ಸಾರಾಂಶ
ಸನಾತನ ಧರ್ಮವನ್ನು ಅಪವಿತ್ರ ಮಾಡಲೆತ್ನಿಸುವವರ ವಿರುದ್ದ ಹೋರಾಟ ನಿಶ್ಚಿತ
ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿಸರ್ಕಾರ ವಕ್ಫ್ ನೆಪದಲ್ಲಿ ರೈತರ ಮತ್ತು ಮಠಾಧೀಶರ ಜಮೀನುಗಳಿಗೆ ಕೈ ಹಾಕಿದ್ದು ಎಷ್ಟರಮಟ್ಟಿಗೆ ಸಮಂಜಸ, ಈ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆಯೇ ತಕ್ಕಪಾಠ ಕಲಿಸಲಿದ್ದಾರೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.ಪಟ್ಟಣದ ಹಿಂದೂ ಮಹಾಗಣಪತಿ ಸಮಿತಿ ೧೨ನೇ ವರ್ಷದ ಗಣೇಶೋತ್ಸವದ ಧರ್ಮ ಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ನಾನು ಮುಸ್ಲಿಂ ವಿರೋಧಿಯಲ್ಲ. ಆದರೆ, ನಮ್ಮ ದೇಶದ ಅನ್ನ ನೀರು ಸೇವಿಸಿ ಪಾಕಿಸ್ತಾನಕ್ಕೆ ಜೈ ಎನ್ನುವಂತಹ ದೇಶದ್ರೋಹಿಗಳನ್ನು ವಿರೋಧಿಸುತ್ತೇನೆ. ನಮ್ಮವರು ಅಡ್ಜಸ್ಟ್ಮೆಂಟ್ ಬಿಟ್ಟು ಧರ್ಮ ಉಳಿಸಲು ಒಂದಾಗಬೇಕು. ಸನಾತನ ಧರ್ಮವನ್ನು ಅಪವಿತ್ರ ಮಾಡುವವರನ್ನು, ಧರ್ಮವನ್ನು ಅವಹೇಳನ ಮಾಡುವವರ ವಿರುದ್ಧ ಹೋರಾಟ ನಿಶ್ಚಿತ. ರಾಜ್ಯದಲ್ಲಿ ಎಲ್ಲ ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತ ನಾಯಕತ್ವ ಬೇಕಿದೆ. ಧರ್ಮಸ್ಥಳದ ಸಮೀರ್‌ಗೆ ಗುಡ್ ಎಂದು ಲೈಕ್ ಕೊಟ್ಟವರು ನಮ್ಮವರೇ. ಗಣಪತಿ ಉತ್ಸವಕ್ಕೆ ನೂರಾರು ಕಂಡೀಷನ್ ಹಾಕ್ತಾರೆ. ಆದರೆ, ದಿನಕ್ಕೆ ಐದು ಭಾರಿ ಮೈಕ್ ಹಾಕುವವರಿಗೆ ಏನೂ ಅನ್ನೋಲ್ಲ. ಸನಾತನ ಧರ್ಮ ವಸುದೈವ ಕುಟುಂಬಕಂ ಪ್ರತಿಪಾದಿಸುತ್ತದೆ ಎಂದರು.ಉಚ್ಚಾಟಿತರು, ಪಾಪುಲರ್:ಸಿಎಂ ಅವರು ಸದನದಲ್ಲಿ ನನಗೆ ಯತ್ನಾಳ್ ನೀವು ಉಚ್ಚಾಟಿತರಾಗಿದ್ದೀರಿ ಎಂದು ತಿಳಿಸಿದಾಗ, ನಿಮ್ಮನ್ನೂ ದೇವೇಗೌಡ ಉಚ್ಚಾಟಿಸಿದ್ದರು ಸಿಎಂ ಆದಿರಿ. ಯಡಿಯೂರಪ್ಪ ಅವರನ್ನೂ ಉಚ್ಛಾಟಿಸಿದ್ದರು ಸಿಎಂ ಆದರು. ಒಮ್ಮೆ ಕುಮಾರಸ್ವಾಮಿಯನ್ನು ಉಚ್ಛಾಟಿಸಲಾಗಿತ್ತು, ಸಿಎಂ ಆದರು. ಈಗ ನನ್ನ ಸರದಿ ನನ್ನನ್ನೂ ಉಚ್ಛಾಟಿಸಲಾಗಿದೆ ೨೦೨೮ಕ್ಕೆ ನೋಡಬೇಕು ಸಿಎಂ ಆಗ್ತೀನೇನೋ ಎಂದಾಗ ನೆರೆದ ಜನರು ನೀವು ಸಿಎಂ ಆಗೋದು ಫಿಕ್ಸ್ ಎಂದು ಜೋರಾಗಿ ಕೂಗಿದರು. ಬಿಜೆಪಿಯಿಂದ ಉಚ್ಛಾಟನೆ ಆದ ನಂತರ ಬಹಳಾ ಪಾಪ್ಯುಲರ್ ಆಗಿರಿ ಎಂದು ಜನರು ಹೇಳುತ್ತಾರೆ, ನಿಜ ಅಂದ್ರೆ ನಮ್ಮವರು ನಾನು ಪಾಪ್ಯುಲರ್ ಆಗಲೀ ಅಂತಾನೆ ಉಚ್ಚಾಟನೆ ಮಾಡಿದ್ದಾರೆ ಎಂದರು. ಪಾಕ್ ಮೇಲಿನ ಯುದ್ಧ ನಮಗೊಂದು ಪ್ರಯೋಗಾಲಯ ಇದ್ದಂತೆ, ನೋಡಿದ್ರಲ್ಲ ಚೀನಾ ಡ್ರೋನ್‌ಗಳು ಹೆಂಗ ಟುಸ್ ಪಟಾಕಿ ಆದವು ಎಂದು ಮಾರ್ಮಿಕಾಗಿ ನುಡಿದರು.ಅಭಿನವ ಹಾಲವೀರಪ್ಪಜ್ಜ ಸಾನ್ನಿಧ್ಯ ವಹಿಸಿ ಮಾತನಾಡಿ, ರಾಜ್ಯದಲ್ಲಿ ಗೃಹ ಇಲಾಖೆ ಆಳುವ ಮಂತ್ರಿ ಅಷ್ಟೇನೂ ಸಮರ್ಥರಲ್ಲ. ರಾಜ್ಯದಲ್ಲಿ ಇಂಟಲಿಜೆನ್ಸಿ ಸತ್ತು ಹೋಗಿದೆ. ರಾಜ್ಯದಲ್ಲಿ ಧರ್ಮಸ್ಥಳ ಸಮೀರನ ಸರ್ಕಾರವಿದೆ. ಧಾರ್ಮಿಕ ಶ್ರದ್ಧಾಕೇಂದ್ರದ ಬಗ್ಗೆ ಕೆಟ್ಟದಾಗಿ ಬಿಂಬಿಸಿದಾಗ ನೋಡಿ ನಕ್ಕ ಸಮಾಜ ನಮ್ಮದೇ ಎಂಬುದು ದುರಂತದ ಸಂಗತಿಯಾಗಿದೆ ಎಂದರು.ಶಾಸಕ ನೇಮರಾಜ ನಾಯ್ಕ ಮಾತನಾಡಿದರು.ಈ ಸಂದರ್ಭ ಪುರಸಭೆ ಸದಸ್ಯರಾದ ಬಣಕಾರ ಸುರೇಶ್, ನಾಗರಾಜ ಜನ್ನು, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್, ಧರ್ಮದರ್ಶಿ ಕೃಷ್ಣಮೂರ್ತಿ, ಮಾಜಿ ಸದಸ್ಯ ಬದಾಮಿ ಮೃತ್ಯುಂಜಯ, ಮುಖಂಡರಾದ ಚಿಂತ್ರಪಳ್ಳಿ ನಾಗರಾಜ, ಶಿವಶಂಕ್ರಯ್ಯ, ಕನ್ನಿಹಳ್ಳಿ ಚಂದ್ರಶೇಖರ ಇತರರಿದ್ದರು. ಸಮಿತಿಯ ಸಂಚಾಲಕ ಟಿ.ಎಚ್.ಎಂ. ನಾಗರಾಜ, ಸದಸ್ಯ ಚಂದ್ರಶೇಖರ, ಸಂತೋಷ್ ಪೂಜಾರ್ ನಿರ್ವಹಿಸಿದರು.