ಕನ್ನಡಪ್ರಭ ವಾರ್ತೆ ನಾಗಮಂಗಲ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಈವರೆಗೆ ಗೃಹಲಕ್ಷ್ಮಿ ಯೋಜನೆಯ 31 ಕಂತುಗಳು ಬಿಡುಗಡೆಯಾಗಿ ಪ್ರತಿ ಫಲಾನುಭವಿಯ ಬ್ಯಾಂಕ್ ಖಾತೆಗೆ ₹62 ಸಾವಿರ ಹಣ ಜಮೆ ಆಗಿದೆ ಎಂದು ಶಾಸಕ ಎನ್.ಚಲುವರಾಯಸ್ವಾಮಿ ಹೇಳಿದರು.ಗ್ಯಾರಂಟಿ ಯೋಜನೆಗಳ 3 ವರ್ಷದ ಸಂಭ್ರಮಾಚರಣೆ ಪ್ರಯುಕ್ತ ತಾಲೂಕಿನ ಚಿಕ್ಕವೀರನಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡು ಯಶಸ್ವಿಯಾಗಿ ಮೂರು ವರ್ಷ ಪೂರೈಸಿರುವ ಹಿನ್ನೆಲೆ ಪ್ರತಿ ತಾಲೂಕಿನಲ್ಲಿ ಪರಿಸರ ಸಂರಕ್ಷಣೆಗಾಗಿ ಸಸಿ ನೆಡುವ ಮೂಲಕ ಸಂಭ್ರಮಾಚರಣೆ ಜೊತೆಗೆ ಗ್ಯಾರಂಟಿ ಯೋಜನೆಗಳ ಕುರಿತು ಜನರಿಗೆ ಅರಿವು ಮೂಡಿಸಬೇಕೆಂಬುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದರು.ಗ್ಯಾರಂಟಿ ಯೋಜನೆಗಳನ್ನು ಸಹಿಸಿಕೊಳ್ಳದ ವಿರೋಧ ಪಕ್ಷದವರು ಅನೇಕ ಬಾರಿ ರಾಜ್ಯದ ಜನರಿಗೆ ಅನಾವಶ್ಯಕವಾಗಿ ತಪ್ಪು ಮಾಹಿತಿ ಕೊಡುತ್ತಿದ್ದರು. ಇದಕ್ಕೆ ತೆರೆ ಎಳೆಯಲು ಗ್ಯಾರಂಟಿ ಯೋಜನೆಗಳ 3 ವರ್ಷದ ಸಂಭ್ರಮ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ನಿಜವಾದ ಫಲಾನುಭವಿಗಳು ಯೋಜನೆಗಳಿಂದ ವಂಚಿತರಾಗಿದ್ದರೆ ಮಾತ್ರ ಸೇರ್ಪಡೆ ಮಾಡಲು ಅವಕಾಶವಿದೆ. ಫಲಾನುಭವಿ ಮೃತಹೊಂದಿದ್ದರೆ ಅಥವಾ ತಪ್ಪು ಮಾಹಿತಿ ಕೊಟ್ಟು ಅನಾವಶ್ಯಕವಾಗಿ ಮತ್ತೊಂದು ಬ್ಯಾಂಕ್ ಉಳಿತಾಯ ಖಾತೆ ಹೊಂದಿದ್ದರೆ ಅವುಗಳನ್ನು ಪತ್ತೆಹಚ್ಚಿ ಕೈಬಿಡುವ ಸಲುವಾಗಿ ಪರಿಷ್ಕರಣೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಹೇಳಿದರು.
ಯುವ ನಿಧಿ ಯೋಜನೆಯಡಿ ಕಳೆದ ಆರು ತಿಂಗಳಲ್ಲಿ ತಾಲೂಕಿನ ಒಟ್ಟು 10,478 ಫಲಾನುಭವಿಗಳಿಗೆ ₹3.12ಕೋಟಿ ಡಿಬಿಟಿ ಹಣ ವರ್ಗಾವಣೆಯಾಗಿದೆ. ತಾಲೂಕಿನಲ್ಲಿ 57,123 ವಿದ್ಯುತ್ ಗ್ರಾಹಕರು ಫಲಾನುಭವಿಗಳಾಗಿ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ನಾಗಮಂಗಲ ಘಟಕದ 72 ಸಾರಿಗೆ ಬಸ್‌ಗಳಲ್ಲಿ ಪ್ರತಿನಿತ್ಯ ಸುಮಾರು 20 ಸಾವಿರಕ್ಕೂ ಹೆಚ್ಚು ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಿದ್ದು, ಕಳೆದ ಜೂನ್ ತಿಂಗಳಲ್ಲಿ 7,16,352 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇದರಿಂದಾಗಿ ಸರ್ಕಾರದಿಂದ ಸಂಸ್ಥೆಗೆ ₹2,45,84,415 ಹಣ ಪಾವತಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ತಹಸೀಲ್ದಾರ್ ಅಶೋಕ್, ತಾಪಂ ಇಒ ಬಿ.ಎಸ್.ಸತೀಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಸಮಿತಿ ಸದಸ್ಯರಾದ ನೀಲಾ ಮೂರ್ತಿ, ಗೀತಾ, ತಮ್ಮಣ್ಣಗೌಡ, ಹನುಮಂತಯ್ಯ, ವಿ.ಧನರಾಜ್, ವಿನಯ್, ಶರತ್, ರಾಘವೇಂದ್ರ, ಸಿಡಿಪಿಒ ಕೃಷ್ಣಮೂರ್ತಿ, ಮುಖಂಡ ರಮೇಶ್ ಸೇರಿದಂತೆ ಹಲವರು ಇದ್ದರು.