ಕನ್ನಪ್ರಭ ವಾರ್ತೆ ಬೆಳಗಾವಿಹಣ್ಣು ಖರೀದಿಸುತ್ತಿದ್ದ ಮಹಿಳೆಯ ಕೊರಳಿನಲ್ಲಿದ್ದ 51 ಗ್ರಾಂ ತೂಕದ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಹಾಡಹಗಲೇ ಕಿತ್ತುಕೊಂಡು ಪರಾರಿಯಾದ ಘಟನೆ ಶುಕ್ರವಾರ ಮಧ್ಯಾಹ್ನ ಕಾಕತಿ ಬಳಿ ನಡೆದಿದೆ.

ಕನ್ನಪ್ರಭ ವಾರ್ತೆ ಬೆಳಗಾವಿ

ಹಣ್ಣು ಖರೀದಿಸುತ್ತಿದ್ದ ಮಹಿಳೆಯ ಕೊರಳಿನಲ್ಲಿದ್ದ 51 ಗ್ರಾಂ ತೂಕದ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಹಾಡಹಗಲೇ ಕಿತ್ತುಕೊಂಡು ಪರಾರಿಯಾದ ಘಟನೆ ಶುಕ್ರವಾರ ಮಧ್ಯಾಹ್ನ ಕಾಕತಿ ಬಳಿ ನಡೆದಿದೆ.

ಹುಕ್ಕೇರಿ ತಾಲೂಕಿನ ಬೆನವಾಡ ಗ್ರಾಮದ ಶಿಲಾ ರಾಜಶೇಖರ ಚಿಗರಿ ಸರ ಕಳೆದುಕೊಂಡ ಮಹಿಳೆ. ಶುಕ್ರವಾರ ಸಂಬಂಧಿಕರೊಬ್ಬರ ಗೃಹಪ್ರವೇಶ ಸಮಾರಂಭದಲ್ಲಿ ಪಾಲ್ಗೊಳ್ಳಲು ಕುಟುಂಬದ ಸದಸ್ಯರೊಂದಿಗೆ ಬೆಳಗಾವಿಗೆ ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಕಾರಿನಲ್ಲಿ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಕಾಕತಿ ಬಳಿ ಹಣ್ಣು ಖರೀದಿಸಲು ಕಾರಿನಿಂದ ಕೆಳಗಿಳಿದಿದ್ದರು. ಕುಟುಂಬದ ಇತರ ಸದಸ್ಯರು ಕಾರಿನಲ್ಲೇ ಇದ್ದರು.

ಹಣ್ಣಿನ ಅಂಗಡಿ ಬಳಿ ನಿಂತು ಖರೀದಿಗೆ ಮುಂದಾಗುತ್ತಿದ್ದಂತೆ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರ ಪೈಕಿ ಹಿಂಬದಿ ಸವಾರ ಏಕಾಏಕಿ ಮಹಿಳೆಯ ಕುತ್ತಿಗೆಗೆ ಕೈಹಾಕಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಕಳ್ಳರು ಸರವನ್ನು ಜೋರಾಗಿ ಎಳೆದ ರಭಸಕ್ಕೆ ಸುಮಾರು 9 ಗ್ರಾಂ ತೂಕದ ತುಂಡು ಕೆಳಗೆ ಬಿದ್ದಿದ್ದು, ಅದು ಮಾತ್ರ ಮಹಿಳೆಗೆ ಸಿಕ್ಕಿದೆ. ಉಳಿದ 51 ಗ್ರಾಂ ಚಿನ್ನದ ಸರವನ್ನು ಕಳ್ಳರು ಕೊಂಡೊಯ್ದಿದ್ದಾರೆ.

ಸರಗಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆ ಕುರಿತು ದೂರು ದಾಖಲಿಸಿಕೊಂಡಿರುವ ಕಾಕತಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.