ನಾಲ್ಕು ಬೈಕ್‌ ಸಮೇತ ಕಳ್ಳನ ಬಂಧನ

| Published : Jul 17 2024, 12:51 AM IST

ಸಾರಾಂಶ

ಹಾಡು ಹಗಲೇ ಬೈಕ್ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದಿದ್ದ ಬಂಧಿತನಿಂದ ನಾಲ್ಕು ಬೈಕ್ ಹಾಗೂ 13 ಸಾವಿರ ನಗದು ಹಣವನ್ನು ರಾಮಾಪುರ ಪೊಲೀಸರು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ಹಾಡು ಹಗಲೇ ಬೈಕ್ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದಿದ್ದ ಬಂಧಿತನಿಂದ ನಾಲ್ಕು ಬೈಕ್ ಹಾಗೂ 13 ಸಾವಿರ ನಗದು ಹಣವನ್ನು ರಾಮಾಪುರ ಪೊಲೀಸರು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಹನೂರು ತಾಲೂಕಿನ ಕೆ.ಗುಂಡಾಪುರ ಗ್ರಾಮದ ಬಳಿ ವ್ಯಕ್ತಿ ಒಬ್ಬ ನಕಲಿ ಕೀ ಬಳಸಿ ಬೈಕ್ ಕಳವು ಮಾಡಲು ಯತ್ನಿಸುತ್ತಿದ್ದಾಗ ಬೈಕ್ ಮಾಲೀಕ ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ 112 ವಾಹನದ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ದೌಡು: ವಿಚಾರ ತಿಳಿಯುತ್ತಿದ್ದಂತೆ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಅವರು ಕಳ್ಳನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಬಂಧಿತ ಆರೋಪಿ ನಂದೀಶ್ ಹಾಗೂ ಈತನ ಸಹೋದರ ಗಿರೀಶ್ ಇಬ್ಬರು ಸ್ವಂತ ಅಣ್ಣ ತಮ್ಮಂದಿರಾಗಿದ್ದು ಬೈಕ್ ಕಳ್ಳತನ ಮಾಡಿ ಹೊರ ಜಿಲ್ಲೆಗಳಿಗೆ ಮಾರಾಟ ಮಾಡಿರುವುದಾಗಿ ಪೊಲೀಸ್ ವಿಚಾರಣೆ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆ.

ನಂತರ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ, ಪ್ರಭಾರ ಇನ್ಸ್‌ಪೆಕ್ಟರ್ ಶಶಿಕುಮಾರ್ ಅವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಹಾಗೂ ಕಾನೂನು ಸುವ್ಯವಸ್ಥೆಯ ಸಬ್ ಇನ್ಸ್‌ಪೆಕ್ಟರ್ ರಾಧಾ ಅವರು ಹೆಚ್ಚಿನ ವಿಚಾರಣೆ ನಡೆಸಿದಾಗ ಮಲೆ ಮಹದೇಶ್ವರ ಬೆಟ್ಟ, ಕೌದಳ್ಳಿ, ಗುಂಡಾಪುರ, ಮೈಸೂರು ಸೇರಿದಂತೆ ನಾಲ್ಕು ಕಡೆ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ನಂತರ ನಾಲ್ಕು ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಪೆದ್ದನಪಾಳ್ಯ ಗ್ರಾಮದಲ್ಲಿ ಕದಿಯಲಾಗಿದ್ದ ಬೈಕ್ ನ ಬಿಡಿ ಭಾಗಗಳನ್ನು ಮಾರಾಟ ಮಾಡಿದ್ದರಿಂದ ಬೈಕ್ ನ ಬೆಲೆ 13 ಸಾವಿರ ಹಣವನ್ನು ಬಂಧಿತರಿಂದ ವಸೂಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ನಂದೀಶ್ ಹಾಗೂ ಗಿರೀಶ್ ಅವರ ಮೇಲೆ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಂಧಿತರನ್ನು ಕೊಳ್ಳೇಗಾಲ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಚರಣೆಯಲ್ಲಿ ಮುಖ್ಯಪೇದೆಗಳಾದ ಮಂಜು ಎಸ್, ಸಿದ್ದೇಶ್, ಲಿಯಾಖತ್ ಅಲಿ ಖಾನ್, ಗಿರಿ, ದುಂಡಪ್ಪ, ಮಂಜುನಾಥ್, ಪೇದೆ ಮಂಜು ಪಾಲ್ಗೊಂಡಿದ್ದರು.