ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಕಂಬಳಕ್ಕೆ ಅದರದ್ದೇ ಆದ ಅಭಿಮಾನಿಗಳ ಬಳಗವಿದ್ದು, ಗ್ರಾಮೀಣ ಪ್ರದೇಶದ ಸ್ವಾಭಿಮಾನಿ ಕ್ರೀಡೆಯಾಗಿರುವ ಕಂಬಳವು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಪೇಟಾದವರು ಏನೇ ಕಸರತ್ತು ಮಾಡಿದರೂ ಕಂಬಳವನ್ನು ನಿಲ್ಲಿಸಲು ಸಾಧ್ಯವಿಲ್ಲ. ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಯಶಸ್ವಿ ಕಂಬಳ ನಡೆಸಲಾಗಿದೆ, ಮುಂದೆ ಮುಂಬೈ, ಶಿವಮೊಗ್ಗದಲ್ಲೂ, ಸಾಧ್ಯವಾದರೆ ದುಬೈನಲ್ಲೂ ಕಂಬಳ ನಡೆಸಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಶನಿವಾರ ರಾತ್ರಿ ನಡೆದ ಕೋಟಿ-ಚೆನ್ನಯ ಕಂಬಳದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪೇಟಾದವರು ವ್ಯವಸ್ಥಿತವಾಗಿ ಕಂಬಳದ ವಿರುದ್ಧ ಕಾನೂನು ಹೋರಾಟ ಮಾಡುತ್ತಿದ್ದಾರೆ. ಆದರೆ ನಾನು ಈ ಕುರಿತು ಸುಪ್ರಿಂ ಕೋರ್ಟ್‌ಗೆ ಮನವರಿಕೆ ಮಾಡಿದ್ದೇನೆ. ರಾಜ್ಯ ಸರ್ಕಾರದಿಂದ ಪ್ರತೀ ಕಂಬಳಕ್ಕೆ ೫ ಲಕ್ಷ ರು. ತೆಗೆಸಿಕೊಟ್ಟಿದ್ದೇನೆ. ತುಳು ಭಾಷೆಗೆ ಗೌರವ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ಮುಂದೆ ಬೆಂಗಳೂರಿನಲ್ಲಿ ತುಳುಭವನ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಂಬಳ ಕೇವಲ ಕರಾವಳಿ ಜಿಲ್ಲೆಗೆ ಸೀಮಿತವಾಗಿಲ್ಲ ಎಂಬುದಕ್ಕೆ ದೂರದ ಬೆಂಗಳೂರಿನಿಂದ ಚಲನಚಿತ್ರ ನಟ-ನಟಿಯರು ಬಂದು ವೀಕ್ಷಿಸುತ್ತಿರುವುದು ಸಾಕ್ಷಿಯಾಗಿದೆ ಎಂದರು.ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಶುಭಹಾರೈಸಿದರು. ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ., ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಉಪಾಧ್ಯಕ್ಷ ಶಿವರಾಮ ಆಳ್ವ, ಸದಸ್ಯ ಯೋಗೀಶ್ ಸಾಮಾನಿ ಸಂಪಿಗೆದಡಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಕಂಬಳ ಸಮಿತಿ ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅಗರಿ ನವೀನ್ ಭಂಡಾರಿ (ಆರ್‌ಬಿಐ ಉತ್ತರ ವಲಯದ ಮಾಜಿ ನಿರ್ದೇಶಕ), ಸುರೇಶ್ ಭಟ್ ಬಲ್ನಾಡು (ಕೃಷಿ ತಜ್ಞ), ವಿಜಯ ಹಾರ್ವಿನ್ (ಶೈಕ್ಷಣಿಕ-ಧಾರ್ಮಿಕ), ಹರಿಪ್ರಸಾದ್ ರೈ (ಪುತ್ತೂರು ಎಚ್‌ಪಿಆರ್‌ಎಸ್ ನರ್ಸಿಂಗ್ ಕಾಲೇಜು ಸಂಸ್ಥಾಪಕ), ಸಾಲೆತ್ತೂರು ಪಂಜರಕೋಡಿ ಮಹಮ್ಮದ್ ಕುಂಞ ಮತ್ತು ಬಾಳೆಪುಣಿ ಸಂಕ ಇದುಕುಂಞ ಬ್ಯಾರಿ (ಕಂಬಳ ಕ್ಷೇತ್ರ), ವಿನ್ಸಂಟ್ ಫರ್ನಾಂಡಿಸ್ (ಸಾಮಾಜಿಕ ಮತ್ತು ಶೈಕ್ಷಣಿಕ) ಅವರನ್ನು ಸನ್ಮಾನಿಸಲಾಯಿತು. ಮಧ್ಯಾಹ್ನ ನಡೆದ ರಾಜ್ಯಮಟ್ಟದ ಕೆಸರುಗದ್ದೆ ಕಂಬಳದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ನಟ ಗಗನ್ ಚಿನ್ನಪ್ಪ, ನಟಿ ಕಾರುಣ್ಯ ರಾಮ್ ಮೊದಲಾದವರು ಪಾಲ್ಗೊಂಡು ಕಂಬಳಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ತೀರ್ಪುಗಾರ ನಿರಂಜನ ರೈ ಮಠಂತಬೆಟ್ಟು ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ ಪೊರ್ದಾಲ್ ನಿರ್ವಹಿಸಿದರು.