ಹುಟ್ಟಿದೂರಿನ ಮನೆಯಲ್ಲೇ ಗ್ರಾಮಸ್ಥನೊಬ್ಬ ಚಿನ್ನ ಕದ್ದು ಮಾರಾಟ ಮಾಡಿ, ಸಿನಿಮೀಯ ರೀತಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ತಾಲೂಕಿನ ಬಿಸ್ತುವಳ್ಳಿಯಲ್ಲಿ ಶನಿವಾರ ನಡೆದಿದೆ. ವಿಶೇಷವೆಂದರೆ, ಈ ಆರೋಪಿಯನ್ನು ಕೇವಲ 24 ತಾಸೊಳಗೆ ಜಗಳೂರು ಪೊಲೀಸರು ಬಲೆಗೆ ಕೆಡವಿದ್ದಾರೆ.

- ಜಗಳೂರು ಪೊಲೀಸರ ಬೇಟೆ । ತಿಪ್ಪೇಸ್ವಾಮಿ ಬಂಧನ । ಸತ್ಯ ಬಿಚ್ಚಿಟ್ಟ ದೇವರ ದುಡ್ಡು - - -

ಕನ್ನಡಪ್ರಭ ವಾರ್ತೆ ಜಗಳೂರು

ಹುಟ್ಟಿದೂರಿನ ಮನೆಯಲ್ಲೇ ಗ್ರಾಮಸ್ಥನೊಬ್ಬ ಚಿನ್ನ ಕದ್ದು ಮಾರಾಟ ಮಾಡಿ, ಸಿನಿಮೀಯ ರೀತಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ತಾಲೂಕಿನ ಬಿಸ್ತುವಳ್ಳಿಯಲ್ಲಿ ಶನಿವಾರ ನಡೆದಿದೆ. ವಿಶೇಷವೆಂದರೆ, ಈ ಆರೋಪಿಯನ್ನು ಕೇವಲ 24 ತಾಸೊಳಗೆ ಜಗಳೂರು ಪೊಲೀಸರು ಬಲೆಗೆ ಕೆಡವಿದ್ದಾರೆ.

ಬಿಸ್ತುವಳ್ಳಿಯ ತಿಪ್ಪೇಸ್ವಾಮಿ ಬಂಧಿತ ಆರೋಪಿ. ಶನಿವಾರ ಶ್ರೀದೇವಿ- ಶ್ರೀನಿವಾಸ್ ದಂಪತಿ ಮನೆಯಲ್ಲಿ ಹಾಡಹಗಲೇ ನುಗ್ಗಿ ಬೀರುವನ್ನು ಮುರಿದ ತಿಪ್ಪೇಸ್ವಾಮಿ ₹6.40 ಲಕ್ಷ ಬೆಲೆ ಬಾಳುವ ಬಂಗಾರ ಆಭರಣಗಳನ್ನು ಕದ್ದು ಪರಾರಿಯಾಗಿದ್ದ. ಜಗಳೂರು ಪಟ್ಟಣ ಠಾಣೆಯ ಇನ್‌ಸ್ಪೆಕ್ಟರ್‌ ಬಿ.ಎಂ.ಸಿದ್ರಾಮಯ್ಯ ಮತ್ತು ಪಿಎಸ್ಐ ಗಾದಿಲಿಂಗಪ್ಪ ನೇತೃತ್ವದ ತಂಡ ಪ್ರಕರಣ ಭೇದಿಸಿದೆ.

ಘಟನೆ ವಿವರ:

ಶ್ರೀದೇವಿ ಹಾಗೂ ಶ್ರೀನಿವಾಸ್ ಶನಿವಾರ ಮಧ್ಯಾಹ್ನ ಊಟ ಮುಗಿಸಿ ಸಂತೆಗಾಗಿ ಜಗಳೂರು ಪಟ್ಟಣಕ್ಕೆ ಹೋಗಿದ್ದರು. ಪತಿ ಶ್ರೀನಿವಾಸ್ ರಾಗಿ ಮಾರಾಟ ಮಾಡಲು ಎಪಿಎಂಸಿಯಿಂದ ಪರ್ಮಿಟ್ ಪಡೆಯಲು ಬೀರುವಿನಲ್ಲಿದ್ದ ಅಗತ್ಯ ದಾಖಲೆಗಳಾದ ಆಧಾರ್, ಪಹಣಿ ತೆಗೆದುಕೊಂಡು ಬೀರು ಲಾಕ್ ಮಾಡಿ ಜಗಳೂರಿಗೆ ಹೋಗಿದ್ದರು. ಆಗ ಮನೆಯಲ್ಲಿದ್ದ ಶ್ರೀನಿವಾಸ್‌ ಅವರ ತಾಯಿ ದೇವಮ್ಮ ಹೊರಗಡೆ ಕುಳಿತಿದ್ದರು. ಈ ಸಮಯ ಗಮನಿಸಿದ ಅದೇ ಗ್ರಾಮದ ತಿಪ್ಪೇಸ್ವಾಮಿ ಎಂಬಾತ, ''''''''ಅಜ್ಜಿ ಕಣದಲ್ಲಿ ಇರುವ ರಾಗಿಯನ್ನು ಯಾರೋ ಯುವಕರು ಹೊತ್ತುಕೊಂಡು ಹೋಗುತ್ತಿದ್ದಾರೆ...'''''''' ಎಂದು ಸುಳ್ಳು ಹೇಳಿದ್ದಾನೆ. ಅವನ ಮಾತು ನಂಬಿದ ಅಜ್ಜಿ ದೇವಮ್ಮ ಮನೆ ಬಾಗಿಲು ಹಾಕಿ ಬೀಗವನ್ನು ಎಲ್ಲರೂ ಗುರುತಾಗಿಟ್ಟುಕೊಂಡಿದ್ದ ಹೊರಗಡೆ ಇದ್ದ ಬಾತ್‌ ರೂಂ ಬಾಗಿಲಿನ ಮೇಲಿಟ್ಟು ಹೋಗಿದ್ದರು.

ಅಜ್ಜಿ ಕಣಕ್ಕೆ ಹೋಗುವುದನ್ನು ನೋಡಿದ ಆರೋಪಿ ತಿಪ್ಪೇಸ್ವಾಮಿ ತಕ್ಷಣ ಮನೆಯ ಬೀಗ ಕದ್ದು ಒಳಪ್ರವೇಶಿಸಿ, ಬಾಗಿಲು ಹಾಕಿಕೊಂಡು ಬೀರುವನ್ನು ಮುರಿದಿದ್ದಾನೆ. ಬಳಿಕ ಅದರಲ್ಲಿದ್ದ ₹1.20.000 ಮೌಲ್ಯದ 2.2 ಗ್ರಾಂ ತೂಕದ ಬಂಗಾರದ ನಕ್ಲೆಸ್, ₹4.00.000 ಮೌಲ್ಯದ 4 ತೊಲೆ ಬಂಗಾರದ ಮಾಂಗಲ್ಯ ಸರ, ₹1 ಲಕ್ಷ ಮೌಲ್ಯದ 1 ತೊಲೆ ಬಂಗಾರದ ಕಿವಿಯೋಲೆ, ₹20 ಸಾವಿರ ಮೌಲ್ಯದ 2 ಗ್ರಾಂ ಬಂಗಾರದ ಉಂಗುರವನ್ನು ಕದ್ದು ಮನೆ ಬಾಗಿಲಿನ ಬೀಗ ಹಾಕಿ, ಅದೇ ಸ್ಥಳದಲ್ಲಿಟ್ಟು ಹೋಗಿದ್ದಾನೆ.

ಇತ್ತ ಜಗಳೂರು ಪಟ್ಟಣದಿಂದ ಸಂತೆ ಮತ್ತು ಎಪಿಎಂಸಿಯಿಂದ ರಾಗಿ ಪರ್ಮಿಟ್‌ನ ಕಾರ್ಯ ಮುಗಿಸಿ ಬಂದ ಶ್ರೀದೇವಿ ಮತ್ತು ಶ್ರೀನಿವಾಸ್ ಅಜ್ಜಿ ದೇವಮ್ಮ ಬೀಗ ಹಾಕಿದ ಮನೆಯ ಹೊರಗಡೆ ಕುಳಿತಿದ್ದನ್ನು ಗಮನಿಸಿದ್ದಾರೆ. ಮನೆಯ ಬಾಗಿಲು ತೆರೆದು ರಾಗಿ ಪರ್ಮಿಟ್ ಪಡೆದ ದಾಖಲೆಗಳನ್ನು ಬೀರುವಿನಲ್ಲಿ ಇಡುವಂತೆ ಶ್ರೀನಿವಾಸ್ ತನ್ನ ಪತ್ನಿ ಶ್ರೀದೇವಿಗೆ ಹೇಳಿದ್ದಾರೆ. ಶ್ರೀದೇವಿ ಅವರು ಕೊಠಡಿಯೊಳಗೆ ಹೋದಾಗ ಗಾಡ್ರೇಜ್ ಬೀರು ಮುರಿದಿರುವುದನ್ನು ಕಂಡು ಆತಂಕದಿಂದ ಪತಿಗೆ ವಿಷಯ ತಿಳಿಸಿದ್ದಾರೆ. ಮನೆಯಲ್ಲಿನ ಆಭರಣಗಳು ಕಳವಾದ ಬಗ್ಗೆ ತಕ್ಷಣ ಸುತ್ತಮುತ್ತಲ ಮನೆಯವರನ್ನು ವಿಚಾರಿಸಿದ್ದಾರೆ. ಆಗ ಎಲ್ಲರ ಸಲಹೆಯಂತೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು.

ದೇವಸ್ಥಾನಕ್ಕೆ ಕೊಟ್ಟ ಹಣ ಸುಳಿವು?:

ಮನೆಯಲ್ಲಿನ ಆಭರಣ ಕಳವು ದೂರು ಪಡೆದ ಇನ್‌ಸ್ಪೆಕ್ಟರ್‌ ಸಿದ್ರಾಮಯ್ಯ ಮತ್ತು ಪಿಎಸ್ಐ ಗಾದಿಲಿಂಗಪ್ಪ ಭಾನುವಾರ ಎಫ್ಐಆರ್ ದಾಖಲಿಸಿ ಸ್ಥಳ ಮಹಜರ್ ಮಾಡಿ, ತನಿಖೆ ಕೈಗೊಂಡರು. ಅಷ್ಟರಲ್ಲಾಗಲೇ ತಿಪ್ಪೇಸ್ವಾಮಿ ಊರುಬಿಟ್ಟಿದ್ದ. ದೇವಸ್ಥಾನಕ್ಕೆ ₹50 ಸಾವಿರ ಹಣ ಕೊಡುವುದಾಗಿ ದೇವಸ್ಥಾನ ಕಮಿಟಿ ಪುಸ್ತಕದಲ್ಲಿ ಬರೆಸಿದ್ದರಿಂದ ಕದ್ದ ಬಂಗಾರದಿಂದ ಬಂದ ಹಣ ₹80 ಸಾವಿರದಲ್ಲಿ ₹50 ಸಾವಿರ ಕೊಟ್ಟಿದ್ದಾನೆ ಎನ್ನಲಾಗಿದೆ. ಇಷ್ಟೊಂದು ಹಣ ತಿಪ್ಪೇಸ್ವಾಮಿ ಕೈಗೆ ಹೇಗೆ ಬಂತು ಎಂದು ಪೊಲೀಸರು ಶಂಕೆಗೊಂಡರು. ತಿಪ್ಪೇಸ್ವಾಮಿಯ ಚಲನವಲನ ಮತ್ತು ದೇವಮ್ಮ ನೀಡಿದ ಮಾಹಿತಿ ಆಧರಿಸಿ ವಿಚಾರಣೆ ತೀವ್ರಗೊಳಿಸಿದಾಗ ತಿಪ್ಪೇಸ್ವಾಮಿ ಆಭರಣ ಕದ್ದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆತನನ್ನು ಬಂಧಿಸಲಾಯಿತು.

- - -

-7ಜೆ.ಎಲ್.ಆರ್.ಚಿತ್ರ1:

ಜಗಳೂರು ತಾಲೂಕಿನ ಬಸ್ತುವಳ್ಳಿಯಲ್ಲಿ ಆರೋಪಿ ತಿಪ್ಪೇಸ್ವಾಮಿಯಿಂದ ಪೊಲೀಸರು ಚಿನ್ನಾಭರಣಗಳನ್ನು ವಶಪಡಿಸಿಕೊಂಡರು.