ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಂಡ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಸೌಹಾರ್ದ ತಿಪಟೂರು ವೇದಿಕೆಯಿಂದ ಮೃತರಿಗೆ ಮೇಣದ ದೀಪ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಲಾಯಿತು.ಸೌಹಾರ್ದ ತಿಪಟೂರು ಅಧ್ಯಕ್ಷ ಅಲ್ಲಾಭಕ್ಷ ಮಾತನಾಡಿ ಪಹಲ್ಗಾಮ್ ಉಗ್ರಗಾಮಿಗಳು ಅಮಾಯಕರನ್ನ ಹತ್ಯೆ ಮಾಡಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಕೃತ್ಯವಾಗಿದೆ. ಭಯೋತ್ಪಾದನೆಗೆ ಜಾತಿ ಧರ್ಮ ಇರುವುದಿಲ್ಲ. ದುಷ್ಕೃತ್ಯದ ಹಾಗೂ ಧರ್ಮದ ಅಮಲನ್ನ ತಲೆಗೇರಿಸಿಕೊಂಡವರು ಈ ರೀತಿಯ ಹೀನ ಕೃತ್ಯ ಮಾಡುತ್ತಾರೆ. ಯಾರೋ ದುಷ್ಟರು ಮಾಡಿರುವ ಕೃತ್ಯವನ್ನ ಎಲ್ಲಾ ಮುಸಲ್ಮಾನರ ತಲೆಗೆ ಕಟ್ಟುವ ಕುತಂತ್ರ ನಡೆಯುತ್ತಿದೆ. ಇತ್ತಿಚಿನ ದಿನಗಳಲ್ಲಿ ಧರ್ಮದ ಆಧಾರದಲ್ಲಿ ಅಮಾಯಕರ ಹತ್ಯೆ ಹಾಗೂ ಸಮಾಜವನ್ನು ವಿಭಜನೆ ಮಾಡುವ ಹುನ್ನಾರದ ಬಗ್ಗೆ ನಾಗರೀಕ ಸಮಾಜ ಎಚ್ಚರ ವಹಿಸಬೇಕು. ನಾವೆಲ್ಲ ಭಾರತೀಯರು ಒಗ್ಗಟಿನಿಂದ ಎದುರಿಸಬೇಕು. ಸೌಹಾರ್ದತೆಗೆ ಧಕ್ಕೆ ಬಾರದಂತೆ ಜಾಗೃತರಾಗಬೇಕು ಎಂದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಜಯಾನಂದಯ್ಯ, ರಂಗಾಪುರ ಚನ್ನಬಸವಣ್ಣ, ದೇವರಾಜು ತೀಮ್ಲಾಪುರ, ಸಾಹಿತಿ ಗಂಗಾಧರ್, ಕೃಷ್ಣಮೂರ್ತಿ ಬಿಳಿಗೆರೆ, ಶ್ರೀಕಾಂತ್ ಕೆಳಹಟ್ಟಿ, ರೇಣುಕರಾಧ್ಯ, ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ನಗರಾಧ್ಯಕ್ಷ ಶಫೀ ಉಲ್ಲಾ, ಷರೀಫ್, ಸಮೀ ಉಲ್ಲಾ, ಕಸಾಪ ಅಧ್ಯಕ್ಷ ಬಸವರಾಜು, ಮಂಜಪ್ಪ, ಪ್ರಾಂತ ರೈತ ಸಂಘದ ರಾಜಮ್ಮ, ಮುಖಂಡರಾದ ಮಲ್ಲಿಕಾರ್ಜುನ್, ನಾಗರಾಜು, ಡಿಎಸ್‌ಎಸ್ ಸಂಚಾಲಕ ನಾಗ್ತಿಹಳ್ಳಿ ಕೃಷ್ಣಮೂರ್ತಿ ಸೇರಿದಂತೆ ಕರ್ನಾಟಕ ರಾಜ್ಯ ಪ್ರಾಂತ ರೈತಸಂಘ, ಹಸಿರುಸೇನೆ ಸಂಘ, ಸೌಹಾರ್ದ ಸಂಸ್ಥೆ, ಬೆಲೆಕಾವಲು ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು, ಲಿಂಗಾಯಿತ ಸಂಘಟನೆ, ದಲಿತ ಸಂಘಟನೆಗಳ ಒಕ್ಕೂಟಗಳು ಭಾಗವಹಿಸಿದ್ದವು.