ಸಮಗ್ರ ಕೃಷಿ, ಸಮೃದ್ಧ ಬೆಳೆ- ವಾರ್ಷಿಕ 15 ಲಕ್ಷ ರು. ಆದಾಯ

| Published : Apr 30 2025, 12:36 AM IST

ಸಾರಾಂಶ

ಒಂದು ಎಕರೆಯಲ್ಲಿ ಜಿ9 ಬಾಳೆಯನ್ನು 35 ಟನ್‌ ಬೆಳೆದು, ಪ್ರತಿಕೆಜಿಗೆ 18 ರು.ನಂತೆ ಮಾರಾಟ ಮಾಡಿ, 6.30 ಲಕ್ಷ ರು. ಗಳಿಸಿದ್ದಾರೆ.

- ಹಾಡ್ಯ ರೈತ ದಂಪತಿಯ ಸಾಧನೆ

ಅಂಶಿ ಪ್ರಸನ್ನಕುಮಾರ್‌ಕನ್ನಡಪ್ರಭ ವಾರ್ತೆ ಮೈಸೂರುನಂಜನಗೂಡು ತಾ. ಹಾಡ್ಯದ ಕೆ.ಎಂ. ಭವ್ಯಾ ಹಾಗೂ ಎಚ್‌.ಬಿ. ಜಗದೀಶ್‌ ದಂಪತಿ ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಾ, ಸಮೃದ್ಧ ಬೆಳೆ ಬೆಳೆದು ವಾರ್ಷಿಕ 15 ಲಕ್ಷ ರು. ನಿವ್ವಳ ಲಾಭ ಗಳಿಸುತ್ತಿದ್ದಾರೆ.ಈ ದಂಪತಿಗೆ 2.23 ಎಕರೆ ಸ್ವಂತ ಜಮೀನಿದೆ. ತಾತ- ಮುತ್ತಾತರ ಕಾಲದಿಂದಲೂ ಕೃಷಿಯನ್ನೇ ಅವಲಂಬಿಸಿಕೊಂಡು ಬಂದಿದ್ದಾರೆ. ಬೇರೆಯವರ ಸುಮಾರು ಹತ್ತು ಜಮೀನನ್ನು ಗುತ್ತಿಗೆ ಪಡೆದು ಕೂಡ ಕೃಷಿ ಮಾಡುತ್ತಿದ್ದಾರೆ. ತುಂತುರು ನೀರಾವರಿ ಪದ್ಧತಿ, ಸಾವಯವ ಕೃಷಿ ಪದ್ಧತಿ ಅನುಸರಿಸುತ್ತಾರೆ. ಕೃಷಿ ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತಾರೆ. ಉಪ ಕಸುಬಾಗಿ ಹೈನುಗಾರಿಕೆ, ಕುರಿ ಸಾಕಾಣಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ.ಒಂದು ಎಕರೆಯಲ್ಲಿ ಜಿ9 ಬಾಳೆಯನ್ನು 35 ಟನ್‌ ಬೆಳೆದು, ಪ್ರತಿಕೆಜಿಗೆ 18 ರು.ನಂತೆ ಮಾರಾಟ ಮಾಡಿ, 6.30 ಲಕ್ಷ ರು. ಗಳಿಸಿದ್ದಾರೆ. ಮತ್ತೊಂದು ಎಕರೆಯಲ್ಲಿ ನೇಂದ್ರ ಬಾಳೆಯನ್ನು 19 ಟನ್‌ ಬೆಳೆದು, ಪ್ರತಿ ಕೆಜಿಗೆ 30 ರು.ನಂತೆ ಮಾರಾಟ ಮಾಡಿ, 4.50 ಲಕ್ಷ ರು. ಗಳಿಸಿದ್ದಾರೆ. ಇದಲ್ಲದೇ ಕಲ್ಲಂಗಡಿ, ಮೆಣಸಿನಕಾಯಿ, ಟೊಮೆಟೋ, ಸೌತೆಕಾಯಿ, ಬೀನ್ಸ್‌ ಅನ್ನು ಅಂತರ ಬೆಳೆಯಾಗಿ ಬೆಳೆಯುತ್ತಾರೆ.ನುಗ್ಗೆ-20, ನೇರಳೆ-15, ಸಪೋಟ-4, ಮಾವು-5, ಸೀಬೆ-100, ಸೀತಾಫಲ, ರಾಮಫಲ, ಲಕ್ಷ್ಮಣ ಫಲ ಮರಗಳಿವೆ. ಮೊದಲು ಸೀಬೆ -500 ಮರಗಳಿದ್ದವು. ಹೂಜಿ ಹೊಡೆತದಿಂದ ಕಡಿಮೆಯಾಗಿವೆ. ಇವರು ಕೃಷಿ ಉತ್ಪನ್ನಗಳನ್ನು ಹುರಾ, ಗುಂಡ್ಲುಪೇಟೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಹಸು-5 [3 ಎಚ್‌ಎಫ್‌], ಬಂಡೂರು ಕುರಿ- 30, ಕೋಳಿ- 100 ಇವೆ. ಜಾನುವಾರುಗಳಿಗೆ 10 ಟನ್‌ ಮೇವನ್ನು ಇವರೇ ಬೆಳೆಸುತ್ತಾರೆ. ಜಮೀನಿಗೆ ಸ್ಥಳೀಯ. ಗೊಬ್ಬರ-18 ಟನ್‌, ಕೊಟ್ಟಿಗೆ ಗೊಬ್ಬರ- 5 ಟನ್‌ ಹಾಗೂ ಎರೆಹುಳು ಗೊಬ್ಬರು-20 ಟನ್‌ ಹಾಕುತ್ತಾರೆ. ಇವರೇ ಎರೆಹುಳು ಗೊಬ್ಬರವನ್ನು ತಯಾರಿಸುತ್ತಾರೆ. ಹೈಡ್ರೋಪೋನಿಕ್ಸ್‌ ವ್ಯವಸ್ಥೆಯಲ್ಲಿ ಜೋಳ ಬೆಳೆಯುತ್ತಾರೆ. ಪ್ರತಿ ದಿನ 50-55 ಲೀಟರ್‌ ಹಾಲನ್ನು ಡೇರಿಗೆ ಪೂರೈಸುತ್ತಾರೆ. ಪ್ರತಿ ತಿಂಗಳು ಹಾಲಿನಿಂದಲೇ 40,800 ರು. ಸಂಪಾದಿಸುತ್ತಾರೆ. ಕುರಿ ಮಾರಾಟದಿಂದ 3 ಲಕ್ಷ ರು .ಬರುತ್ತದೆ. ಜೇನು ಮಾರಾಟದಿಂದ 12,500 ರು. ಬರುತ್ತದೆ. ಕೃಷಿ ಹೊಂಡ ಇದ್ದು, ಇದರಿಂದ ಮಳೆ ನೀರು ಸಂಗ್ರಹಿಸಿ ಬಳಸಲಾಗುತ್ತದೆ. ಜೊತೆಗೆ ಕೊಳವೆ ಬಾವಿಗಳ ಅಂತರಜಲ ಮಟ್ಟ ಕೂಡ ಉತ್ತಮವಾಗಲು ನೆರವಾಗಿದೆ. ಮುಂದೆ ಮೀನು ಸಾಕಾಣಿಕೆ ಮಾಡುವ ಉದ್ದೇಶ ಇದೆ.ಸುತ್ತೂರು ಜೆಎಸ್ಎಸ್‌ ಕೆವಿಕೆಯಲ್ಲಿ ಮಣ್ಣಿನ ಪರೀಕ್ಷೆ ಮಾಡಿಸುತ್ತಾರೆ. ಸ್ವಂತ ಜಮೀನಿಗೆ ರಾಸಾಯನಿಕ ಗೊಬ್ಬರ ಬಳಕೆ ಮಾಡುವುದಿಲ್ಲ. ಹೀಗಾಗಿ ಕಡಿಮೆ ಖರ್ಚಿನಿಂದ ಹೆಚ್ಚು ಆದಾಯ ಬರುತ್ತಿದೆ. ಇಳುವರಿ ಕೂಡ ಉತ್ತಮವಾಗಿದೆ. ಯಾವಾಗಲೂ ನಾಲ್ಕೈದು ಆಳುಗಳು ಇದ್ದೇ ಇರುತ್ತಾರೆ.ಕೆ.ಎಂ. ಭವ್ಯಾ ಅವರಿಗೆ 2023ನೇ ಸಾಲಿನಲ್ಲಿ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿಮೇಳದಲ್ಲಿ ನಂಜನಗೂಡು ತಾಲೂಕು ಮಟ್ಟದ ಪ್ರಗತಿಪರ .ಯುವ ರೈತ ಮಹಿಳೆ ಪ್ರಶಸ್ತಿ ನೀಡಲಾಗಿದೆ. ಇವರನ್ನು ನಾಗನಹಳ್ಳಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ನಡೆದ ರೈತ ದಿನಾಚರಣೆಯಲ್ಲಿಯೂ ಸನ್ಮಾನಿಸಲಾಗಿದೆ. ಜಗದೀಶ್‌ ಅವರಿಗೆ 2023-24ನೇ ಸಾಲಿನಲ್ಲಿ ಕೃಷಿ ಇಲಾಖೆಯು ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿದೆ. ಇವರನ್ನು 2023 ರಲ್ಲಿ ನಂಜನಗೂಡು ತಾ. ಕನ್ನಡ ರಾಜ್ಯೋತ್ಸವ ಸಮಾರಂಭ, ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಮತ್ತು ರೈತರ ದಿನಾಚರಣೆ, ತಾಲೂಕು ಕೃಷಿಕ ಸಮಾಜ ಮತ್ತು ಕೃಷಿ ಇಲಾಖೆಯಿಂದ ನಡೆದ ರೈತ ದಿನಾಚರಣೆ, 2024 ರೈತ ದಸರಾದಲ್ಲಿಯೂ ಸನ್ಮಾನಿಸಲಾಗಿದೆ.-ಸಂಪರ್ಕ ವಿಳಾಸಃ ಕೆ,ಎಂ. ಭವ್ಯಾ ಕೋಂ ಎಚ್‌.ಬಿ. ಜಗದೀಶ್‌ಹಾಡ್ಯಹುಲ್ಲಹಳ್ಳಿ ಹೋಬಳಿ,ನಂಜನಗೂಡು ತಾಲೂಕು. ಮೈಸೂರು ಜಿಲ್ಲೆಮೊ. 63628 85952-- ಕೋಟ್‌ವ್ಯವಸಾಯ ಕಷ್ಟ ಅಲ್ಲ, ಕಷ್ಟಪಟ್ಟು ಗೇಮೆ ಮಾಡಬೇಕು. ಆಗ ಸುಲಭವಾಗುತ್ತದೆ. ನಾನು ಬೆಳಗಿನ ಜಾವ 4ಕ್ಕೆ ಎದ್ದರೆ ರಾತ್ರಿ 11 ರವರೆಗೂ ಒಂದಲ್ಲ ಒಂದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತೇನೆ. -ಎಚ್‌.ಬಿ. ಜಗದೀಶ್‌, ಹಾಡ್ಯ