ತಿಮ್ಮಪ್ಪ ಹೆಗಡೆ ಬದುಕು, ಅವಿಭಕ್ತ ಕುಟುಂಬ ಎಲ್ಲರಿಗೂ ಮಾದರಿ

| Published : Feb 08 2024, 01:30 AM IST

ಸಾರಾಂಶ

ಸಹಕಾರಿ ಧುರೀಣ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರ ಬದುಕು ಹಾಗೂ ಅವರ ಅವಿಭಕ್ತ ಕುಟುಂಬ ಎಲ್ಲರಿಗೂ ಮಾದರಿಯಾಗಿದೆ. ರಾಜಕೀಯ ವ್ಯವಸ್ಥೆಗೆ ಗೌರವ ತಂದುಕೊಟ್ಟ ಅಪರೂಪದ ರಾಜಕಾರಣಿಗಳಲ್ಲಿ ಎಲ್.ಟಿ. ತಿಮ್ಮಪ್ಪ ಅವರು ಎದ್ದು ಕಾಣುತ್ತಾರೆ. ತಿಮ್ಮಪ್ಪ ಹೆಗಡೆ ಅವರ ಕುಟುಂಬವನ್ನು ಗಮನಿಸಿದಾಗ ನಂಬಿಕೆ, ಪ್ರಾಮಾಣಿಕತೆ, ಭಾವನಾತ್ಮಕ ಸಂಬಂಧಗಳನ್ನು ಕಾಣಬಹುದು. ಇಂತಹ ಮಾನವೀಯ ಮತ್ತು ಭಾವನಾತ್ಮಕ ಸಂಬಂಧಗಳು ಇಂದಿನ ಒಟ್ಟು ವ್ಯವಸ್ಥೆಗೆ ಅತ್ಯಂತ ಅಗತ್ಯ ಎಂದು ವಿಧಾನಸಭೆಯ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಾಗರದ ಕಾನುಕೊಪ್ಪ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ ಸಹಕಾರಿ ಧುರೀಣ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರ ಬದುಕು ಹಾಗೂ ಅವರ ಅವಿಭಕ್ತ ಕುಟುಂಬ ಎಲ್ಲರಿಗೂ ಮಾದರಿಯಾಗಿದೆ ಎಂದು ವಿಧಾನಸಭೆಯ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು. ತಾಲೂಕಿನ ಕಾನುಕೊಪ್ಪದಲ್ಲಿ ಮಡಸೂರು ಲಿಂಗದಹಳ್ಳಿಯ ಸಾವಿತ್ರಮ್ಮ ಮತ್ತು ಎಲ್‌.ಟಿ.ತಿಮ್ಮಪ್ಪ ಹೆಗಡೆ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರ ಸಂಸ್ಮರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜಕೀಯ ವ್ಯವಸ್ಥೆಗೆ ಗೌರವ ತಂದುಕೊಟ್ಟ ಅಪರೂಪದ ರಾಜಕಾರಣಿಗಳಲ್ಲಿ ಎಲ್.ಟಿ. ತಿಮ್ಮಪ್ಪ ಅವರು ಎದ್ದು ಕಾಣುತ್ತಾರೆ ಎಂದರು. ತಿಮ್ಮಪ್ಪ ಹೆಗಡೆ ಅವರ ಕುಟುಂಬವನ್ನು ಗಮನಿಸಿದಾಗ ನಂಬಿಕೆ, ಪ್ರಾಮಾಣಿಕತೆ, ಭಾವನಾತ್ಮಕ ಸಂಬಂಧಗಳನ್ನು ಕಾಣಬಹುದು. ಇಂತಹ ಮಾನವೀಯ ಮತ್ತು ಭಾವನಾತ್ಮಕ ಸಂಬಂಧಗಳು ಇಂದಿನ ಒಟ್ಟು ವ್ಯವಸ್ಥೆಗೆ ಅತ್ಯಂತ ಅಗತ್ಯ. ಹೊರ ಜಗತ್ತಿನಲ್ಲಿ ವ್ಯಾವಹಾರಿಕ ಸಂಬಂಧಗಳು ಹೆಚ್ಚುತ್ತಿರುವುದು ಆತಂಕ. ಇದರ ಪರಿಣಾಮ ವೃದ್ಧಾಶ್ರಮ, ಅನಾಥಾಶ್ರಮ ಹೆಚ್ಚಬಹುದು. ಅದನ್ನು ತಪ್ಪಿಸುವುದಕ್ಕೆ ಇಂತಹ ಸುಸಂಸ್ಕೃತ ಕುಟುಂಬದ ಆದರ್ಶಗಳತ್ತ ನಾವು ಲಕ್ಷ್ಯ ವಹಿಸಬೇಕು ಎಂದು ಆಶಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಮಾತನಾಡಿ, ಹೆಗಡೆ ಅವರು ಶುದ್ಧ ಆಸ್ತಿಕರು. ಆದರೆ, ನಾಸ್ತಿಕರು ಕೂಡ ಗೌರವಿಸುವಂತಹ ವ್ಯಕ್ತಿತ್ವ ಹೊಂದಿದ್ದರು. ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ ಅಪರೂಪದ ವ್ಯಕ್ತಿಗಳಲ್ಲಿ ಎಲ್.ಟಿ. ತಿಮ್ಮಪ್ಪ ಹೆಗಡೆ ಒಬ್ಬರು ಎಂದರು.

ಹಿಂದೂ ಧರ್ಮ ಕುರಿತು ಸಹಮತ ಇಲ್ಲದ ಬೌದ್ಧ, ಜೈನ್ ಧರ್ಮಗಳು ಕೂಡ ತನ್ನದೇ ಆದ ಸಂಸ್ಕಾರ ಹೊಂದಿವೆ. ಚೌಕಟ್ಟನ್ನು ಪಡೆದಿವೆ. ಅಲ್ಲೂ ಜೀವನ ವಿಧಾನ ಇದೆ. ಹಾಗೆಯೇ ಹಿಂದೂ ಧರ್ಮದಲ್ಲೂ ಆಯಾ ಕಾಲಘಟ್ಟಕ್ಕೆ ಬೇಕಾದ ಚೌಕಟ್ಟುಗಳನ್ನು ಅಳವಡಿಸಲಾಗಿದೆ. ಧರ್ಮದ ಪರಿಧಿ ಹೊರಹೋಗದೇ, ಚ್ಯುತಿ ಬಾರದಂತೆ ನಡೆದುಕೊಂಡ ಮತ್ತು ಅದೇ ವೇಳೆ ಸಮಾಜಕ್ಕೂ ಮಾನ್ಯರಾದ ಎಲ್‌ಟಿ ಅವರ ಬದುಕು ವಿಶಿಷ್ಟವಾದುದು ಎಂದು ವಿವರಿಸಿದರು.

ಚಿಂತಕ ದೇವೇಂದ್ರ ಬೆಳೆಯೂರು ಅವರು "ಎಲ್.ಟಿ. ತಿಮ್ಮಪ್ಪ ಹೆಗಡೆ " ವಿಶೇಷ ಉಪನ್ಯಾಸದಲ್ಲಿ, ಸಂಶಯದ ಜೀವಿಯಾಗಿ ನಾನು ಹೆಗಡೆ ಅವರನ್ನು ಅನುಮಾನದಿಂದಲೇ ನೋಡಿದರೂ, ಅವರು ಪ್ರತಿ ಸಂದರ್ಭ ಸ್ಪಷ್ಟ ವ್ಯಕ್ತಿತ್ವವಾಗಿಯೇ ಹೊರಹೊಮ್ಮಿದ್ದಾರೆ. ಬದುಕಿನಲ್ಲಿ ಪ್ರತಿಯೊಬ್ಬನಿಗೂ ಆತ್ಮಗೌರವ ಎನ್ನುವುದು ಸಮಾನವಾದುದು ಎಂಬುದನ್ನು ಅವರ ಪ್ರತಿ ನಡೆ-ನುಡಿಯಲ್ಲಿ ವ್ಯಕ್ತವಾಗುತ್ತಿತ್ತು. ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುತ್ತ, ಸರಿಪಡಿಸಿಕೊಳ್ಳುತ್ತಲೇ ಅವರು ಸಮಾಜಕ್ಕೆ ನೀಡಿದ ಸಂದೇಶ ಅಪರೂಪವಾದುದು ಎಂದು ಹೇಳಿದರು.

ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಎಚ್.ಹಾಲಪ್ಪ, ಸೂಡಾ ಮಾಜಿ ಅಧ್ಯಕ್ಷ ಎಸ್.ದತ್ತಾತ್ರಿ, ಮಾಜಿ ಶಾಸಕ ಸ್ವಾಮಿರಾವ್ ಮೊದಲಾದವರು ಮಾತನಾಡಿದರು.

ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಧ್ಯಕ್ಷತೆ ವಹಿಸಿದ್ದರು. ಎಲ್.ಟಿ. ಅಶೋಕ್ ಇದ್ದರು. ಎಲ್.ಟಿ. ತಿಮ್ಮಪ್ಪ ಸ್ವಾಗತಿಸಿ, ರಾಜಲಕ್ಷ್ಮೀ ನಿರೂಪಿಸಿದರು. ಗಣಪತಿ ಹೆಗಡೆ ವಂದಿಸಿದರು.

- - - -7ಕೆ.ಎಸ್.ಎ.ಜಿ.2:

ಸಾಗರ ತಾಲೂಕಿನ ಕಾನುಕೊಪ್ಪದಲ್ಲಿ ಮಾಜಿ ಶಾಸಕ, ಸಹಕಾರಿ ಧುರೀಣ ಎಲ್.ಟಿ.ತಿಮ್ಮಪ್ಪ ಹೆಗಡೆ ಅವರ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.