ಮುಂದಿನ 25 ವರ್ಷಗಳಲ್ಲಿ ಆಗಲಿರುವ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲಾ ನಗರಗಳಲ್ಲೂ ಸಂಚಾರಿ ಗ್ರಿಡ್ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು : ಮುಂದಿನ 25 ವರ್ಷಗಳಲ್ಲಿ ಆಗಲಿರುವ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲಾ ನಗರಗಳಲ್ಲೂ ಸಂಚಾರಿ ಗ್ರಿಡ್ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ದಾವೋಸ್ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸಾದ ಬಳಿಕ ಭಾನುವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಾವೋಸ್ ಕಾರ್ಯಕ್ರಮದಲ್ಲಿ ಕೆಲ ಕಂಪನಿಗಳು ಕರ್ನಾಟಕದ 2-3ನೇ ಹಂತದ ನಗರಗಳ ಬಗ್ಗೆಯೂ ಆಸಕ್ತಿ ತೋರಿವೆ ಎಂದರು.
ನಮ್ಮ ರಾಜ್ಯದ ಪ್ರಗತಿ ನೋಡಿ ಮುಂದಿನ 25 ವರ್ಷಗಳಲ್ಲಿ ಕರ್ನಾಟಕದ ಜನಸಂಖ್ಯೆಯಲ್ಲಿ ಸುಮಾರು ಶೇ.70 ರಷ್ಟು ಜನ ನಗರ ಪ್ರದೇಶಕ್ಕೆ ವರ್ಗಾವಣೆಯಾಗುವ ಲೆಕ್ಕಾಚಾರ ಅವರದ್ದು. ಇದಕ್ಕೆ ಏನು ತಯಾರಿ ಮಾಡಿಕೊಳ್ಳುತ್ತಿದ್ದೀರಿ ಎಂದು ನನ್ನನ್ನು ಕೇಳಿದರು. ಹೀಗಾಗಿ ನಾವು ಸಮಯ ವ್ಯರ್ಥ ಮಾಡದೇ ಇಡೀ ರಾಜ್ಯದಲ್ಲಿ ಸಂಚಾರಿ ಗ್ರಿಡ್ ರೂಪಿಸಬೇಕೆಂದು ತೀರ್ಮಾನಿಸಿದ್ದೇವೆ. ರಾಜ್ಯದ ಎಲ್ಲಾ ನಗರ ಪ್ರದೇಶಗಳಿಗೆ ಸಂಚಾರ ಮಾರ್ಗದ ಯೋಜನೆ ರೂಪಿಸಬೇಕಿದೆ. ವರ್ತುಲ ರಸ್ತೆಗಳಿಗೆ ಯೋಜನೆ ತರಬೇಕಿದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ನಾನು, ನಗರಾಭಿವೃದ್ಧಿ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಪೌರಾಡಳಿತ ಸಚಿವರು ಸಭೆ ಸೇರಿ, ನಗರ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಬೆಂಗಳೂರು ಸಂಚಾರ ದಟ್ಟಣೆ 2ನೇ ಸ್ಥಾನಲ್ಲಿದೆ ಎಂಬ ವರದಿ ಕುರಿತ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಿಸಬೇಕು ಎಂಬ ಕಾರಣಕ್ಕೆ ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ 2.50 ಲಕ್ಷ ಕೋಟಿ ರು.ಗಳನ್ನು ಐದು ವರ್ಷಗಳಲ್ಲಿ ವೆಚ್ಚ ಮಾಡಲಾಗುತ್ತಿದೆ. ಅದಕ್ಕಾಗಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ಟನಲ್ ರಸ್ತೆಗಳು, 123 ಕಿ.ಮೀ. ಎಲಿವೇಟೆಡ್ ಕಾರಿಡಾರ್‌ಗಳು, 300 ಕಿ.ಮೀ ಉದ್ದದ ಬಫರ್ ರೋಡ್ ಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಜಾಗತಿಕ ಕಂಪನಿಗಳು ರೇಸ್‌ಕೋರ್ಸ್ ಕೇಳ್ತಿದ್ದಾರೆ:
ದಾವೋಸ್ ಕಾರ್ಯಕ್ರಮದಲ್ಲಿ ಸುಮಾರು 45ಕ್ಕೂ ಹೆಚ್ಚು ಕಂಪನಿಗಳ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಾಗಿದೆ. ಕರ್ನಾಟಕದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನೇಕ ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಕೆಲವರು ರೇಸ್‌ಕೋರ್ಸ್ ಜಾಗ ಕೇಳಿದರು, ಅದೆಲ್ಲ ಆಗುವುದಿಲ್ಲ ಎಂದು ಹೇಳಿದೆ. ಇನ್ನು ಕೆಲವರು ವಿಮಾನ ನಿಲ್ದಾಣದ ಸುತ್ತಲ 40 ಕಿ.ಮೀ. ವ್ಯಾಪ್ತಿಯಲ್ಲಿ ಜಾಗ ಕೇಳಿದರು. ಹೂಡಿಕೆಗೆ ನಮ್ಮದೇ ರಾಜ್ಯದ ನಿಯಮಗಳಿವೆ. ಅದರ ಪ್ರಕಾರ ಮಾಡೋಣ ಎಂದು ಹೇಳಿದ್ದೇವೆ. ಈ ಬಾರಿ ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವ ಕಂಪನಿಗಳ ಜೊತೆಗಿನ ಒಪ್ಪಂದಕ್ಕೆ ಅಲ್ಲಿ ಸಹಿ ಹಾಕುವುದು ಬೇಡ, ಅವರು ನಮ್ಮ ರಾಜ್ಯಕ್ಕೆ ಬಂದು, ಇಲ್ಲಿನ ವಾತಾವರಣ, ಯುವ ಪ್ರತಿಭೆ, ಇಲ್ಲಿನ ಸೌಲಭ್ಯ, ಇಂಧನ, ನೀರಿನ ಸೌಲಭ್ಯ ಗಮನಿಸಬೇಕು. ಇನ್ನು ನಮ್ಮ ರಾಜ್ಯದ ಅನಿವಾಸಿ ಭಾರತೀಯ ಉದ್ಯಮಿಗಳು ಕೂಡ ಅಲ್ಲಿಗೆ ಬಂದು ತಮ್ಮ ಉದ್ಯಮ ವಿಸ್ತರಣೆಗೆ ತಮ್ಮ ಆಲೋಚನೆ ವ್ಯಕ್ತಪಡಿಸಿದ್ದಾರೆ ಎಂದರು.
ಇದೇ ವೇಳೆ ಟನಲ್ ರಸ್ತೆ ಬಗ್ಗೆಯೂ ಚರ್ಚೆಯಾಗಿದ್ದು, ಜೈಕಾ ಕಂಪನಿ ಜೊತೆ ಎರಡನೇ ಟನಲ್ ರಸ್ತೆ ಕುರಿತು ಚರ್ಚಿಸಲಾಯಿತು ಎಂದು ಹೇಳಿದರು.
ಹೊರದೇಶದಲ್ಲಿ ನಿಂತು ಟೀಕೆ ಮಾಡಲ್ಲ:
ನಾವು ನಮ್ಮ ದೇಶದ ಬಗ್ಗೆ ಪ್ರೀತಿ, ಗೌರವ, ಭಕ್ತಿಯುಳ್ಳ ಹೆಮ್ಮೆಯ ಭಾರತೀಯರು. ರಾಜಕಾರಣಕ್ಕಾಗಿ ಹೊರದೇಶದಲ್ಲಿ ನಿಂತು ನಮ್ಮ ದೇಶ, ಸಂಸ್ಕೃತಿ, ಸಂವಿಧಾನವನ್ನು ಬಿಟ್ಟುಕೊಡಲು ಸಾಧ್ಯವೇ ಇಲ್ಲ. ರಾಹುಲ್ ಗಾಂಧಿ ಅವರೂ ಆ ಕೆಲಸ ಮಾಡಿಲ್ಲ. ಕೆಲವು ಅಭಿಪ್ರಾಯ ವ್ಯಕ್ತಪಡಿಸಿರಬಹುದಷ್ಟೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ದಾವೋಸ್ ಭೇಟಿ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುವಾಗ, ನನಗೆ ಅಷ್ಟೋ ಇಷ್ಟೋ ರಾಜಕೀಯದ ಅನುಭವ ಇದೆ. ರಾಹುಲ್ ಗಾಂಧಿ ಅವರು ಯಾವ ಲೆಕ್ಕದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಹೊರದೇಶದಲ್ಲಿ ನಿಂತು ಭಾರತಕ್ಕೆ, ಭಾರತೀಯರಿಗೆ ನೋವು ಮಾಡುವ ಪರಿಸ್ಥಿತಿಯಲ್ಲಿ ನಾವ್ಯಾರೂ ಇಲ್ಲ. ರಾಹುಲ್ ಗಾಂಧಿ ಅವರೂ ಅದನ್ನು ಮಾಡಿಲ್ಲ. ಅವರು ಕೆಲವು ಅಭಿಪ್ರಾಯ ತಿಳಿಸಿರಬಹುದು, ಅದು ನಮ್ಮ ಆಂತರಿಕ ವ್ಯವಸ್ಥೆ ಎಂದರು.
ನಾವು ನಮ್ಮ ದೇಶವನ್ನು ಎಂದೂ ಬಿಟ್ಟುಕೊಡುವುದಿಲ್ಲ. ನಮ್ಮ ಸಂವಿಧಾನವನ್ನು ಇಡೀ ಪ್ರಪಂಚ ಒಪ್ಪಿದೆ. ನಮ್ಮ ದೇಶದ ಒಂದೊಂದು ರಾಜ್ಯದಷ್ಟು ವಿಸ್ತೀರ್ಣದಲ್ಲಿ ಬೇರೆ ದೇಶಗಳಿವೆ. ನಾವು ಭಾರತದ ರಾಷ್ಟ್ರಧ್ವಜ ಹಾಕಿಕೊಂಡು ವಿದೇಶಕ್ಕೆ ಹೋಗಿ ಅದರ ವಿರುದ್ದವೇ ಮಾತನಾಡಲಾಗುತ್ತಾ? ನಾವು ನಮ್ಮ ದೇಶವನ್ನು ಪ್ರೀತಿಸುವವರು, ಗೌರವಿಸುವವರು, ದೇಶ ಭಕ್ತಿಯುಳ್ಳವರು. ನಾವು ಮೊದಲು ಭಾರತೀಯರು. ಈ ವಿಚಾರದಲ್ಲಿ ಎಲ್ಲ ಕನ್ನಡಗರಿಗೂ ಹೆಮ್ಮೆ ಇದೆ. ನಾಳೆ ದೇಶಾದ್ಯಂತ 77ನೇ ಗಣರಾಜ್ಯೋತ್ಸವ ಸಮಾರಂಭವಿದೆ. ದೇಶದ ಪ್ರಗತಿಯನ್ನು ಸಂಭ್ರಮದಿಂದ ಆಚರಿಸೋಣ. ಹೃದಯ ಶ್ರೀಮಂತಿಕೆಯಿಂದ ಆಲೋಚಿಸೋಣ. ಅದನ್ನು ಬಿಟ್ಟು ಈ ವಿಚಾರವನ್ನು ರಾಜಕೀಯ ಮಾಡುವುದು ಬೇಡ. ಬಿಜೆಪಿಯವರ ಟೀಕೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದರು.
