ಬೆಂಗಳೂರಿಗೆ ಮತ್ತೊಂದು ನಿಮ್ಹಾನ್ಸ್ ತರಲು ಚಿಂತನೆ

| Published : Jun 18 2024, 12:54 AM IST / Updated: Jun 18 2024, 12:45 PM IST

ಸಾರಾಂಶ

 , ಬೆಂಗಳೂರಿಗೆ ಮತ್ತೊಂದು ನಿಮ್ಹಾನ್ಸ್ ಆಸ್ಪತ್ರೆ, ಹಾರೋಹಳ್ಳಿವರೆಗೂ ಮೆಟ್ರೋ ವಿಸ್ತರಣೆ ಮಾಡುವುದು ಸೇರಿದಂತೆ ಹಲವಾರು ಯೋಜನೆಗಳನ್ನು ತರಲು ಚಿಂತನೆ ನಡೆಸಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.

ಕನಕಪುರ: ಬೆಂಗಳೂರಿನಲ್ಲಿ ಜನಸಂಖ್ಯೆ ಕೋಟಿ ದಾಟಿದೆ, ಸಬ್ ಅರ್ಬನ್ ರೈಲ್ವೆ, ಬೆಂಗಳೂರಿಗೆ ಮತ್ತೊಂದು ನಿಮ್ಹಾನ್ಸ್ ಆಸ್ಪತ್ರೆ, ಹಾರೋಹಳ್ಳಿವರೆಗೂ ಮೆಟ್ರೋ ವಿಸ್ತರಣೆ ಮಾಡುವುದು ಸೇರಿದಂತೆ ಹಲವಾರು ಯೋಜನೆಗಳನ್ನು ತರಲು ಚಿಂತನೆ ನಡೆಸಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.

ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಪಕ್ಷದ ಮುಖಂಡರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿ, ನೂತನ ಸಂಸದರ ಅಭಿವೃದ್ಧಿ ಚಿಂತನೆಗಳ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಏಳು ದಶಕಗಳ ಹಿಂದೆ ಬೆಂಗಳೂರಿನಲ್ಲಿ 2೦ ಲಕ್ಷ ಜನಸಂಖ್ಯೆ ಇತ್ತು. ಅಂದಿನ ಜನಸಂಖ್ಯೆಗೆ ಅನುಗುಣವಾಗಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣ ಮಾಡಲಾಗಿತ್ತು. ಪ್ರಸ್ತುತ ಬೆಂಗಳೂರು ನಗರದಲ್ಲಿ 1.4೦ ಕೋಟಿ ಜನಸಂಖ್ಯೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಮತ್ತೊಂದು ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣ ಮಾಡುವ ಅಗತ್ಯವಿದೆ. ಜೊತೆಗೆ ಜನರಿಗೆ ಅನುಕೂಲವಾಗುವಂತೆ ಸಬ್ ಅರ್ಬನ್ ರೈಲ್ವೆ ಯೋಜನೆ ತರಲು ಚಿಂತನೆ ಇದೆ. ಅದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಹಾರೋಹಳ್ಳಿ ಕೈಗಾರಿಕಾ ಕ್ಷೇತ್ರದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿದೆ. ಜೊತೆಗೆ ಬೆಂಗಳೂರಿಗೆ ಸಮೀಪವಿದೆ. ಹಾರೋಹಳ್ಳಿವರೆಗೂ ಮೆಟ್ರೋ ವಿಸ್ತರಣೆ ಮಾಡಿದರೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಅಲ್ಲದೆ ಬೆಂಗಳೂರಿಗೆ ಓಡಾಡಲು ಜನರಿಗೂ ಇದರಿಂದ ಬಹಳಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.

ರೇಷ್ಮೆ ಕೃಷಿಯಲ್ಲಿ ರೈತರಿಗೆ ಸಾಕಷ್ಟು ಸವಾಲುಗಳು, ಸಮಸ್ಯೆಗಳಿವೆ. ಆಧುನಿಕ ತಂತ್ರಜ್ಞಾನ ಆಧಾರಿತ ಕೃಷಿಯನ್ನು ರೇಷ್ಮೆ ಬೆಳೆಗಾರರು ಯಾವ ರೀತಿ ಅಳವಡಿಸಿಕೊಳ್ಳಬೇಕು. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಮಾರುಕಟ್ಟೆ ವೃದ್ಧಿಸಿ ಕೊಡುವ ಬಗ್ಗೆ ಹಲವಾರು ಚಿಂತನೆಗಳು ಆಲೋಚನೆ ಗಳನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

ನೂತನ ಸಂಸದರು ಕೇಂದ್ರ ಆರೋಗ್ಯ ಸಚಿವರಾಗುತ್ತಾರೆ ಎಂಬ ಆಶಾಭಾವನೆ ಮತದಾರರಿಗೆ ಇತ್ತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಸರಳ ಬಹುಮತ ಸಿಗಲಿಲ್ಲ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆ ಆಗಿರುವುದರಿಂದ ಹಗ್ಗ ಜಗ್ಗಾಟ ನಡೆಯಬಾರದು. ಹಾಗಾಗಿ ಮಿತ್ರ ಪಕ್ಷಗಳನ್ನು ಪರಿಗಣಿಸಬೇಕಾಗುತ್ತದೆ. ಬಿಜೆಪಿಗೆ ಸರಳ ಬಹುಮತ ಬಂದಿದ್ದರೆ ನಮಗೂ ಅವಕಾಶ ಸಿಗುತ್ತಿತ್ತು. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಆಶಯದಂತೆ ಅವಕಾಶ ಸಿಗಬಹುದು ಕಾದು ನೋಡೋಣ ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಸಾಲಿನಲ್ಲಿ ಕೈಗೊಂಡಿರುವ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಿಲ್ಲುವುದಿಲ್ಲ, ಮುಂದುವರಿಯುತ್ತವೆ. ಜೊತೆಗೆ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರು. ರಸ್ತೆಗಳು, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳು ಸೇರಿದಂತೆ ನರೇಗಾ ಕೆಲಸ ಕಾರ್ಯಗಳಿಗೂ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡುವ ಗುರಿ ಇದೆ. ಕೇಂದ್ರ ಸರ್ಕಾರ ಮತ್ತು ಕೆಲವು ರಾಜ್ಯ ಸರ್ಕಾರದ ಎರಡು ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.

ಕನಕಪುರ ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಮತದಾರರು ನಮಗೆ ಆಶೀರ್ವಾದ ಮಾಡಿದ್ದಾರೆ ಗುರುವಾರ ಕನಕಪುರ ಕ್ಷೇತ್ರಕ್ಕೆ ಅಧ್ಯಕ್ಷ ಭೇಟಿ ನೀಡಿ ಮತ ನೀಡಿದ ಮತದಾರರಿಗೆ ಧನ್ಯವಾದ ಸಲ್ಲಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜುಲೈ ೩ರವರೆಗೂ ಲೋಕಸಭಾ ಅಧಿವೇಶನ ನಡೆಯಲಿದೆ ಅದಕ್ಕೂ ಮುನ್ನ ಗುರುವಾರ ಕ್ಷೇತ್ರಕ್ಕೆ ಭೇಟಿ ನೀಡಿ ಹೋಬಳಿ ಮಟ್ಟದಲ್ಲಿ ಮತ ನೀಡಿದ ಮತದಾರರಿಗೆ ಧನ್ಯವಾದ ಸಲ್ಲಿಸುವ ಕೆಲಸ ಮಾಡುತ್ತೇವೆ ಎಂದರು.

ಈ ಸಂದಭರ್ದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ನಾಗರಾಜು, ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಚಿನ್ನಸ್ವಾಮಿ, ಜೆಡಿಎಸ್ ಮುಖಂಡ ಪುಟ್ಟರಾಜು, ಗ್ರಾಪಂ ಸದಸ್ಯ ಕುಮಾರ ಸ್ವಾಮಿ, ಸೀರೇಗೌಡ, ಯೂನಿಸ್ ಖಾನ್, ಶಂಕರ್, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.