ಬಿಜೆಪಿ-ಜೆಡಿಎಸ್‌ ಜಗಳದಿಂದ ಅವರಿಗೆ ಲಾಭ: ಸಿಪಿವೈ

| Published : Mar 29 2024, 12:54 AM IST

ಸಾರಾಂಶ

ಚನ್ನಪಟ್ಟಣ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕನಕಪುರದಲ್ಲಿ ಅವರಿಗೆ ಹೆಚ್ಚು ಮತ ಬರುತ್ತದಾ? ಚನ್ನಪಟ್ಟಣದಲ್ಲಿ ನಮಗೆ ಜಾಸ್ತಿ ಮತ ಬರುತ್ತದಾ ಎಂಬುದು ನಮ್ಮ ಮುಂದಿರುವ ಸವಾಲು. ಎರಡು ಪಕ್ಷದ ಕಾರ್ಯಕರ್ತರು ಮೈಚಳಿ ಬಿಟ್ಟು ಕೆಲಸ ಮಾಡಿದರೆ ಚನ್ನಪಟ್ಟಣದಲ್ಲಿ ನಾವು ಕಡಿಮೆಯೆಂದರೂ 1.20 ಲಕ್ಷ ಮತ ಪಡೆಯಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಚನ್ನಪಟ್ಟಣ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕನಕಪುರದಲ್ಲಿ ಅವರಿಗೆ ಹೆಚ್ಚು ಮತ ಬರುತ್ತದಾ? ಚನ್ನಪಟ್ಟಣದಲ್ಲಿ ನಮಗೆ ಜಾಸ್ತಿ ಮತ ಬರುತ್ತದಾ ಎಂಬುದು ನಮ್ಮ ಮುಂದಿರುವ ಸವಾಲು. ಎರಡು ಪಕ್ಷದ ಕಾರ್ಯಕರ್ತರು ಮೈಚಳಿ ಬಿಟ್ಟು ಕೆಲಸ ಮಾಡಿದರೆ ಚನ್ನಪಟ್ಟಣದಲ್ಲಿ ನಾವು ಕಡಿಮೆಯೆಂದರೂ 1.20 ಲಕ್ಷ ಮತ ಪಡೆಯಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಹರೂರು ಮೊಗೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬೇವೂರು ಜಿಪಂ ವ್ಯಾಪ್ತಿಯ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಮಾವೇಶದಲ್ಲಿ ಮಾತನಾಡಿದ ಅವರು, ಅವರು ದಬ್ಬಾಳಿಕೆ, ದೌರ್ಜನ್ಯ ಅಕ್ರಮ ಚುನಾವಣೆ ನಡೆಸಿ ಕನಕಪುರದಲ್ಲಿ ಜಾಸ್ತಿ ಮತ ಪಡೆಯುತ್ತಾರಾ? ಎರಡು ಪಕ್ಷದ ಕಾರ್ಯಕರ್ತರು ಸೇರಿ ಪ್ರಾಮಾಣಿಕವಾಗಿ ಡಾ. ಮಂಜುನಾಥ್‌ಗೆ ಹೆಚ್ಚು ಮತ ಕೊಡಿಸುತ್ತೇವಾ ಎಂಬುದು ಸವಾಲಾಗಿದೆ ಎಂದರು.

ಕನಕಪುರದಲ್ಲಿ ಸ್ವಲ್ಪ ಮುಂದಿರುವುದು ಬಿಟ್ಟರೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಮಿಕ್ಕ ಏಳು ಕ್ಷೇತ್ರಗಳಲ್ಲೂ ನಾವು ಮುಂದಿದ್ದೇವೆ. ಜೆಡಿಎಸ್-ಬಿಜೆಪಿ ಒಂದಾಗಿರುವುದರಿಂದ ನಮ್ಮ ಬಲ ಹೆಚ್ಚಳಗೊಂಡಿದೆ. ಆರ್‌ಆರ್ ನಗರದ ಮುನಿರತ್ನ ಈ ಬಾರಿ ನಮ್ಮ ಜತೆ ಇರುವುದರಿಂದ ಅಲ್ಲೂ ಮೈತ್ರಿ ಅಭ್ಯರ್ಥಿಗೆ ಲೀಡ್ ಆಗಲಿದೆ ಎಂದರು.

ನಮ್ಮ ಜಗಳದಿಂದ ಅವರಿಗೆ ಲಾಭ:

ಜೆಡಿಎಸ್-ಬಿಜೆಪಿ ನಡುವಿನ ಒಡಕಿನ ಫಲದಿಂದ ಕಾಂಗ್ರೆಸ್‌ನವರು ಲಾಭ ಪಡೆಯುತ್ತಿದ್ದಾರೆ. ಜೆಡಿಎಸ್ ಆಗಲಿ, ನಾವಾಗಲಿ ಸರ್ಕಾರ ರಚಿಸಲಿಲ್ಲ. ಆದರೆ, ನಮ್ಮ ಜಗಳದ ಲಾಭ ಪಡೆದು ಅವರು ಅಧಿಕಾರಕ್ಕೆ ಬಂದರು. ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎರಡು ಬಾರಿ ನನ್ನ ಬೆಂಬಲದಿಂದ ಸುರೇಶ್ ಗೆದ್ದರು. ಇನ್ನೊಂದು ಬಾರಿ ಜೆಡಿಎಸ್ ಬೆಂಬಲದಿಂದ ಗೆದ್ದರು. ನಮ್ಮ ಜಗಳದಿಂದ ಅವರಿಗೆ ಲಾಭವಾಗಿದೆ ಎಂದರು.

ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರಾದ್ಯಂತ ಡಾ.ಮಂಜುನಾಥ್ ಪರ ಅಲೆ ಕಾಣುತ್ತಿದೆ. ಅವರ ಕುರಿತು ಇಡೀ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಎರಡು ಪಕ್ಷಗಳ ಕಾರ್ಯಕರ್ತರು ಕಳೆದ ೨೫ವರ್ಷಗಳಿಂದ ವಿರೋಧ ಮಾಡಿಕೊಂಡು ಬಂದವರು. ಇಬ್ಬರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಎರಡು ಪಕ್ಷಗಳ ಮುಖಂಡರು ಜಿಪಂ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಎರಡು ಪಕ್ಷದ ಕಾರ್ಯಕರ್ತರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದರು.

ರಾಜಕೀಯವೇ ಹುಡುಕಿಕೊಂಡು ಬಂದಿದೆ:

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಡಾ.ಮಂಜುನಾಥ್ ಎಂದೂ ರಾಜಕಾರಣವನ್ನು ಹುಡುಕಿಕೊಂಡು ಬಂದವರಲ್ಲ, ರಾಜಕೀಯವೇ ಅವರನ್ನು ಹುಡುಕಿಕೊಂಡು ಬಂದಿದೆ. ಅವರ ಕ್ಷೇತ್ರದ ಅಭ್ಯರ್ಥಿಯಾದ ನಂತರ ಎರಡು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದ್ದು, ಕ್ಷೇತ್ರಾದ್ಯಂತ ಅವರ ಪರ ಅಲೆ ಎದ್ದಿದ್ದು, ವಿರೋಧ ಪಕ್ಷದವರಿಗೆ ಭಯ ಶುರುವಾಗಿದೆ ಎಂದರು.

ಅವರು ಸೀರೆ, ಕುಕ್ಕರ್ ಹಂಚುವ ಮೂಲಕ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನುಸರಿಸಿದ ತಂತ್ರವನ್ನು ಈ ಬಾರಿಯೂ ಅನುಸರಿಸುತ್ತಿದ್ದಾರೆ. ಆದರೆ, ಕನಕಪುರದಲ್ಲಿ ಅಣ್ಣತಮ್ಮಂದಿರು ಇಟ್ಟುಕೊಂಡಿರುವ ನಿರೀಕ್ಷೆಗಿಂತ ಚನ್ನಪಟ್ಟಣದಲ್ಲಿ ಹೆಚ್ಚು ಲೀಡ್ ಸಿಗುವಂತೆ ಮಾಡಿ ಎಂದು ಮನವಿ ಮಾಡಿದರು.

ಬಾಕ್ಸ್.................

ನಮ್ಮ ಸ್ವಾರ್ಥಕ್ಕೆ ತೆಗೆದುಕೊಂಡ ತೀರ್ಮಾನವಲ್ಲ: ನಿಖಿಲ್

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತೆಗೆದುಕೊಂಡ ತೀರ್ಮಾನ ಪಕ್ಷದ ಹಿತದೃಷ್ಟಿಯಿಂದಲೇ ಹೊರತು ನಮ್ಮ ಸ್ವಾರ್ಥಕ್ಕಾಗಿ ತೆಗೆದುಕೊಂಡ ತೀರ್ಮಾನವಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯರೇ ಅಭ್ಯರ್ಥಿಯಾಗಬೇಕೆಂಬುದು ನಮ್ಮ ಆಸೆಯಾಗಿತ್ತು. ಅಲ್ಲಿನ ಮುಖಂಡರ ಜತೆ ಮೂರು ತಿಂಗಳಿನಿಂದ ಹಲವಾರು ಸುತ್ತಿನ ಸಭೆ ನಡೆಸಿ ಮೂವರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಆದರೆ, ಅಲ್ಲಿನ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಕಳೆದ ಲೋಕಸಭಾ ಚುನಾವಣೆಯಲ್ಲಿ ಆದ ನೋವು ಇನ್ನು ಮರೆತಿಲ್ಲ. ಆದ್ದರಿಂದ ಈ ಬಾರಿ ನಿಖಿಲ್ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದರು. ಆದರೆ, ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ಸೋತಿರಬಹುದು. ಆದರೆ, ಸತ್ತಿಲ್ಲ. ಈ ಬಾರಿ ಎಲ್ಲ ಕ್ಷೇತ್ರಗಳಲ್ಲೂ ಸಂಚರಿಸಿ ಪಕ್ಷ ಸಂಘಟಿಸುತ್ತೇನೆ ಎಂದು ನನ್ನ ನಿರ್ಧಾರ ತಿಳಿಸಿದೆ. ಆದರೆ, ಮಂಡ್ಯದ ಅಭಿವೃದ್ಧಿ, ನೀರಾವರಿ ವಿಚಾರದಲ್ಲಿ ಆಗಿರುವ ಅನ್ಯಾಯ ಸರಿಪಡಿಸಲು ಕುಮಾರಣ್ಣ ಸ್ಪರ್ಧಿಸಬೇಕು ಎಂಬುದು ಅಲ್ಲಿನ ಮತದಾರರ ಅಭಿಪ್ರಾಯವಾಗಿತ್ತು ಎಂದರು.

ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲವು ಶತಸಿದ್ಧ. ಅವರು ಕೇಂದ್ರ ಪ್ರವೇಶಿಸಿದರೆ, ಅವರಿಗೆ ಒಳ್ಳೆಯ ಸ್ಥಾನಮಾನ ಸಿಗುವ ವಿಶ್ವಾಸವಿದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಪೊಟೋ೨೮ಸಿಪಿಟಿ೨:

ಚನ್ನಪಟ್ಟಣ ತಾಲೂಕಿನ ಕೆಂಗಲ್ ಆಂಜನೇಸ್ವಾಮಿ ದೇವಸ್ಥಾನದಲ್ಲಿ ಡಾ.ಮಂಜುನಾಥ್ ವಿಶೇಷ ಪೂಜೆ ಸಲ್ಲಿಸಿದರು.