ಸಾರಾಂಶ
ಎಂ. ಪ್ರಹ್ಲಾದ್ ಕನಕಗಿರಿ
ಭಕ್ತನೊಬ್ಬ ತಿರುಪತಿ ವೆಂಕಟರಮಣನಿಗೆ ಹರಿಕೆ ಹೊತ್ತು ೧೯೮೪ರಲ್ಲಿ ಕಟ್ಟಿದ್ದ ಮುಡಿಪು ಬಡವರ ತಿರುಪತಿ ಎಂದೆನಿಸಿದ ಕನಕಾಚಲಪತಿಗೆ ಸಮರ್ಪಿಸಿ ಭಕ್ತಿ ಮೆರೆದಿದ್ದಾನೆ.ಹೌದು, ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿ ಮಾಡಿಕೊಳ್ಳಲು ದೇವರ ಮೊರೆ ಹೋಗಿ ಮುಡಿಪು ಕಟ್ಟುವುದು ಸಂಪ್ರದಾಯ. ಇಲ್ಲೊಬ್ಬ ಭಕ್ತ ೧೯೮೪ರಲ್ಲಿಯೇ ಬೇಡಿಕೊಂಡಿದ್ದು ಈಡೇರಲೆಂದು ಪ್ರಾರ್ಥಿಸಿ ಹಳೇ ನೋಟು, ನಾಣ್ಯ ಮುಡಿಪು ಕಟ್ಟಿದ್ದ. ಇಷ್ಟಾರ್ಥ ಪೂರೈಸಿದ್ದರಿಂದ ಭಕ್ತ ಮುಡಿಪನ್ನು ಕನಕಾಚಲಪತಿ ಸನ್ನಿಧಾನದ ಕಾಣಿಕೆಗೆ ಪೆಟ್ಟಿಗೆಯಲ್ಲಿ ಅರ್ಪಿಸಿದ್ದಾನೆ.
ಕನಕಾಚಲಪತಿಗೇಕೆ ಅರ್ಪಣೆ?:ಅಪ್ಪಟ ತಿರುಪತಿ ತಿಮ್ಮಪ್ಪನ ಭಕ್ತನಾಗಿದರೂ ತಿರುಪತಿಗೆ ಹೋಗಿ ಮುಡಿಪು ಅರ್ಪಿಸಲು ಸಾಧ್ಯವಾಗದೆ ಇರುವುದರಿಂದ ಬಡವರ ತಿರುಪತಿ ಎಂದೆನಿಸಿದ ಕನಕಾಚಲಪತಿಗೆ ಮುಡಿಪು ಅರ್ಪಿಸಿದ್ದಾನೆ. ನ. ೧೨ರ ಬುಧವಾರದಂದು ದೇವಸ್ಥಾನ ಸಮಿತಿ ದೇಗುಲದ ಕಾಣಿಕೆ ಪೆಟ್ಟಿಗೆಗಳ ಹಣ ಎಣಿಕೆ ಸಂದರ್ಭದಲ್ಲಿ ವೆಂಕಟರಮಣನ ಮುಡಿಪು ಎಂದು ಬರೆದ ಚೀಟಿ ಸಹಿತ ಹಳೇ ನಾಣ್ಯ ಹಾಗೂ ನೋಟುಳ್ಳ ಮುಡಿಪು ಹುಂಡಿಯಲ್ಲಿ ದೊರೆತಿದೆ.
೧೯೮೪ರಲ್ಲಿನ ೧೦೦, ೫೦, ೧೦, ೨, ೧ ನೋಟುಗಳು ಹಾಗೂ ೫೦,೨೦ ಹಾಗೂ ೫ ಪೈಸೆ ನಾಣ್ಯಗಳಿರುವ ಮುಡಿಪನ್ನು ದೇವಸ್ಥಾನ ಸಮಿತಿ ಪರಿಶೀಲಿಸಿದೆ. ಹೀಗೆ ದೊರೆತ ನೋಟು ಹಾಗೂ ನಾಣ್ಯಗಳು ಅಮಾನ್ಯವಾಗಿರುವುದರಿಂದ ಬ್ಯಾಂಕ್ ವ್ಯವಸ್ಥಾಪಕರು ದೇವಸ್ಥಾನ ಸಮಿತಿಗೆ ಒಪ್ಪಿಸಿದೆ. ಈ ಹಿಂದೆ ಹಣ ಎಣಿಕೆ ಮಾಡುವಾಗಲೂ ಅಮಾನ್ಯವಾದ ನೋಟುಗಳು ಬಂದಿದ್ದು, ಅವು ಸಹ ದೇವಸ್ಥಾನ ಸಮಿತಿಯವರ ಬಳಿ ಇವೆ.ಹುಂಡಿಯಲ್ಲಿದ್ದ ಹಣ ಎಣಿಕೆ ಮಾಡಲಾಗಿ ₹೯.೬೪.೨೦೦ ಸಂಗ್ರಹಗೊಂಡಿದೆ. ನಾಲ್ಕು ತಿಂಗಳಲ್ಲಿ ಈ ಮೊತ್ತ ಕ್ರೋಡೀಕರಣವಾಗಿದೆ ಎಂದು ದೇವಸ್ಥಾನ ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ತಿರುಪತಿ ತಿಮ್ಮಪ್ಪನ ಭಕ್ತರೊಬ್ಬರ ಹರಿಕೆ ೪೧ ವರ್ಷ ನಂತರ ಈಡೇರಿದ್ದರಿಂದ ತಿರುಪತಿಗೆ ಹೋಗದ ಪರಿಸ್ಥತಿಯಲ್ಲಿ ಗೋವಿಂದ ಎನಿಸಿದ ಕನಕಾಚಲಪತಿಗೆ ಮುಡಿಪು ಅರ್ಪಿಸಿ ಭಕ್ತಿ ಸಮರ್ಪಣೆ ಮಾಡಿದ್ದಾನೆ. ನಾಲ್ಕು ದಶಕಗಳ ಬಳಿಕ ಮುಡಿಪು ಸಮರ್ಪಣೆ ಮಾಡಿರುವುದು ನಿಜಕ್ಕೂ ವಿಸ್ಮಯ ಎಂದು ದೇವಸ್ಥಾನ ಸಮಿತಿ ಸದಸ್ಯ ಕೀರ್ತಿ ಸೋನಿ ತಿಳಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))