ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಮುಂಬರುವ ಲೋಕಸಭಾ ಚುನಾವಣೆ ಸದೃಢ ರಾಷ್ಟ್ರ ನಿರ್ಮಾಣದ ದೃಷ್ಠಿಯಿಂದ ನಿರ್ಣಾಯಕವಾದ ಚುನಾವಣೆಯಾಗಿದೆ. ಭಾರತದ ಕಲ್ಯಾಣಕ್ಕಾಗಿ ನರೇಂದ್ರ ಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು. ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಥಕ್ಕೆ ಕೊಂಡೊಯ್ದಿರುವ ರಾಘವೇಂದ್ರ ಗೆಲುವು ಖಚಿತ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಪಟ್ಟಣದ ಸಂಸ್ಕೃತಿ ಮಂದಿರದ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ವಿಧಾನಸಭೆ ಒಳಗೆ ಪಾಕಿಸ್ತಾನ್ ಜಿಂದಾಬಾದ್ ಕೂಗಿದವರ ರಕ್ಷಣೆಗೆ ನಿಂತಿರುವ ಕಾಂಗ್ರೆಸ್ ಆಡಳಿತದ ಪರಿಣಾಮ ರಾಜ್ಯದಲ್ಲಿ ದೇಶ ವಿರೋದಿ ಚಟುವಟಿಕೆಗಳು ಹೆಚ್ಚುತ್ತಿದ್ದು, ಬಾಂಬ್ ಸಿಡಿಸುವವರಿಗೆ ರಾಜ್ಯದಲ್ಲಿರುವುದು ನಮ್ದೆ ಸರ್ಕಾರ ಇದೆ ಎಂಬಷ್ಟರ ಮಟ್ಟಿಗೆ ವಿಶ್ವಾಸ ಮೂಡಿರುವುದು ವಿಷಾದನೀಯ ಎಂದರು.
ಭಯೋತ್ಪಾದಕ ಚಟುವಟಿಕೆಗೆ ಸಂಬಂಧಿಸಿ ಪ್ರತಿದಿನ ತೀರ್ಥಹಳ್ಳಿ ಕುಕ್ಕರ್ ಬಾಂಬ್ ಸಿಡಿಸಿದವರ ಕುಖ್ಯಾತಿ ದೇಶಾದ್ಯಂತ ಹರಡಿರುವುದು ಈ ನೆಲದ ಘನತೆಗೆ ಕುಂದುಂಟು ಮಾಡಿದೆ. ಹಿಂದೂ ಯುವಕರ ಐಡಿ ಬಳಸಿ ಫೇಕ್ ಖಾತೆ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ಸಿಮ್ ಕಾರ್ಡ್ ಒದಗಿಸಲಾಗುತ್ತಿದೆ ಎಂಬ ಆತಂಕಕಾರಿ ಸಂಗತಿಯೂ ಹೊರ ಬಂದಿರುವುದು ಭಯಬೀಳುವಂತಾಗಿದೆ.ಇದೇ ರೀತಿ ವಂಚನೆಗೆ ಒಳಗಾಗಿದ್ದ ಬಿಜೆಪಿ ಕಾರ್ಯಕರ್ತ ಸಾಯಿಪ್ರಸಾದ್‍ನನ್ನು ಎನ್‍ಐಎ ತಂಡ ಗುರುವಾರ ವಶಕ್ಕೆ ಪಡೆದಿತ್ತು. ಕುತಂತ್ರಕ್ಕೆ ಸಿಲುಕಿದ್ದ ಆತನನ್ನು ವಿಚಾರಣೆ ನಡೆಸಿ ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ. ಇದೇ ರೀತಿ ಇನ್ನೂ ಎಂಟು ಜನರ ಐಡಿ ದುರುಪಯೋಗ ಪಡಿಸಿಕೊಂಡಿರುವ ಮಾಹಿತಿಯೂ ಇದೆ ಎಂದರು.
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ಪಕ್ಷದ ಕಾರ್ಯಕರ್ತರ ನಿಸ್ವಾರ್ಥ ನೆರವಿನ ಫಲವಾಗಿ ಪುರಸಭೆಯಿಂದ ಮೂರು ಬಾರಿ ಪಾರ್ಲಿಮೆಂಟಿನ ಸದಸ್ಯನಾಗುವ ಅವಕಾಶ ದೊರೆತಿದೆ. ಈ ಅವಧಿಯಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ ತೃಪ್ತಿಯೂ ಇದೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾಲ್ಕನೇ ಬಾರಿಗೆ ಗೆಲ್ಲುವ ಭರವಸೆಯೂ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನೂರಾರು ಕಾರ್ಯಕರ್ತರ ಬಲಿದಾನದ ಮೂಲಕ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಭಾರತ ವಿಶ್ವಗುರು ಆಗುವ ನಿಟ್ಟಿನಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದು ಶತಃಸಿದ್ಧ. ಪಕ್ಷಕ್ಕೆ ಶಕ್ತಿ ತುಂಬಿದ ಈ ಕ್ಷೇತ್ರದಲ್ಲಿ ಜೆಡಿಎಸ್ ಬಂಧುಗಳ ಜೊತೆ ಹಾಲು ಜೇನಿನಂತೆ ಬೆರೆತು ಮೋದಿಯವರ ಕೈ ಬಲಪಡಿಸಲು ಕಾರ್ಯಕರ್ತ ಬಂಧುಗಳ ಸಹಕರಿಸಬೇಕು. ಸಚಿವ ಮಧು ಬಂಗಾರಪ್ಪ ಅಧಿಕಾರದ ಮದದಿಂದ ಪಕ್ಷದ ಕಾರ್ಯಕರ್ತರ ಕುರಿತು ಆಡಿರುವ ಮಾತುಗಳು ಖಂಡನೀಯ ಎಂದೂ ಹೇಳಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕುಣಜೆ ಕಿರಣ್ ಮಾತನಾಡಿ, ಕಾಂಗ್ರೆಸ್ ಈ ದೇಶಕ್ಕೆ ಮಾರಕವಾಗಿದ್ದು ಬಿಜೆಪಿಯಿಂದಾಗಿಯೇ ಭಾರತ ಉಳಿದಿದೆ. ನರೇಂದ್ರ ಮೋದಿಯರಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಗೌರವವೂ ಬಂದಿದೆ. ಮತ್ತೊಮ್ಮೆ ಈ ದೇಶದ ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ. ಜೆಡಿಎಸ್ ಮತ್ತು ಬಿಜೆಪಿ ಒಂದೇ ತಾಯಿ ಮಕ್ಕಳಂತೆ. ದೇಶದ ಹಿತದೃಷ್ಟಿಯಿಂದಲೇ ಎರಡೂ ಪಕ್ಷಗಳು ಒಂದಾಗಿದ್ದು ರಾಘವೇಂದ್ರರನ್ನು ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸಲು ಶ್ರಮಿಸುವುದಾಗಿ ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಂಡಲ ಅಧ್ಯಕ್ಷ ಹೆದ್ದೂರು ನವೀನ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳು ಗೋಪಾಲ್, ಕ್ಷೇತ್ರದ ವೀಕ್ಷಕರಾದ ರಘುಪತಿ ಭಟ್, ಪುಣ್ಯಪಾಲ್, ಕೆ.ನಾಗರಾಜ ಶೆಟ್ಟಿ ಮುಂತಾದವರು ವೇದಿಕೆಯಲ್ಲಿದ್ದರು. ರಕ್ಷಿತ್ ಮೇಗರವಳ್ಳಿ ನಿರೂಪಿಸಿದರು.