ಮಾತೆಂಬುದು ಜ್ಯೋತಿರ್ಲಿಂಗ ಎಂದು ಸಾರಿದ ಶರಣರು

| Published : May 01 2025, 12:51 AM IST

ಸಾರಾಂಶ

ಕನ್ನಡನಾಡಿನ ಶಿಕಾರಿಪುರದ ಹತ್ತಿರ ಉಡತಡಿಯಲ್ಲಿ ಜನ್ಮತಾಳಿದ ಅಕ್ಕಮಹಾದೇವಿ 8ನೇ ವರ್ಷದಲ್ಲಿ ಲಿಂಗದೀಕ್ಷೆ ಪಡೆದುಕೊಳ್ಳುತ್ತಾಳೆ. ನರಜನ್ಮವ ತೊರೆದು, ಹರಜನ್ಮವ ಮಾಡಿದ ಗುರುವೇ, ಬವಿ ಎಂಬುದು ಬಿಡಿಸಿ, ಭಕಿ ಎಂದೆನಿಸಿದ ಗುರುವೆ ಎನ್ನುತ್ತ, ವೈರಾಗ್ಯನಿಧಿಯಾದ ಅಕ್ಕ ಶರಣ ಸಂಕುಲದ ಪ್ರಥಮ ವಚನಗಾರ್ತಿಯಾದಳು.

ನರಗುಂದ:

ಮಾತು ಹಿತ-ಮಿತವಾಗಿರಲಿ, ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು, ಮಾತು ಬೆಳ್ಳಿ ಮೌನ ಬಂಗಾರ, ನಾವಾಡುವ ಮಾತು ಹೀಗಿರಲಿ ಗೆಳೆಯ ಮೂಲೋಕ ಮೆಚ್ಚುವಂತಿರಬೇಕು ಎಂದಲ್ಲ ಹೇಳುತ್ತಾರೆ. ಆದರೆ ನಮ್ಮ ಶರಣರು ಮಾತೆಂಬುದು ಜ್ಯೋತಿರ್ಲಿಂಗ ಎನ್ನುವ ಮೂಲಕ ಮಾತಿಗಿರುವ ಗೌರವ ಮತ್ತು ಮೌಲ್ಯ ತಿಳಿಸಿದ್ದಾರೆ ಎಂದು ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಶಶಿಧರ ಶಾಸ್ತ್ರೀಗಳು ಹಿರೇಮಠ ಹೇಳಿದರು.

ಅವರು ತಾಲೂಕಿನ ಶಿರೋಳ ಗ್ರಾಮದ ಶ್ರೀ ತೋಂಟದಾರ್ಯ ಮಠದ ಶಿಲಾಮಂಟಪ ಮತ್ತು ಗೋಪುರ ಲೋಕಾರ್ಪಣೆ ನಿಮಿತ್ತ ನಡೆದ 27ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ,

ಕನ್ನಡನಾಡಿನ ಶಿಕಾರಿಪುರದ ಹತ್ತಿರ ಉಡತಡಿಯಲ್ಲಿ ಜನ್ಮತಾಳಿದ ಅಕ್ಕಮಹಾದೇವಿ 8ನೇ ವರ್ಷದಲ್ಲಿ ಲಿಂಗದೀಕ್ಷೆ ಪಡೆದುಕೊಳ್ಳುತ್ತಾಳೆ. ನರಜನ್ಮವ ತೊರೆದು, ಹರಜನ್ಮವ ಮಾಡಿದ ಗುರುವೇ, ಬವಿ ಎಂಬುದು ಬಿಡಿಸಿ, ಭಕಿ ಎಂದೆನಿಸಿದ ಗುರುವೆ ಎನ್ನುತ್ತ, ವೈರಾಗ್ಯನಿಧಿಯಾದ ಅಕ್ಕ ಶರಣ ಸಂಕುಲದ ಪ್ರಥಮ ವಚನಗಾರ್ತಿಯಾದಳು. ವಯಸ್ಕಳಾದ ಅಕ್ಕ ಮಹಾದೇವಿಗೆ ಜೈನ ಧರ್ಮದ ಕೌಶಿಕ ಮಹಾರಾಜರೊಂದಿಗೆ ವಿವಾಹವಾಯಿತು. ಲಿಂಗಾಯತ ಧರ್ಮದ ಅಕ್ಕ ಮಹಾದೇವಿ ಹೇಳುವಂತೆ ಧರ್ಮಿಗೊಂದು ಚಿಂತೆ, ಕರ್ಮಿಗೊಂದು ಚಿಂತೆ, ಮರವಿದ್ದು ಫಲವೇನು, ನೆರಳಿಲ್ಲದೆನ್ನಕ್ಕ, ಸಜ್ಜನಳಾಗಿ ಮಜ್ಜನಕೆರೆವೆ, ಮನೆ ಮನೆ ಕೈವೊಡ್ಡಿ ಬೇಡುವಂತೆ ಮಾಡು, ಬೇಡಿದಡೆ ಇಕ್ಕದಂತೆ ಮಾಡು, ಇಕ್ಕಿದೊಡೆ ನೆಲಕ್ಕೆ ಬೀಳುವಂತೆ ಮಾಡು, ನಾನೆತ್ತುವ ಮುನ್ನ ಸುನಿ ಎತ್ತಿಕೊಂಡು ಹೋಗುವಂತೆ ಮಾಡು ಎಂದು ವೈರಾಗ್ಯ ಭಾವದ ಅಕ್ಕ ಚನ್ನಮಲ್ಲಿಕಾರ್ಜುನನ್ನೆ ಬೇಡುತ್ತಾಳೆ. ಅನುಭವ ಮಂಟಪದಲ್ಲಿರುವ ಅಲ್ಲಮಪ್ರಭುಗಳು ಅಕ್ಕನ ಇರುವ ತಿಳಿದು ಇನ್ನೆರಡು ದಿನಗಳಲ್ಲಿ ಶರಣರ ಸಂಗಮಕ್ಕೆ ವೈರಾಗ್ಯ ನಿಧಿಯೊಂದು ಸೇರಲಿದೆ ಎನ್ನುತ್ತಾರೆ ಎಂದು ಹೇಳಿದರು.

ಚಿತ್ತರಗಿ ಇಲಕಲ್ಲ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಶ್ರೀಗಳು ಮಾತನಾಡಿ, ಶರಣರ ಜೀವನದರ್ಶನ ಆಲಿಸುವುದು ಶ್ರವಣ ಭಕ್ತಿ, ಒಳ್ಳೆಯ ಸತಿ-ಸುತರಿರಲು ಪುಣ್ಯ ಬೇಕು, ಭಕ್ತಿ ಕೆಟ್ಟರೆ, ಪುಣ್ಯ ಕೆಡುತ್ತದೆ. ಪುಣ್ಯ ಕೆಟ್ಟರೆ, ಸಕಲವೂ ಕೆಟ್ಟಂತೆ, ಸಂಸಾರ ಎಂದರೆ ಕಷ್ಟ-ಸುಖಗಳ ಆಗರ, ಇಷ್ಟಲಿಂಗಧಾರಿಗಳ ಕಷ್ಟ ಬೇಗ ಪರಿಹಾರವಾಗುತ್ತದೆ. ಮನಸ್ಸನ್ನು ಹತೋಟಿಯಲ್ಲಿಡುವ ಶಕ್ತಿ ಇಷ್ಟಲಿಂಗಕ್ಕಿದೆ. ಎಲ್ಲರೂ ಇಷ್ಟಲಿಂಗಧಾರಿಗಳಾಗಬೇಕು. ಲಿಂಗಪೂಜೆ ಮಾಡಿದರೆ ಶಿವನೊಲುಮೆ ಸಾಧ್ಯ ಎಂದರು.

ಶಾಂತಲಿಂಗ ಶ್ರೀಗಳು, ವಿ.ಕೆ. ಮರೆಗುದ್ದಿ, ಶಿವಾನಂದ ಯಲಿಬಳ್ಳಿ, ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡಮನಿ, ಶಿವಪ್ಪ ಹುಳ್ಳಿ, ನಾಗನಗೌಡ ತಿಮ್ಮನಗೌಡ್ರ, ಗುರುಬಸವ ಶೆಲ್ಲಿಕೇರಿ, ಗುರುಬಸಯ್ಯ ನಾಗಲೊಟಿಮಠ, ಲೋಕಪ್ಪ ಕರಕೀಕಟ್ಟಿ, ಬಸಣ್ಣ ಕುಪ್ಪಸ್ತ, ಪ್ರಭಾಕರ ಉಳ್ಳಾಗಡ್ಡಿ ಇದ್ದರು.