ಮೊಬೈಲ್ ಕಳ್ಳನೆಂದು ತಪ್ಪಾಗಿ ಭಾವಿಸಿ ಯುವಕನ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ ಪ್ರಕರಣದ ಸಂಬಂಧ ಸಿಟಿ ಮಾರ್ಕೆಟ್ ಠಾಣೆಯಲ್ಲಿ 8 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೊಬೈಲ್ ಕಳ್ಳನೆಂದು ತಪ್ಪಾಗಿ ಭಾವಿಸಿ ಯುವಕನ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ ಪ್ರಕರಣದ ಸಂಬಂಧ ಸಿಟಿ ಮಾರ್ಕೆಟ್ ಠಾಣೆಯಲ್ಲಿ 8 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಫುಟ್‌ಪಾತ್ ವ್ಯಾಪಾರಿ ಶಾಹಿದ್ (19) ಹಲ್ಲೆಗೊಳಗಾದವನು. ಶಾಹಿದ್ ಎಂಬಾತ ನೀಡಿದ ದೂರಿನನ್ವಯ 8 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅ.20 ಸಿಟಿ ಮಾರ್ಕೆಟ್‌ನ ಆರ್.ಟಿ.ಸ್ಟ್ರೀಟ್‌ನಲ್ಲಿ ಪಾದಚಾರಿಯೊಬ್ಬ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುವಾಗ ಅವರಿಗೆ ಬೈಕ್‌ವೊಂದು ತಾಗಿ ಮೊಬೈಲ್ ಕೆಳಗೆ ಬಿದ್ದಿದೆ. ಕೂಡಲೇ ಆ ಮೊಬೈಲ್ ಅನ್ನು ತೆಗೆದುಕೊಡಲು ಶಾಹಿದ್ ಮುಂದಾಗುತ್ತಿದ್ದಂತೆ ಆತನನ್ನು ಮೊಬೈಲ್ ಕಳ್ಳನೆಂದು ತಪ್ಪಾಗಿ ಭಾವಿಸಿದ ಸ್ಥಳೀಯರು ಮನಬಂದಂತೆ ಅಟ್ಟಾಡಿಸಿಕೊಂಡು ಥಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿದ್ದ ಶಾಹಿದ್ ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದಾರೆ.
ಈ ಬಗ್ಗೆ ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಎಂಟು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಘಟನಾ ಸ್ಥಳದಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲ್ಲೆಯ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.