತನಿಗೆ ಬುದ್ಧಿವಾದ ಹೇಳಿದ್ದ. ಇದರಿಂದ ಸಿಟ್ಟಿಗೆದ್ದ ಹನಮಂತನ ಹೆಂಡತಿ ಶೈಲಾ ಹನಮಂತ ನೀಲಾರ ತನ್ನ ತವರುಮನೆಯವರನ್ನು ಕರೆಸಿದ್ದಾಳೆ. ನಂತರ ಇವರಿಬ್ಬರು ಸೇರಿದಂತೆ ಒಟ್ಟು 8 ಜನರು ವೆಂಕಣ್ಣನ ಮೇಲೆ ಬಡಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜತೆಗೆ ಪ್ರಜ್ಞೆ ತಪ್ಪುವಂತೆ ಹೊಡೆದಿದ್ದಾರೆ. ಆಗ ವೆಂಕಣ್ಣನನ್ನು ಕೂಡಲೇ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ (ಡಿ.23)ದಂದು ಅಸುನೀಗಿದ್ದಾನೆ. ಈ ಕುರಿತು ವೆಂಕಣ್ಣನ ಸಹೋದರಿ ಲಕ್ಷ್ಮೀ ರಮೇಶ ಹೂಲಿಕಟ್ಟಿ ಕೆರೂರ ಠಾಣೆಗೆ ದೂರು ನೀಡಿದ್ದಾಳೆ.ಗ್ರಾಮಸ್ತರ ಆಕ್ರೋಶ:
ಸುದ್ದಿ ತಿಳಿಯುತ್ತಿದ್ದಂತೆ ರಡ್ಡೇರತಿಮ್ಮಾಪೂರ ಗ್ರಾಮಸ್ಥರು ಕೆರೂರ ಸಮೀಪದ ಬಾದಾಮಿ ಕ್ರಾಸ್‌ನಲ್ಲಿ ರಾ.ಹೆದ್ದಾರಿ 218 ರಲ್ಲಿ ವೆಂಕಣ್ಣನ ಶವವಿಟ್ಟು ಘಟನೆಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಪ್ರತಿಭಟನೆ ನಡೆಸಿದರು. ಜತೆಗೆ ಅಕ್ರಮ ಮದ್ಯ ಮಾರಾಟದಿಂದ ಘಟನೆ ಸಂಭವಿಸಿದ್ದು ಮಾರಾಟ ಮಾಡಿದವರ ಮೇಲೆ ಉಗ್ರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಅಬಕಾರಿ ಇಲಾಖೆ ಏನು ಮಾಡುತ್ತಿದೆ ಎಂದೂ ಅವರು ಹಿಡಿ ಶಾಪ ಹಾಕಿದರು.ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ನಂತರ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಆಗಮಿಸಿ, ಈಗಾಗಲೇ ಘಟನೆ ಕುರಿತು 5 ಜನರನ್ನು ಬಂಧಿಸಿದ್ದೇವೆ. ಕಠಿಣ ಶಿಕ್ಷೆಗೆ ಗುರಿಪಡಿಸಿ ನ್ಯಾಯ ಒದಗಿಸುವ ಭರವಸೆ ನೀಡಿದರು. ನಂತರ ಪರಿಸ್ಥಿತಿ ನಿಯಂತ್ರಣಗೊಂಡಿತು. ಈ ವೇಳೆ ಡಿಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಸಿಪಿಐ ಕರಿಯಪ್ಪ, ಬನ್ನೆ ಪಿಎಸ್‌ಐ ಭೀಮಪ್ಪ ರಬಕವಿ ಸಿಬ್ಬಂದಿ ಇದ್ದರು.
ರಡ್ಡೇರತಿಮ್ಮಾಪೂರದಲ್ಲಿ ನಡೆದ ಜಗಳದಲ್ಲಿ ವೆಂಕಟರೆಡ್ಡಿ ಕೊಲೆಗೆ ಯತ್ನ ನಡೆದು, ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ, ಫಲಿಸದೇ ಡಿ.23 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಪ್ರಕರಣದಲ್ಲಿ ಐವರನ್ನು ಈಗಾಗಲೆ ಬಂಧಿಸಿದ್ದೇವೆ. ಇನ್ನೂ ಮೂವರ ಶೋಧ ನಡೆದಿದೆ. ಇಲಾಖೆ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುತ್ತದೆ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಲಾಗುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಕ್ರಮ ಮಾರಾಟಗಾರರ ಮೇಲೆ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಲ್ಲದೆ ಅಬಕಾರಿ ಇಲಾಖೆಯ ಗಮನಕ್ಕೆ ತರುತ್ತೇನೆ. ಸುತ್ತಲಿನ ಗ್ರಾಮಗಳಲ್ಲಿ ಅಕ್ರಮ ನಡೆಯುತ್ತಿದ್ದರೆ ಕ್ರಮ ಜರುಗಿಸುತ್ತೇವೆ.- ಅಮರನಾಥ ರೆಡ್ಡಿ, ಎಸ್ಪಿ, ಬಾಗಲಕೋಟೆ