ಸಮೀಕ್ಷೆಗೆ ಬೆಳಗ್ಗೆ 6ಕ್ಕೆ ಬರಲು ಹೇಳ್ತಾರೆ!

| Published : Oct 01 2025, 01:00 AM IST

ಸಾರಾಂಶ

ಸಾಕಷ್ಟು ವಿರೋಧದ ನಡುವೆಯೇ ರಾಜ್ಯ ಸರ್ಕಾರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ಈ ಗಣತಿ ನಡೆಸುತ್ತಿದೆ. ಇದಕ್ಕೆ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕ- ಶಿಕ್ಷಕಿಯರನ್ನು ಗಣತಿದಾರರನ್ನಾಗಿ ನೇಮಿಸಿದರೆ, ಪ್ರೌಢಶಾಲಾ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ, ಅವರ ಮೇಲೆ ನೋಡಲ್‌ ಅಧಿಕಾರಿಗಳನ್ನು ಹೀಗೆ ಬೇರೆ ಬೇರೆ ಹಂತಗಳಲ್ಲಿ ನೇಮಿಸಲಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಬೆಳ್ಳಂಬೆಳಗ್ಗೆ 6ಕ್ಕೆ ಬರಬೇಕು ಅಂತ ಹೇಳಿದ್ರೆ ಹೇಗೆ ಮಾಡೋದು ಸಾರ್‌.. ಅಷ್ಟೊತ್ತಿಗೆ ಯಾರ ಮನೆಯಲ್ಲಿ ಮಾಹಿತಿ ನೀಡ್ತಾರೆ, ಎಷ್ಟೋ ಜನ ಇನ್ನೂ ಎದ್ದಿರುವುದೇ ಇಲ್ಲ.. ರಾತ್ರಿಯೇ ಮೇಸೆಜ್‌ ಮಾಡ್ತಾರೆ!

ಇದು ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ನೇಮಕಗೊಂಡಿರುವ ಶಿಕ್ಷಕಿಯರ ಪ್ರಶ್ನೆ. ಸಾಕಪ್ಪ ಸಾಕು ಈ ಸಮೀಕ್ಷೆ ಎಂಬುದು ಶಿಕ್ಷಕಿಯರ ಅಳಲು.

ಸಾಕಷ್ಟು ವಿರೋಧದ ನಡುವೆಯೇ ರಾಜ್ಯ ಸರ್ಕಾರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ಈ ಗಣತಿ ನಡೆಸುತ್ತಿದೆ. ಇದಕ್ಕೆ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕ- ಶಿಕ್ಷಕಿಯರನ್ನು ಗಣತಿದಾರರನ್ನಾಗಿ ನೇಮಿಸಿದರೆ, ಪ್ರೌಢಶಾಲಾ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ, ಅವರ ಮೇಲೆ ನೋಡಲ್‌ ಅಧಿಕಾರಿಗಳನ್ನು ಹೀಗೆ ಬೇರೆ ಬೇರೆ ಹಂತಗಳಲ್ಲಿ ನೇಮಿಸಲಾಗಿದೆ. ಪ್ರತಿಯೊಬ್ಬ ಗಣತಿದಾರ 150 ಮನೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಗಣತಿಗೆ ಕಟ್ಟಪ್ಪಣೆ:

ಸೆ. 22ರಿಂದ ಆರಂಭವಾಗಿರುವ ಸಮೀಕ್ಷೆ ಮೊದಲು ಅತ್ಯಂತ ನಿಧಾನಗತಿಯಲ್ಲಿ ಸಾಗಿತು. ತದನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಬಂಧಪಟ್ಟ ಸಚಿವರು ತ್ವರಿತಗತಿಯಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಸಿಇಒ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದರಿಂದ ಗಣತಿದಾರರಿಗೆ ಬೆಳಗ್ಗೆ 6ಕ್ಕೇ ಗಣತಿ ಶುರು ಮಾಡಬೇಕು. ಪ್ರತಿದಿನ ಇಂತಿಷ್ಟು ಮುಗಿಸಲೇಬೇಕು ಎಂದು ಕಟ್ಟಪ್ಪಣೆ ಮಾಡುತ್ತಿದ್ದಾರೆ.

ಪ್ರತಿದಿನ 8ರಿಂದ 9ಗಂಟೆಗೆ ಗಣತಿ ಕಾರ್ಯ ತೆರಳುತ್ತಿದ್ದರು. ಆದರೆ, ಇದೀಗ ಬೆಳಗ್ಗೆ 6ಗಂಟೆಗೆ ಗಣತಿ ಕಾರ್ಯ ಶುರು ಮಾಡುವಂತೆ ಸೂಚಿಸಲಾಗುತ್ತಿದೆ. ಜತೆಗೆ ಆಗಾಗ ಅಷ್ಟು ಬೆಳಗ್ಗೆ ಜಿಲ್ಲಾಧಿಕಾರಿ, ಸಿಇಒ ಪರಿಶೀಲನೆಗೆ ಬರುತ್ತಾರೆ. ಕಡ್ಡಾಯವಾಗಿ ಬರಲೇಬೇಕು ಮತ್ತು ಗಣತಿ ಕಾರ್ಯ ಶುರು ಮಾಡಲೇಬೇಕು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತಿದೆ. ಈ ಸಂಬಂಧ ವ್ಯಾಟ್ಸ್‌ಆ್ಯಪ್‌ಗಳಲ್ಲಿ ಸಂದೇಶ ರವಾನಿಸಲಾಗುತ್ತಿದೆ. ಮಧ್ಯಾಹ್ನ ಹೋದರೆ ಸರಿಯಾಗಿ ಮಾಹಿತಿ ನೀಡುವುದಿಲ್ಲ. ಇನ್ನು ಬೆಳಗ್ಗೆ 6ಕ್ಕೆ ಹೋದರೆ ಅದ್ಯಾರು ಮಾಹಿತಿ ನೀಡುತ್ತಾರೆ? ಕೆಲವರು ಇನ್ನೂ ಎದ್ದಿರುವುದಿಲ್ಲ, ನಮ್ಮನ್ನೇ ಬೈದು ಕಳುಹಿಸುತ್ತಾರೆ. ನಮ್ಮ ಮನೆಗಳಲ್ಲೂ ಕೆಲಸ ಕಾರ್ಯ ಇರುವುದಿಲ್ಲವೇ? ನಮಗೂ ಗಂಡ, ಸಣ್ಣ ಸಣ್ಣ ಮಕ್ಕಳು, ವಯಸ್ಸಾದ ಅತ್ತೆ- ಮಾವ ಇರುತ್ತಾರೆ. ಅಷ್ಟು ಬೆಳಗ್ಗೆ ಮನೆಯಲ್ಲಿನ ಕೆಲಸಗಳನ್ನು ಮುಗಿಸಿಕೊಂಡು ಬರಲು ಸಾಧ್ಯವೇ? ಎಂಬ ಪ್ರಶ್ನೆ ಶಿಕ್ಷಕಿಯರದ್ದು. ಶಿಕ್ಷಕಿಗೆ ನೂರೆಂಟು ರಗಳೆ:

ಶಿಕ್ಷಕರಾದರೆ ಹೇಗೋ ಬಂದು ಬಿಡಬಹುದು. ಆದರೆ, ಶಿಕ್ಷಕಿಯರು ಹಾಗೆ ಬರಲು ಆಗದು. ಮನೆಯಲ್ಲಿನ ಕೆಲಸ-ಕಾರ್ಯ ಮುಗಿಸಿಕೊಂಡೇ ಬರಬೇಕು. ಏನಾದರೂ ನಮ್ಮ ಸಮಸ್ಯೆಗಳನ್ನು ಹೇಳಿದರೆ ಕರ್ತವ್ಯ ಲೋಪದ ಪಟ್ಟ ಕಟ್ಟಿ ಅಮಾನತಿನ ಶಿಕ್ಷೆ ಕೊಡುತ್ತಾರೆ. ಹೀಗಾದರೆ ಹೇಗೆ ಮಾಡಬೇಕು ಎಂಬುದು ಶಿಕ್ಷಕಿಯರ ಪ್ರಶ್ನೆ.

ಶಿಕ್ಷಕಿಯರಿಗೂ ಸಾಕಷ್ಟು ಸಮಸ್ಯೆಗಳಿರುತ್ತವೆ. ಅವುಗಳನ್ನು ಸ್ವಲ್ಪ ಅರಿತುಕೊಂಡು ಇಷ್ಟೊತ್ತಿಗೆ ಬರಲೇಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಬಾರದು. ಜತೆಗೆ ಸಮೀಕ್ಷೆಯ ಅವಧಿಯನ್ನು ಕೆಲದಿನದ ಮಟ್ಟಿಗೆ ವಿಸ್ತರಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಒಕ್ಕೊರಲಿನ ಆಗ್ರಹ ಕೇಳಿಬರುತ್ತಿದೆ.ಜಿಲ್ಲೆಯಲ್ಲಿ ಈ ವರೆಗೆ (ಸೆ.30) ಸರಿಸುಮಾರು 50 ಸಾವಿರ ಮನೆಗಳಿಗೆ ಭೇಟಿ ನೀಡಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಆದರೆ ಬೆಳಗ್ಗೆ 6 ಗಂಟೆಗೆ ಸಮೀಕ್ಷೆಗೆ ಹೋಗಬೇಕು ಎಂದು ಯಾವ ಗಣತಿದಾರರಿಗೂ ಹೇಳಿಲ್ಲ. ಆದರೆ, ಬೆಳಗ್ಗೆ ಸರ್ವರ್‌ ಅಷ್ಟೊಂದು ಸಮಸ್ಯೆಯಾಗಲ್ಲ. ಹೀಗಾಗಿ ಆದಷ್ಟು ಬೇಗನೆ ಹೋಗಿ ಎಂದಷ್ಟೇ ಹೇಳುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.