ಪಟ್ಟಣದ ಟೀಚರ್ಸ್ ಕಾಲೋನಿ ಹಾಗೂ ಸಾಯಿಬಾಬಾ ದೇವಸ್ಥಾನದ ಬಳಿಯಲ್ಲಿ ಶುಕ್ರವಾರ ರಾತ್ರಿ ಕಳ್ಳರು ತಮ್ಮ ಕೈ ಚಳಕ ತೋರಿದ್ದು ನಿವೃತ್ತ ಶಿಕ್ಷಕ ಶಿವಾನಾಯಕ ಅವರ ಮನೆಯ ಬಾಗಿಲು ಮುರಿದು, ಬೀರುಗಳನ್ನು ಒಡೆದು ಹಾಕಿ ಬೆಲೆಬಾಳುವ ವಸ್ತುಗಳಿಗಾಗಿ ಹುಡುಕಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಬ್ಯಾಡಗಿ: ಪಟ್ಟಣದ ಟೀಚರ್ಸ್ ಕಾಲೋನಿ ಹಾಗೂ ಸಾಯಿಬಾಬಾ ದೇವಸ್ಥಾನದ ಬಳಿಯಲ್ಲಿ ಶುಕ್ರವಾರ ರಾತ್ರಿ ಕಳ್ಳರು ತಮ್ಮ ಕೈ ಚಳಕ ತೋರಿದ್ದು ನಿವೃತ್ತ ಶಿಕ್ಷಕ ಶಿವಾನಾಯಕ ಅವರ ಮನೆಯ ಬಾಗಿಲು ಮುರಿದು, ಬೀರುಗಳನ್ನು ಒಡೆದು ಹಾಕಿ ಬೆಲೆಬಾಳುವ ವಸ್ತುಗಳಿಗಾಗಿ ಹುಡುಕಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ ನಾಲ್ಕು ದಿನಗಳಿಂದ ತಮ್ಮ ವೈಯಕ್ತಿಕ ಕಾರ್ಯದ ನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದ ಶಿವನಾಯಕ ಅವರು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಕಳ್ಳರು, ಇದೇ ಅವಕಾಶವನ್ನು ಬಳಸಿಕೊಂಡು ಮನೆಯ ಮುಂಭಾಗದ ಬಾಗಿಲು ಒಡೆದು ಒಳನುಗ್ಗಿದ್ದಾರೆ. ಬಳಿಕ ಮನೆಯಲ್ಲಿದ್ದ ಬೀರುಗಳನ್ನು ಧ್ವಂಸಗೊಳಿಸಿ, ಚಿನ್ನಾಭರಣ ಹಾಗೂ ನಗದು ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಇಲ್ಲದ ಕಾರಣ ಕಳ್ಳರು ಬರಿಗೈ ಯಲ್ಲಿ ಹಿಂದಿರುಗಿದ್ದಾರೆ. ವಿಚಿತ್ರವೆಂದರೆ, ಮನೆಯಲ್ಲಿನ ಬೀರುಗಳನ್ನು ಮಾತ್ರ ಒಡೆದು ಹಾಕಿರುವ ಕಳ್ಳರು, ಇತರೆ ಯಾವುದೇ ವಸ್ತುಗಳನ್ನು ಮುಟ್ಟದೆ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ದೇವಸ್ಥಾನದ ಹುಂಡಿ ಕಳ್ಳತನಕ್ಕೂ ಯತ್ನ!

ಇದೇ ಮನೆಯ ಸಮೀಪದಲ್ಲಿರುವ ವೆಂಕಟೇಶ್ವರ ದೇವಸ್ಥಾನದ ಹುಂಡಿಯನ್ನು ಕೆಲವು ತಿಂಗಳ ಹಿಂದೆಯಷ್ಟೇ ಕಳ್ಳರು ಕದ್ದೊಯ್ಯಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ದೇವಸ್ಥಾನದ ಹಿಂಭಾಗದಲ್ಲಿಯೇ ಶಿವನಾಯಕ ಅವರ ಮನೆ ಇದ್ದು, ಇದೀಗ ಅದೇ ಪ್ರದೇಶದಲ್ಲಿ ಮತ್ತೆ ಕಳ್ಳತನ ನಡೆದಿರುವುದು ಸ್ಥಳೀಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.ಕೆಲವು ದಿನಗಳ ಹಿಂದಷ್ಟೇ ಪಟ್ಟಣದ ಛತ್ರ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಕಳ್ಳತನ ನಡೆಸಿದ್ದ ಕಳ್ಳರು ಸುಮಾರು 8 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಟೀಚರ್ಸ್ ಕಾಲೋನಿಯಲ್ಲಿ ಮತ್ತೊಂದು ಕಳ್ಳತನ ಪ್ರಕರಣ ನಡೆದಿರುವುದು ಪಟ್ಟಣದ ಜನತೆಯನ್ನು ಬೆಚ್ಚಿಬೀಳಿಸಿದೆ.