ಬಡ, ಮಧ್ಯಮ ವರ್ಗಕ್ಕೆ ವರದಾನ ಈ ಆಲೂರಿನ ಸರ್ಕಾರಿ ಕಾಲೇಜು

| Published : May 17 2024, 12:36 AM IST

ಬಡ, ಮಧ್ಯಮ ವರ್ಗಕ್ಕೆ ವರದಾನ ಈ ಆಲೂರಿನ ಸರ್ಕಾರಿ ಕಾಲೇಜು
Share this Article
  • FB
  • TW
  • Linkdin
  • Email

ಸಾರಾಂಶ

ಆಲೂರಿನ ಸರ್ಕಾರಿ ಪದವಿ ಕಾಲೇಜು ಎರಡು ದಶಕಗಳ ಹಿಂದೆ ಕೇವಲ ೫೫ ವಿದ್ಯಾರ್ಥಿಗಳಿಂದ ಪ್ರಾರಂಭವಾಗಿಯೀಗ ಒಂದು ಹಂತದಲ್ಲಿ ೪೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವರದಾನವಾಗಿದೆ.

ಎರಡು ದಶಕದ ಹಿಂದೆ 55 ವಿದ್ಯಾರ್ಥಿಗಳಿಂದ ಪ್ರಾರಂಭವಾಗಿದ್ದ ಕಾಲೇಜಜು । ಬಿಬಿಎ, ಬಿಸಿಎ ಕೋರ್ಸು ಆರಂಭ

ಎಂ.ಪಿ.ಹರೀಶ್

ಕನ್ನಡಪ್ರಭ ವಾರ್ತೆ ಆಲೂರು

ಇಲ್ಲಿಯ ಸರ್ಕಾರಿ ಪದವಿ ಕಾಲೇಜು ಎರಡು ದಶಕಗಳ ಹಿಂದೆ ಕೇವಲ ೫೫ ವಿದ್ಯಾರ್ಥಿಗಳಿಂದ ಪ್ರಾರಂಭವಾಗಿಯೀಗ ಒಂದು ಹಂತದಲ್ಲಿ ೪೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವರದಾನವಾಗಿದೆ.

೨೦೦೨ರಲ್ಲಿ ಅಂದಿನ ಶಾಸಕ ದಿವಂಗತ ಬಿ.ಬಿ.ಶಿವಪ್ಪ ರವರು ತಾಲೂಕಿನಲ್ಲಿ ಪದವಿ ಕಾಲೇಜು ಪ್ರಾರಂಭಿಸಲು ವಿಶೇಷ ಆಸಕ್ತಿ ವಹಿಸಿ ಕಾಲೇಜು ಮಂಜೂರು ಮಾಡಿಸಿದರು. ಕಾಲೇಜಿಗೆ ಪ್ರತ್ಯೇಕ ಕಟ್ಟಡವಿಲ್ಲದೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಎರಡು ಕೊಠಡಿಗಳಲ್ಲಿ ಬಿ.ಕಾಂ., ಮತ್ತು ಬಿ.ಎ., ತರಗತಿಗಳು ಪ್ರಾರಂಭವಾದವು. ವಿಶೇಷವೆಂದರೆ ಪ್ರಾಂಶುಪಾಲರು, ಉಪನ್ಯಾಸಕರು ಕುಳಿತುಕೊಳ್ಳಲು ಸ್ಥಳವಿಲ್ಲದೆ ಒಂದೂ ತರಗತಿ ಕೊಠಡಿಯ ಅರ್ಧ ಭಾಗಕ್ಕೆ ಪರದೆ ಕಟ್ಟಿಕೊಂಡು ಎರಡು ವರ್ಷ ಸವೆಸಲಾಯಿತು.

ಒಂದೆಡೆ ಪದವಿಪೂರ್ವ ಕಾಲೇಜಿಗೂ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣವಾಗುತ್ತಿತ್ತು. ಅಂತೆಯೇ ಪದವಿ ಕಾಲೇಜಿಗೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಇದಕ್ಕೆ ಮೂಲ ಕಾರಣವೆಂದರೆ ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಈ ಕಾಲೇಜು ಅತ್ಯಂತ ಫಲಕಾರಿಯಾಗಿ ಗರಿಗೆದರಿತು.

ಕೊಠಡಿ ಕೊರತೆ ತೀವ್ರವಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸರ್ಕಾರಿ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಲೇಜನ್ನು ಸ್ಥಳಾಂತರಿಸಿ ಶಿಕ್ಷಣ ಮುಂದುವರಿಸಲಾಯಿತು. ಎರಡು ವರ್ಷಗಳಲ್ಲಿ ಕೊಠಡಿ ದುಸ್ಥಿತಿಗೆ ತಲುಪಿದ ನಂತರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಕಾಲೇಜು ಸ್ಥಳಾಂತರಗೊಂಡಿತು.

ನಂತರ ಎಚ್.ಎಂ.ವಿಶ್ವನಾಥ್ ರವರು ಶಾಸಕರಾಗಿ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಕೋಟಿ. ರು. ಹಣ ಮಂಜೂರಾಗಿ ಎರಡು ವರ್ಷಗಳಲ್ಲಿ ಕಾಲೇಜಿಗೆ ಸುಂದರವಾದ ಕಟ್ಟಡ ನಿರ್ಮಾಣ ಮಾಡಲಾಯಿತು. ಸದ್ಯ ಹೊಸ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿವೆ.

ನ್ಯಾಕ್ ‘ಬಿ’ ಗ್ರೇಡ್ ಪಡೆದಿರುವ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಿಂದ ಬಿ.ಬಿ.ಎ., ಬಿ.ಸಿ.ಎ. ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. ತಾಲೂಕು ಸುಮಾರು ೨೬೦ ಹಳ್ಳಿಗಳನ್ನೊಳಗೊಂಡಿದೆ. ಬಹುತೇಕ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಾಲೇಜು ವರದಾನವಾಗಿದೆ.

ಕಾಲೇಜು ಪ್ರಾರಂಭದ ದಿನಗಳಲ್ಲಿದ್ದ ಪ್ರಾಂಶುಪಾಲರಾದ ಟಿ.ಪಿ.ಪುಟ್ಟರಾಜು ರವರೇ ಪುನ: ಈ ಕಾಲೇಜಿಗೆ ವರ್ಗಾವಣೆಗೊಂಡು ಬಂದಿದ್ದಾರೆ. ಮಂದಗತಿಯಲ್ಲಿದ್ದ ಕಾಲೇಜು ಈಗ ಶಿಕ್ಷಣ ಮತ್ತು ಇತರೆ ಚಟುವಟಿಕೆಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಸಂಪೂರ್ಣ ಉಚಿತ ಶಿಕ್ಷಣ ಮತ್ತು ಇತರೆ ತರಬೇತಿಗಳು ದೊರಕುವ ಈ ಕಾಲೇಜಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ದಾಖಲಾಗಿ ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು.

ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಸಂಕಷ್ಟ ಕುಟುಂಬಗಳಲ್ಲಿರುವ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಉಚಿತವಾಗಿ ಶಿಕ್ಷಣ ಪಡೆಯಲು ಅವಕಾಶವಿದೆ. ಉತ್ತಮ ಉಪನ್ಯಾಸರನ್ನೊಳಗೊಂಡ ಈ ಕಾಲೇಜಿನಲ್ಲಿ ಶಿಕ್ಷಣ ಪಡೆದು ಡಾಕ್ಟರೇಟ್ ಪದವಿ ಪಡೆದು ಸದ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೇನೆ.

ಲೊಕೇಶ್, ಉಪನ್ಯಾಸಕರು, ಸ.ಪ.ಪೂರ್ವ ಕಾಲೇಜು, ಆಲೂರು.

೨೦೨೩-೨೪ನೇ ಸಾಲಿನಲ್ಲಿ ಮೈಸೂರು ವಿ.ವಿ.ಪದವಿ ಪರೀಕ್ಷೆಯಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುವುದು ನನಗೆ ತುಂಬಾ ಹರ್ಷದಾಯಕವಾಗಿದೆ. ಈ ಕಾಲೇಜಿನಲ್ಲಿ ಶಿಕ್ಷಣ ಪಡೆದ ನನ್ನ ಜೀವನ ಸಾರ್ಥಕವೆನಿಸಿದೆ.

ಕೆ. ಎಂ. ಭೂಮಿಕಾ, ಚಿನ್ನದ ಪದಕ ವಿಜೇತೆ.

ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರಕುವ ಎಲ್ಲ ಸೌಲಭ್ಯಗಳೊಂದಿಗೆ ಉಚಿತ ಬಸ್ ಪಾಸ್, ವಿದ್ಯಾರ್ಥಿವೇತನ, ಕಾಲೇಜು ಸಮೀಪ ಪ್ರತ್ಯೇಕ ವಸತಿ ನಿಲಯ, ವಿದ್ಯಾರ್ಥಿನಿಯರಿಗೆ ವಿಶೇಷ ವಿಶ್ರಾಂತಿ ಕೊಠಡಿ, ಉತ್ತಮ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಮೆಟರಿಂಗ ವ್ಯವಸ್ಥೆ, ಪ್ಲೇಸ್‌ಮೆಂಟ್ ಸೆಲ್‌ನಿಂದ ಪ್ರತಿವರ್ಷ ಉದ್ಯೋಗ ಮೇಳ, ಉಚಿತ ಕಂಪ್ಯೂಟರ್ ತರಬೇತಿ ಸೇರಿದಂತೆ ಹಲವು ಸೌಲಭ್ಯಗಳು ಉಚಿತವಾಗಿ ದೊರಕುತ್ತದೆ. ವಿದ್ಯಾರ್ಥಿಗಳು ದಾಖಲಾಗಿ ಪ್ರಯೋಜನ ಪಡೆಯಬೇಕು.

ಟಿ. ಪಿ. ಪುಟ್ಟರಾಜು, ಪ್ರಾಂಶುಪಾಲರು, ಸ.ಪದವಿ ಕಾಲೇಜು, ಆಲೂರು.