ಸಾರಾಂಶ
ವಿಜಯಪುರ: ರೈತರಿಗೆ ಬಡ್ಡಿ ರಹಿತ ಸಾಲ ವಿತರಣೆಗೆ ಹಾಗೂ ಮಹಿಳಾ ಸಂಘಗಳಿಗೆ ಕಿರು ಸಾಲ ನೀಡಿಕೆಗೆ ಚಿಂತನೆ ನಡೆಸಿರುವುದಾಗಿ ವಿಎಸ್ಎಸ್ಎನ್ ನ ನೂತನ ಅಧ್ಯಕ್ಷ ಎಂ ವೀರಣ್ಣ ತಿಳಿಸಿದರು.
ವಿಜಯಪುರ ಪಟ್ಟಣದ ರೈತರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣಾಭಿವೃದ್ಧಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ನಂತರ ವರದಿಗಾರರೊಂದಿಗೆ ಮಾತನಾಡಿದರು.ಸಂಘದ ಕಟ್ಟಡದ ಬಗ್ಗೆ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿರುವುದರಿಂದ ಶೀಘ್ರದಲ್ಲೇ ಅದು ಮುಗಿದರೆ ನೂತನ ಕಟ್ಟಡ ನಿರ್ಮಿಸಿ ಬ್ಯಾಂಕ್ ರೀತಿಯಲ್ಲಿಯೇ ಸಹಕಾರ ಬ್ಯಾಂಕ್ ನಿರ್ಮಿಸಲಾಗುವುದೆಂದು ತಿಳಿಸಿದರು.
ಗೊಡ್ಲು ಮುದ್ದೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬಿ. ಚೇತನ್ ಗೌಡ ಮಾತನಾಡಿ, ಮೂರು ಬಾರಿ ಅಧ್ಯಕ್ಷರಾಗಿ ಅನುಭವ ಇರುವ ವೀರಣ್ಣನವರು ನಾಲ್ಕನೇ ಬಾರಿ ಅಧ್ಯಕ್ಷರಾಗಿರುವುದು ಸಂಘದ ಏಳಿಗೆಗೆ ತುಂಬಾ ಅನುಕೂಲವಾಗುತ್ತದೆ. ಅದೇ ರೀತಿ ರೈತರು ಸಂಘದ ಬೆನ್ನೆಲುಬಾಗಿದ್ದು, ಅವರ ಹಿತ ಕಾಯಬೇಕೆಂದು ಪಕ್ಷಾತೀತವಾಗಿ ಸದಸ್ಯರು ಹಾಗೂ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲಾ ಮುಖಂಡರಿಗೆ ಅಭಿನಂದನೆ ತಿಳಿಸಿದರು.ಕೆಪಿಸಿಸಿ ಸದಸ್ಯ, ಕಾಂಗ್ರೆಸ್ ಜಿಲ್ಲಾ ಮಾಜಿ ಎಸ್.ಸಿ ಘಟಕದ ಅಧ್ಯಕ್ಷ ಚಿನ್ನಪ್ಪ ಮಾತನಾಡಿ, ಕೃಷಿ ಮತ್ತು ಹೈನುಗಾರಿಕೆಯನ್ನೇ ನಂಬಿರುವ ರೈತರು ಸಂಘದಲ್ಲಿ ದೊರೆಯುವ ಅನುಕೂಲಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕೆಂದು ತಿಳಿಸಿದರು.
ಚುನಾವಣಾ ಅಧಿಕಾರಿಯಾಗಿ ಸಹಕಾರ ಸಂಘದ ಶಿವಕುಮಾರ್ ಕಾರ್ಯನಿರ್ವಹಿಸಿದ್ದು, ಸಹಾಯಕರಾಗಿ ವಿಎಸ್ಎಸ್ಎನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಮ್ ಸುಂದರ್ ಕಾರ್ಯ ನಿರ್ವಹಿಸಿದರು.ಸಂಘದ ಉಪಾಧ್ಯಕ್ಷರಾಗಿ ಜಿ. ನರಸಿಂಹಪ್ಪ ಆಯ್ಕೆಯಾಗಿದ್ದು, ನೂತನ ಸದಸ್ಯರಾಗಿ ಆರ್. ಮುನಿರಾಜು, ಪಿ. ನಾಗರಾಜು, ಎಸ್. ಶಿವಾನಂದ್, ಪಿಎಂ ಚಂದ್ರು, ಎಂ. ತಿಮ್ಮರಾಯಪ್ಪ, ಕೆ. ನಾಗರಾಜು, ಎಂ. ಮುನೇಗೌಡ, ಪುಷ್ಪಮ್ಮ, ನಾಗರತ್ನಮ್ಮ, ಜೆ. ವಿಜಯ್ ರಾಣಿ ಹಾಗೂ ಮುದ್ದೇನಹಳ್ಳಿ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ನಾರಾಯಣಸ್ವಾಮಿ, ಜಗದೀಶ್, ಮುಖಂಡರಾದ ವಿರೂಪಾಕ್ಷಪ್ಪ, ನಾರಾಯಣಪ್ಪ, ಗೋವಿಂದಪ್ಪ ಉಪಸ್ಥಿತರಿದ್ದರು.