ಮೊಬೈಲ್ ಶೋರೂಂಗೆ ಕನ್ನ ಹಾಕಿ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಕದ್ದ ಕಳ್ಳರನ್ನು ಕದ್ದ ಮಾಲು ಸಮೇತ ಬಂಧಿಸುವಲ್ಲಿ ಹೊನ್ನಾಳಿಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಎಸ್‌ಪಿ ಸ್ಯಾಂವರ್ಗಿಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮೊಬೈಲ್ ಶೋರೂಂಗೆ ಕನ್ನ ಹಾಕಿ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಕದ್ದ ಕಳ್ಳರನ್ನು ಕದ್ದ ಮಾಲು ಸಮೇತ ಬಂಧಿಸುವಲ್ಲಿ ಹೊನ್ನಾಳಿಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಎಸ್‌ಪಿ ಸ್ಯಾಂವರ್ಗಿಸ್ ತಿಳಿಸಿದರು

ಪಟ್ಟಣ ಪೊಲೀಸ್ ಠಾಣೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ.3 ರ ರಾತ್ರಿ ಸಮಯದಲ್ಲಿ ಪಟ್ಟಣದ ಶಿವು ಮೊಬೈಲ್ಸ್ ಎಂಟರ್ ಪ್ರೈಸಸ್ ನ ಕಟ್ಟಡದ ಹಿಂಬದಿಯ ಕಿಟಿಕಿಯ ಸರಳಗಳನ್ನು ಕಟ್ ಮಾಡಿದ ಕಳ್ಳರು ಸುಮರು 5.5 ಲಕ್ಷ ರು. ಮೌಲ್ಯದ ಮೊಬೈಲ್, ಕುಕ್ಕರ್, ಹೋಂ ಥಿಯೇಟರ್ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಮಾರನೇ ದಿನ ಬೆಳಗ್ಗೆ ಶೋರೂಂನ ಮಾಲೀಕ ವೀರೇಶ್ ನೀಡಿದ ದೂರನ್ನು ದಾಖಲು ಮಾಡಿಕೊಂಡು, ತಕ್ಷಣ ಪೊಲೀಸ್‌ ಇನ್‌ಸ್ಪೆಕ್ಟರ್ ಸುನಿಲ್‌ಕುಮಾರ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಕೃತ್ಯದಲ್ಲಿ ಸ್ಥಳದಲ್ಲಿ ದೊರತೆ ಬೆರುಳು ಮುದ್ರೆ ಸಹಾಯದಿಂದ ಒಂದು ವಾರ ಕಳೆಯುವ ಮೊದಲೇ ಕಳ್ಳರನ್ನು ಮಾಲು ಸಹಿತ ಬಂಧಿಸಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ ಎಂದು ವಿವರಿಸಿದರು.

ಕಳ್ಳರ ಬಂಧನ, ಕದ್ದ ವಸ್ತುಗಳ ವಶ:

ತಾಲೂಕಿನ ಮುಕ್ತೇನಹಳ್ಳಿಗ್ರಾಮದ ಸುನಿಲ್‌ಕುಮಾರ್, ಹರಿಹರ ತಾಲೂಕಿನ ನಿಟ್ಟೂರು ಗ್ರಾಮದ ಗಿರೀಶ್, ಬೆಳ್ಳೋಡಿ ಗ್ರಾಮದ ಅನಿಲ್ ಕುಮಾರ್, ಬಾನುವಳ್ಳಿ ಗ್ರಾಮದ ರಾಕೇಶ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

ಆರೋಪಿಗಳಿಂದ 6.78 ಲಕ್ಷ ರು. ಮೌಲ್ಯದ 33 ಮೊಬೈಲ್, 6 ಮಿಕ್ಸರ್ ಗ್ರೈಂಡರ್, 4 ಹೋಂಥಿಯೇಟರ್, 1 ಗೀಸರ್, 1 ಸೆಟ್ ಕುಕ್ಕರ್‌ಗಳನ್ನು ವಶಪಡಿಸಿಕೊಂಡು, ಕೃತ್ಯಕ್ಕೆ ಬಳಸಿದ 3 ಲಕ್ಷ ರು. ಮೌಲ್ಯದ ಓಮ್ನಿ ವ್ಯಾನ್, 1 ಚೂರಿ, 1 ರಾಡ್, ಎರಡು ಜರ್ಕಿನ್‌ಗಳು ಹಾಗೂ ಮಾಸ್ಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್‌ ಇನ್‌ಸ್ಪೆಕ್ಟರ್ ಸುನಿಲ್‌ಕುಮಾರ್, ಪಿಎಸೈಗಳಾದ ನಿರ್ಮಲ, ಕುಮಾರ್, ಎಎಸ್‌ಐ ಹರೀಶ್, ಪೊಲೀಸ್ ಸಿಬ್ಬಂದಿ ರಾಮಚಂದ್ರ ಜಾಧವ್, ಚೇತನ್, ಪ್ರವೀಣ್, ರಾಜಶೇಖರ್, ರವಿ,ಬಸವರಾಜು, ಅಹಮದ್ ಖಾನ್, ಹೇಮನಾಯ್ಕ್, ಮಹೇಂದ್ರ, ಮನೋಹರ್, ಕೃಷ್ಣನಾಯ್ಕ್, ಚಾಲಕ ವೆಂಕಟೇಶ್, ಹಾಗೂ ಇತರರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರಶಂಸಿದ್ದಾರೆ ಎಂದು ತಿಳಿಸಿದರು.