ನಕಲಿ ಬಿಟ್ಟು ಅಸಲಿ ಚಿನ್ನ ದೋಚಿದ ಕಳ್ಳರು

| Published : Mar 21 2024, 01:09 AM IST

ಸಾರಾಂಶ

ಸಮೀಪದ ಭಾಗ್ಯನಗರದಲ್ಲಿ ಮಂಗಳವಾರ ರಾತ್ರಿ ಸರಣಿ ಕಳ್ಳತನವಾಗಿದ್ದು, ಅಚ್ಚರಿ ಎಂದರೇ ಅಸಲಿ ಬಂಗಾರವನ್ನು ಮಾತ್ರ ಹುಡುಕಿ ಹುಡುಕಿ ಒಯ್ದ ಕಳ್ಳರು, ಅದರ ಜೊತೆಗೆ ಇದ್ದ ನಕಲಿ(ರೋಡ್ ಗೋಲ್ಡ್ ) ಬಂಗಾರದ ಅಭರಣಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

ಭಾಗ್ಯನಗರದಲ್ಲಿ ಸರಣಿ ಕಳ್ಳತನ, ಮನೆಯಲ್ಲಿಟ್ಟ ಬಂಗಾರ, ಲಕ್ಷಾಂತರ ರುಪಾಯಿ ನಗದು ಲೂಟಿಕನ್ನಡಪ್ರಭ ವಾರ್ತೆ ಕೊಪ್ಪಳ

ಸಮೀಪದ ಭಾಗ್ಯನಗರದಲ್ಲಿ ಮಂಗಳವಾರ ರಾತ್ರಿ ಸರಣಿ ಕಳ್ಳತನವಾಗಿದ್ದು, ಅಚ್ಚರಿ ಎಂದರೇ ಅಸಲಿ ಬಂಗಾರವನ್ನು ಮಾತ್ರ ಹುಡುಕಿ ಹುಡುಕಿ ಒಯ್ದ ಕಳ್ಳರು, ಅದರ ಜೊತೆಗೆ ಇದ್ದ ನಕಲಿ(ರೋಡ್ ಗೋಲ್ಡ್ ) ಬಂಗಾರದ ಅಭರಣಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

ದೋಚುವ ವೇಳೆಯಲ್ಲಿಯೂ ಹೀಗೆ ಬೇರ್ಪಡಿಸಿ, ಅಸಲಿ ಬಂಗಾರ ಮತ್ತು ನಗದು ಮಾತ್ರ ಕದ್ದೊಯ್ದಿರುವುದು ಅಚ್ಚರಿಗೆ ಕಾರಣವಾಗಿದೆ ಮತ್ತು ಹಾಗಾದರೇ ಅವರ ಜೊತೆಗೆ ಬಂಗಾರ ಬಗ್ಗೆ ನುರಿತ ತಜ್ಞರು ಇದ್ದರಾ ಎನ್ನುವ ಪ್ರಶ್ನೆ ವ್ಯಕ್ತವಾಗಿದೆ.

ಭಾಗ್ಯನಗರದ ಕೀರ್ತಿ ಮತ್ತು ಧನ್ವಂತರಿ ಕಾಲನಿಯಲ್ಲಿ ಕಳ್ಳತನವಾಗಿದೆ.

ಅಧಿರಾಜ ಬಾವಿಕಟ್ಟಿ ಅವರ ಮನೆಯಲ್ಲಿ 100 ಗ್ರಾಂ ಬಂಗಾರ ಹಾಗೂ ₹ 1.20 ಲಕ್ಷ ರುಪಾಯಿ ದೋಚಿದ್ದಾರೆ.

ಅಚ್ಚರಿ ಎಂದರೇ ಇವರು ಮನೆಯಲ್ಲಿ ರಾತ್ರಿ, ಕೂಲರ್ ಹಾಕಿಕೊಂಡು ನಿದ್ರೆ ಮಾಡುತ್ತಿರುವ ವೇಳೆಯಲ್ಲಿ ಹಿಂದಿನ ಬಾಗಿಲು ಮುರಿದು, ಒಳನುಗ್ಗಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಧನ್ವಂತರಿ ಕಾಲನಿಯಲ್ಲಿ ಜಯಮ್ಮ ಅವರ ಮನೆಯಲ್ಲಿಯೂ ಮನೆಯಲ್ಲಿ ನಿದ್ರೆ ಮಾಡುತ್ತಿರುವ ವೇಳೆಯಲ್ಲಿ ನುಗ್ಗಿ, ಕಳ್ಳತನ ಮಾಡಿದ್ದಾರೆ. 10 ಗ್ರಾಂ ಬಂಗಾರ ಮತ್ತು ಬೆಳ್ಳಿ ಸೇರಿದಂತೆ ಒಂದಷ್ಟು ನಗದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಪಾಂಡುರಂಗ ಹೊಸಮನಿ ಅವರ ನಿವಾಸದಲ್ಲಿಯೂ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು, ಅಸಲಿ ಬಂಗಾರವನ್ನು ತೆಗೆದುಕೊಂಡು ಹೋಗಿದ್ದು, ಅದರ ಜೊತೆಯಲ್ಲಿಯೇ ಇದ್ದ ರೋಡ್ ಗೊಲ್ಡ್ ಬಂಗಾರವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಸುಮಾರು 30 ಗ್ರಾಂ ಬಂಗಾರ ಕದ್ದಿದ್ದಾರೆ.

ಕೊಪ್ಪಳ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

ಬೆಂಕಿಗೆ ಸುಟ್ಟು ಕರಕಲಾದ ಬಣವೆ:

ಹನುಮಸಾಗರ ಸಮೀಪದ ಮಿಯ್ಯಾಪುರ ಗ್ರಾಮದಲ್ಲಿ ಶೇಂಗಾ, ಬಿಳಿಜೋಳ ಹಾಗೂ ಮೆಕ್ಕೆಜೋಳದ ಬಣವೆ ಬೆಂಕಿಗೆ ಸುಟ್ಟು ಕರಕಲಾದ ಘಟನೆ ನಡೆದಿದೆ.

ಗ್ರಾಮದ ಬಸವ್ವ ಶಿವಪ್ಪ ಕಲ್ಲಬಾವಿ ಸೇರಿದ ಬಣವೆಯಾಗಿದೆ. ಬೆಳಗ್ಗೆ ಈ ಬಣವೆಗಳನ್ನು ಹೊಲದಲ್ಲಿ ಹೊಂದಿಸಲಾಗಿತ್ತು. ಮಧ್ಯಾಹ್ನದ ವೇಳೆಯಲ್ಲಿ ಈ ದುರ್ಘಟನೆ ನಡೆದಿದೆ. ಅಂದಾಜು 1.50 ಲಕ್ಷ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಅಭಿಷೇಕ ಕರಡಿ, ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ, ಅಗ್ನಿಶಾಮಕ ಸಿಬ್ಬಂದಿ ಸುರೇಶ, ಮಹೇಶ ಒಣರೊಟ್ಟಿ, ಪ್ರವೀಣ ಬಾರಡ್ಡಿ, ತ್ರಿಮೂರ್ತಿ ಶಿವಪೂರ ಭೇಟಿ ನೀಡಿ ಬೆಂಕಿ ನಂದಿಸಿದರು. ಈ ವೇಳೆ ಗ್ರಾಮಸ್ಥರಾದ ಶಿವುಗೌಡ ಮಾಲಿಪಾಟೀಲ್, ಚನ್ನರಾಜ್ ತಲೆಮಟ್ಟಿ, ಗವಿಸಿದ್ದಪ್ಪ ಇತರರಿದ್ದರು.