ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ನವ ಉದ್ಯಮಕ್ಕೆ ಮತ್ತು ನವ ಉದ್ಯಮಿಗಳಿಗೆ ಅನೇಕ ಪ್ರೋತ್ಸಾಹಗಳನ್ನು ನೀಡುತ್ತಿವೆ. ಯುವ ಉದ್ಯಮಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿದ್ಯಾರ್ಥಿ ದಿಸೆಯಲ್ಲಿಯೇ ಹೊಸ ಉದ್ಯಮದ ಕನಸು ಕಾಣುವುದು ಅದನ್ನು ಸಾಕಾರಗೊಳಿಸಲು ಆಲೋಚಿಸುವುದು ಅಗತ್ಯ ಎಂದು ಎನ್ಐಇ ಕಾಲೇಜಿನ ನವ ಉದ್ಯಮ ಕೇಂದ್ರದ ಮುಖ್ಯ ಅಧಿಕಾರಿ ಹಾಗೂ ಇನ್ಕ್ಯುಬೇಶನ್ ಕೇಂದ್ರದ ಮುಖ್ಯಸ್ಥ ಮೀರ್ ಅಮ್ಜದ್ ಹುಸೇನ್ ತಿಳಿಸಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಹೊಸ ಉದ್ಯಮ ಪ್ರೋತ್ಸಾಹ ಕೇಂದ್ರವು ಐಕ್ಯುಎಸಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಹೊಸ ಔದ್ಯಮಿಕ ಆಲೋಚನೆಗಳನ್ನು ಉದ್ಯಮವಾಗಿ ರೂಪಿಸೋಣ ಕುರಿತು ಒಂದು ದಿನದ ಉದ್ಯಮಶೀಲತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕೇವಲ ತರಗತಿ ಪಠ್ಯಕ್ಕೆ ಸೀಮಿತರಾಗದೆ ಇಂದಿನ ಆಧುನಿಕತೆಗೆ ಅನುಗುಣವಾಗಿ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು. ಜಗತ್ತಿನಲ್ಲಿ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೂರಾರು ಅವಕಾಶಗಳು ಇವೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ತಂತ್ರಜ್ಞಾನ, ತಾಂತ್ರಿಕ ಪ್ರೌಢಿಮೆ, ವಾಣಿಜ್ಯ ಮತ್ತು ವ್ಯಾವಹಾರಿಕ ಜ್ಞಾನ ಬೆಳೆಸಿಕೊಳ್ಳಬೇಕು. ನಿರಂತರ ಶ್ರಮ, ಕೌಶಲ್ಯಯುತವಾದ ಆಲೋಚನೆಗಳು, ಭವಿಷ್ಯ ಕುರಿತ ಅಂತರ್‌ ಪ್ರಜ್ಞೆ ಇವುಗಳು ಯಶಸ್ಸಿಗೆ ಕಾರಣಗಳಾಗುತ್ತವೆ ಎಂದರು.

ಮೈಸೂರಿನಲ್ಲಿ ಸಣ್ಣ ಹಾಗೂ ಬೃಹತ್ ಉದ್ಯಮಗಳಿಗೆ ಉತ್ತಮವಾದ ಸೌಕರ್ಯಗಳು ಇವೆ. ಯುವ ಉದ್ಯಮಿಗಳಿಗೆ ಮೈಸೂರು ಸೂಕ್ತವಾದ ಸ್ಥಳ. ಮೈಸೂರು ಅರಸರ ಕಾಲದಿಂದಲೂ ಹೊಸ ಹೊಸ ಉದ್ಯಮಗಳಿಗೆ ಚಾಲನೆ ಸಿಕ್ಕಿದೆ. ದಿವಾನರಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೈಗಾರಿಕೆಗಳ ಬೆಳವಣಿಗೆಗೆ ತೋರಿದ ಆಸಕ್ತಿ ಮತ್ತು ಪ್ರೋತ್ಸಾಹಗಳು ಗಮನಾರ್ಹವಾದದ್ದಾಗಿದೆ. ಇವರ ಸಾಧನೆಗಳು ದೇಶವೇ ನೆನೆಯುವಂತಹದ್ದು ಎಂದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಶಿಕ್ಷಣವು ಇಂದು ಯುವ ಜನಾಂಗವನ್ನು ಸ್ವಾವಲಂಬಿ ಸ್ವ-ಉದ್ಯೋಗದ ಮಾರ್ಗದತ್ತ ಕೊಂಡೊಯ್ಯುತ್ತಿರುವುದು ಶ್ಲಾಘನೀಯ. ಹೊಸ ಆಲೋಚನೆಗಳು ಉದ್ಯಮ, ಉದ್ಯೋಗ, ಹೂಡಿಕೆ, ರಫ್ತು, ತಂತ್ರಗಾರಿಕೆ, ಎಲ್ಲ ಕ್ಷೇತ್ರಕ್ಕೂ ನೂತನ ವೇಗವನ್ನು ನೀಡುತ್ತವೆ. ಹೊಸ ಔದ್ಯಮಿಕ ಹಾದಿಯು ದೇಶದ ಆರ್ಥಿಕತೆಯನ್ನು ಉತ್ತಮ ಪಡಿಸುತ್ತದೆ. ಸ್ಟಾರ್ಟ್‌ ಅಫ್‌ ಗಳು ದೇಶದ ಆರ್ಥಿಕತೆಗೆ ಹೊಸ ಚೈತನ್ಯವನ್ನು ನೀಡುತ್ತವೆ ಎಂದರು.

ಕಾಲೇಜುಗಳಲ್ಲಿ ಸ್ಥಾಪಿತಗೊಂಡಿರುವ ಹೊಸ ಉದ್ಯಮ ಪ್ರೋತ್ಸಾಹ ಕೇಂದ್ರಗಳು ವಿದ್ಯಾಥಿಗಳಲ್ಲಿ ಹೊಸ ಉದ್ಯಮವನ್ನು ಕಟ್ಟುವ ಕೌಶಲವನ್ನು ವೃದ್ಧಿಸುವ ಸಲುವಾಗಿ ಇಂತಹ ಕಾರ್ಯಾಗಾರಗಳನ್ನು ಆಯೋಜಿಸುತ್ತವೆ. ಪರಿಣಿತ ಯಶಸ್ವಿ ಉದ್ಯಮಿಗಳ ಆಲೋಚನೆಗಳು, ಅವರ ಸಾಧನೆಗಳು ವಿದ್ಯಾರ್ಥಿಗಳ ಉದ್ಯಮದ ಕನಸಿಗೆ ನೆರವಾಗುತ್ತವೆ. ಇತ್ತೀಚೆಗೆ ನೂತನ ಉದ್ಯಮಗಳ ಬೆಳವಣಿಗೆ ಆಶಾದಾಯಕವಾಗಿದೆ. ಇವು ಹೊಸ ಉತ್ಪನ್ನಗಳು ಸೇವೆಗಳ ಮೂಲಕ ದೇಶದ ಆಂತರಿಕ ಉತ್ಪನ್ನ ಹೆಚ್ಚಿಸಲು ನೆರವಾಗುತ್ತವೆ ಎಂದರು.

ಅಮೆರಿಕಾ, ಚೈನಾ ನಂತರ ನಮ್ಮ ದೇಶ ನವ ಉದ್ಯಮದಲ್ಲಿ ಮುಂಚೂಣಿಯಲ್ಲಿರುವುದು ಕೂಡ ಹೆಮ್ಮೆಪಡುವಂಥದ್ದು, ಭಾರತೀಯ ಸ್ಟಾರ್ಟ್‌ ಅಫ್‌ ಗಳು ಜಾಗತಿಕ ಮಾರುಕಟ್ಟೆಯಲ್ಲಿ ನೂರು ಬಿಲಿಯನ್ ಡಾಲರ್ ಮೌಲ್ಯವನ್ನು ತಲುಪುವ ಸಾಧ್ಯತೆಯಿದೆಯೆಂದು ವರದಿಗಳು ಹೇಳುತ್ತವೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಮ್ಮ ಕೈಗಾರಿಕೋದ್ಯಮಿಗಳು ಇತರರಿಗೆ ಮಾದರಿಯಾಗಿದ್ದಾರೆ. ದೇಶದ ಹಣಕಾಸು ಯೋಜನೆ, ಮಾರುಕಟ್ಟೆ, ವ್ಯಾಪಾರ ಎಲ್ಲವೂ ಇಂದು ವೃದ್ಧಿಯಾಗುತ್ತಿದೆ. ವಿದ್ಯಾರ್ಥಿಗಳು ಇವುಗಳನ್ನು ಗಮನಿಸಿ ಹೊಸದರ ಕಡೆಗೆ ಹೆಜ್ಜೆ ಹಾಕಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಪ್ರಭು ಸ್ವಾಗತಿಸಿದರು. ಅದಿತಿ ಹೆಗಡೆ ಪ್ರಾರ್ಥಿಸಿದರು. ನವ ಉದ್ಯಮ ಪ್ರೋತ್ಸಾಹ ಕೇಂದ್ರದ ಸಂಯೋಜಕ ಡಾ.ಎಂ. ಮಹದೇವಸ್ವಾಮಿ ವಂದಿಸಿದರು. ಡಾ.ಜಿ.ಎಂ.ಸಿಂಧೂ ನಿರೂಪಿಸಿದರು.