ಪಠ್ಯದ ಜತೆಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಬಾಹ್ಯ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕೆನ್ನುವುದು ಸಂಸ್ಥೆಯ ಉದ್ದೇಶ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಚಿಂತನೆ ನಡೆಸಲಾಗುತ್ತಿದ್ದು, ಅದರ ಒಂದು ಭಾಗವೇ ಮಕ್ಕಳ ಸಂತೆಯಾಗಿದೆ ಎಂದು ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ತಿಮ್ಮಣ್ಣ ವಿ.ಅರಳಿಕಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಪಠ್ಯದ ಜತೆಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಬಾಹ್ಯ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕೆನ್ನುವುದು ಸಂಸ್ಥೆಯ ಉದ್ದೇಶ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಚಿಂತನೆ ನಡೆಸಲಾಗುತ್ತಿದ್ದು, ಅದರ ಒಂದು ಭಾಗವೇ ಮಕ್ಕಳ ಸಂತೆಯಾಗಿದೆ ಎಂದು ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ತಿಮ್ಮಣ್ಣ ವಿ.ಅರಳಿಕಟ್ಟಿ ಹೇಳಿದರು.ನಗರದ ಅರಳಿಕಟ್ಟಿ ಫೌಂಡೇಶನ್‌ದ ಬಿಲ್ ಮೆಮೋರಿಯಲ್ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವ ಮನಸ್ಸುಗಳನ್ನು ಆರ್ಥಿಕ ಜ್ಞಾನದಿಂದ ಸಬಲೀಕರಿಸುವುದು ಮಕ್ಕಳ ಸಂತೆಯ ಧ್ಯೇಯವಾಗಿದೆ. ಮಕ್ಕಳ ಸಂತೆ ಕಾರ್ಯಗಳನ್ನು ಮಾಡುವುದರಿಂದ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ, ಸೃಜನಶೀಲತೆ, ಬದುಕಿನಲ್ಲಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವ ಆತ್ಮವಿಶ್ವಾಸ ಮತ್ತು ಧೈರ್ಯ ಹಾಗೆಯೇ ಸಮುದಾಯದೊಂದಿಗೆ ಸಂಪರ್ಕ ಬೆಳೆಯಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.ಶಾಲೆಯ ಕಾರ್ಯದರ್ಶಿ ವಿನಾಯಕ ತಿ.ಅರಳಿಕಟ್ಟಿ, ಪ್ರಾಂಶುಪಾಲ ಗಣೇಶ್.ಎಂ, ಶಾಲಾ ಶಿಕ್ಷಕ -ಶಿಕ್ಷಕೇತರ ಸಿಬ್ಬಂದಿ ಮತ್ತು ಪಾಲಕ, ಪೋಷಕರು ಉಪಸ್ಥಿತರಿದ್ದರು.ಕೈಚಳಕ ತೋರಿಸಿದ ವಿದ್ಯಾರ್ಥಿಗಳು
ಅರಳಿಕಟ್ಟಿ ಫೌಂಡೇಶನ್‌ದ ನಗರದ ಬಿಲ್ ಮೆಮೋರಿಯಲ್ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿನೂತನ ಮತ್ತು ವಿಭಿನ್ನ ಕಾರ್ಯಕ್ರಮವಾದ ಮಕ್ಕಳ ಸಂತೆಯಲ್ಲಿ ಎಲ್ಲವೂ ಕ್ಷಣಾರ್ಧದಲ್ಲಿ ಜಾದೂಲೋಕದಂತೆ ಸೃಷ್ಟಿಯಾಗಿ ಬಿಟ್ಟಿತು. ಶಾಲೆಗೆ ಹೋಗಿ ಅಂಕಿ ಕಲಿ, ಸಂತೆಗೆ ಹೋಗಿ ಲೆಕ್ಕ ಕಲಿ ಎಂಬ ನಾಣ್ಣುಡಿಯಂತೆ ಇಂದು ಮಕ್ಕಳೆಲ್ಲ ಸಂಭ್ರಮದಿಂದ ಸಂತೆಯಲ್ಲಿ ತಮ್ಮ ಕೈಚಳಕ ತೋರಿಸಲು ಉತ್ಸುಕರಾಗಿದ್ದಲ್ಲದೇ ವ್ಯಾಪಾರ ಮಾಡುವ ಮೂಲಕ ಕಾರ್ಯಕ್ರಮದ ಧ್ಯೇಯವನ್ನು ಯಶಸ್ವಿಗೊಳಿಸಿದರು.ಮಕ್ಕಳ ಸಂತೆಯಲ್ಲಿ ಚಿಣ್ಣರು ವ್ಯಾಪಾರ ಮಾಡಿದರೇ, ಸಂತೆಯಲ್ಲಿ ಪಾಲ್ಗೊಂಡ ಪೋಷಕರಿಗೆ ತೊದಲನುಡಿಯಲ್ಲಿಯೇ ವ್ಯವಹರಿಸಿ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸುತ್ತಿದ್ದರು. ಮಕ್ಕಳು ಗ್ರಾಮೀಣ ಛದ್ಮವೇಷದಲ್ಲಿ ವ್ಯಾಪಾರಕ್ಕೆ ಕೂರಿಸಿದ್ದರೇ ಕೆಲ ಪೋಷಕರು ಗ್ರಾಹಕರೊಂದಿಗೆ ವ್ಯವಹರಿಸಲು ನೆರವಾಗುತ್ತಿರುವುದು ಸಾಮಾನ್ಯವಾಗಿತ್ತು. ಅದರ ಜೊತೆ ಮಕ್ಕಳು ತೊದಲ ನುಡಿಯಲ್ಲಿ ಮಾರಾಟದ ವಸ್ತುಗಳನ್ನು ಮತ್ತು ಅದರ ಬೆಲೆಯನ್ನು ಕೂಗಿ ಕೂಗಿ ಗ್ರಾಹಕರನ್ನು ಕರೆಯುತ್ತಿದ್ದ ದೃಶ್ಯ ಅಲ್ಲಿ ನೆರೆದಿದ್ದವರನ್ನು ಸೆಳೆಯಿತು. ಮಕ್ಕಳ ಸಂತೆಗೆ ಆಗಮಿಸಿದ ಪೋಷಕರು ವಸ್ತುಗಳನ್ನು ಖರೀದಿಸಿದರು. ಅಲ್ಲದೇ, ಮಕ್ಕಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಚಿಣ್ಣರ ಸಂತೆಗೆ ಪ್ರೋತ್ಸಾಹ ನೀಡಿದರು. ಮಕ್ಕಳಿಗೆ ವ್ಯಾವಹಾರಿಕ ಜ್ಞಾನವನ್ನೂ ಬೆಳೆಸುವುದಕ್ಕಾಗಿ ಒಂದು ದಿನದ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು. ಸಂತೆಯಲ್ಲಿ ಹಣ್ಣು- ಹಂಪಲು, ತಿಂಡಿ- ತಿನಿಸು, ಜ್ಯೂಸ್, ಹೋಂ ಮೇಡ್ ಖಾದ್ಯಗಳು ಮುಂತಾದವುಗಳನ್ನು ಮಕ್ಕಳು ಮಾರಾಟ ಮಾಡಿದರು. ಇತ್ತೀಚಿನ ದಿನಗಳಲ್ಲಿ ಸಂತೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ, ವಾರದ ಸಂತೆ ಎಂದರೆ ಏನು? ಎಂಬ ಪರಿಕಲ್ಪನೆ ಮಕ್ಕಳಲ್ಲಿ ಮೂಡಿಸುವ ಒಂದು ಪ್ರಯತ್ನ ಇದಾಗಿತ್ತು.ಶಿಕ್ಷಣದೊಂದಿಗೆ ವ್ಯವಹಾರಿಕ ಜ್ಞಾನ ಬೆಳೆಯಲು ಮಕ್ಕಳ ಸಂತೆ ಕಾರ್ಯಕ್ರಮ ಸಹಕಾರಿಯಾಗಲಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ವಿಭಾಗಗಳಲ್ಲೂ ಮಕ್ಕಳನ್ನು ಸಜ್ಜುಗೊಳಿಸುವ ಅಗತ್ಯವಿದೆ. ವಿದ್ಯಾರ್ಥಿಗಳನ್ನು ಕೇವಲ ನಾಲ್ಕು ಗೋಡೆಗಳ ನಡುವಿನ ಶೈಕ್ಷಣಿಕ ಪದ್ಧತಿಗೆ ಸೀಮಿತಗೊಳಿಸದೇ ಹೊರ ಪ್ರಪಂಚದ ಜ್ಞಾನ ಕಲಿಸಿದರೆ ಮಾನಸಿಕವಾಗಿ ಸದೃಢರಾಗಲಿದ್ದಾರೆ.-ಡಾ.ತಿಮ್ಮಣ್ಣ ವಿ.ಅರಳಿಕಟ್ಟಿ,
ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು.