ಪಿಡಿಒ ವಿರುದ್ಧ ಗ್ರಾಮಸ್ಥರಿಂದ ಆಕ್ರೋಶ

| Published : Nov 01 2025, 01:15 AM IST

ಸಾರಾಂಶ

ಪಂ ಸದಸ್ಯ ಸಭೆಗೆ ಆಗಮಿಸಿದ ಸದಸ್ಯರಿಂದ ಬಲವಂತವಾಗಿ ಮೊಬೈಲ್ ಪಡೆಯುವುದರ ಜತೆಗೆ ಸಭಾ ನಡವಳಿಯನ್ನು ಧಿಕ್ಕರಿಸಿ ದುಂಡಾವರ್ತನೆ ತೋರುತ್ತಾರೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಪಂ ಪಿಡಿಒ ಸಂದೀಪ್ ಚುನಾಯಿತ ಸದಸ್ಯರು ಮತ್ತು ಸಾರ್ವಜನಿಕರೊಂದಿಗೆ ಉಡಾಫೆಯಿಂದ ವರ್ತಿಸುತ್ತಾ ಕಚೇರಿಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮದ ಮುಖ್ಯ ವೃತ್ತದಲ್ಲಿ ಪಿಡಿಒ ವರ್ತನೆ ಖಂಡಿಸಿ ಗ್ರಾಪಂ ಸದಸ್ಯರಾದ ಅಣ್ಣಯ್ಯ, ಸುಶೀಲ, ರೂಪ, ಸಿಂಧು ಮತ್ತು ಯುವ ಮುಖಂಡ ಎಂ.ಎಸ್. ಹೇಮಂತ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಪಿಡಿಒ ಸಂದೀಪ್ ವಿರುದ್ದ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು, ಗ್ರಾಪಂ ಸದಸ್ಯ ಸಭೆಗೆ ಆಗಮಿಸಿದ ಸದಸ್ಯರಿಂದ ಬಲವಂತವಾಗಿ ಮೊಬೈಲ್ ಪಡೆಯುವುದರ ಜತೆಗೆ ಸಭಾ ನಡವಳಿಯನ್ನು ಧಿಕ್ಕರಿಸಿ ದುಂಡಾವರ್ತನೆ ತೋರುತ್ತಾರೆ ಎಂದರು.ಪಂಚಾಯಿತಿ ಕಚೇರಿ ಭ್ರಷ್ಟಾಚಾರದ ಕೇಂದ್ರವಾಗಿದ್ದು, ಸಂಬಂಧಿತಇಲಾಖೆಯ ಮೇಲಾಧಿಕಾರಿಗಳಿಗೆ ಈ ಸಂಬಂಧ ದೂರು ನೀಡಿದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಇದನ್ನು ಸರಿಪಡಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.ಕಚೇರಿಗೆ ನಿತ್ಯ ಬರುವ ರೈತರು ಮತ್ತು ನಾಗರೀಕರೊಂದಿಗೆ ಅಸೌಜನ್ಯದಿಂದ ವರ್ತಿಸಿ ನಿತ್ಯ ಜನರಿಗೆ ಕಿರುಕುಳ ನೀಡುತ್ತಿರುವ ಪಿಡಿಒ ಸಂದೀಪ್ ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.ಪ್ರತಿ ಕೆಲಸಗಳಿಗೂ ಇಂತಿಷ್ಟು ಹಣ ಎಂದು ನಿಗದಿ ಮಾಡಿಕೊಂಡಿರುವ ಪಿಡಿಒ ಮತ್ತು ಕಚೇರಿಯ ಸಿಬ್ಬಂದಿ ಶ್ರೀಧರ್ ಮತ್ತಿತರರು ಸಾರ್ವಜನಿಕರನ್ನು ಏಕವಚನದಲ್ಲಿ ಮಾತನಾಡಿಸುವುದರ ಜತೆಗೆ ಕಚೇರಿಗೆ ಬಂದು ಜೊರಾಗಿ ಮಾತನಾಡಿದರೆ ಹೊರಗೆ ದಬ್ಬುತ್ತೇವೆ ಮತ್ತು ಠಾಣೆಗೆ ದೂರು ನೀಡುವ ಬೆದರಿಕೆ ಹಾಕುತ್ತಾರೆ ಎಂದು ತಿಳಿಸಿದರು.ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಪಂ ಸದಸ್ಯ ಹರೀಶ್ ಅವರು ತಮ್ಮ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಬಿಡುಗಡೆ ಮಾಡಿ ಅವರ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿರುವ ಸಂದೀಪ್ ಅದಕ್ಕೂ ಮೊದಲು ಸದಸ್ಯನ ಕೊರಳಹ ಪಟ್ಟಿ ಹಿಡಿದು ಅವಾಚ್ಯವಾಗಿ ನಿಂದಿರುವ ಪಿಡಿಒ ತಮಗೆ ಬೇಕಾದ ವಿಡಿಯೋ ಹರಿಬಿಟ್ಟು ರಾಜಕಾರಣಿಯಂತೆ ವರ್ತಿಸುತ್ತಿದ್ದು, ಇದು ನಾಚಿಕೆ ಗೇಡಿನ ಸಂಗತಿ ಎಂದು ಟೀಕಿಸಿದರು.ಪಿಡಿಒ ಸಂದೀಪ್ ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಿ ಪಂಚಾಯಿತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದ ಪ್ರತಿಭಟನಾಕಾರರು ಸದಸ್ಯ ಹರೀಶ್ ಅವರೊಂದಿಗೆ ಮೊಬೈಲ್ ನಲ್ಲಿ ಪಿಡಿಒ ಮಾತನಾಡುವಾಗ ಶಾಸಕ ಡಿ. ರವಿಶಂಕರ್ ಅವರನ್ನು ಅವಾಚ್ಯಶಬ್ದಗಳಿಂದ ನಿಂದಿಸಿರುವ ಆಡಿಯೋ ಬಿಡುಗಡೆ ಮಾಡಿದರು. ಗ್ರಾಮದ ಮುಖಂಡರಾದ ಅಭಿಷೇಕ್, ರಾಜು, ಬಸಂತ್, ಆನಂದ್, ಸುನೀಲ್, ರಮೇಶ್, ರಾಘು, ಹರೀಶ್, ಮಂಜು, ಮೂವತ್ತಕ್ಕು ಅಧಿಕ ಮಂದಿ ಇದ್ದರು.