ರಾಜ್ಯದಲ್ಲಿ ಆಡಳಿತ ಸರ್ಕಾರ ಸತ್ತು ಹೋಗಿದೆ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿ

| Published : Jan 04 2025, 12:32 AM IST / Updated: Jan 04 2025, 12:59 PM IST

ರಾಜ್ಯದಲ್ಲಿ ಆಡಳಿತ ಸರ್ಕಾರ ಸತ್ತು ಹೋಗಿದೆ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಆಶ್ರಯ ಯೋಜನೆ ಮನೆಗಳನ್ನು ಬಿಡುಗಡೆ ಮಾಡಿಲ್ಲ. ಗ್ರಾಮ ಪಂಚಾಯತಿಗಳಿಗೆ ಅನುದಾನ ನೀಡಿಲ್ಲ. ಇದರ ನಡುವೆ ಸಾರಿಗೆ ಬಸ್ ದರ ಕೂಡ ಏರಿಕೆ ಮಾಡಿದ್ದಾರೆ. ಸದ್ಯದಲ್ಲೇ ನೀರು ಹಾಗೂ ಹಾಲಿನ ದರ ಕೂಡ ಹೆಚ್ಚಳ ಮಾಡಲಿದ್ದಾರೆ. ಆದರೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿಲ್ಲ ಎಂದು ಹೇಳಿದರು.

 ಕಿಕ್ಕೇರಿ : ಅನುದಾನದ ಕೊರತೆಯಿಂದ ಜೆಡಿಎಸ್ ಶಾಸಕರ ಕ್ಷೇತ್ರಗಳ ಜೊತೆಗೆ ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳಲ್ಲೇ ಅಭಿವೃದ್ಧಿ ಕಾಣುತ್ತಿಲ್ಲ. ರಾಜ್ಯದಲ್ಲಿ ಆಡಳಿತ ಸರ್ಕಾರ ಸತ್ತು ಹೋಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಕೆ.ಆರ್.ಪೇಟೆ ತಾಲೂಕಿನ ವಡಕಹಳ್ಳಿಯಲ್ಲಿ ಚನ್ನರಾಯಪಟ್ಟಣ- ಮೈಸೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಅನುದಾನ ಕೊರತೆ ಇಡೀ ರಾಜ್ಯದ ಸಮಸ್ಯೆಯಾಗಿದೆ. ಕಾಂಗ್ರೆಸ್ ಶಾಸಕರಿಗೇ ಅನುದಾನ ಕೊಡುತ್ತಿಲ್ಲ. ಇನ್ನು ವಿಪಕ್ಷ ಶಾಸಕರ ಕ್ಷೇತ್ರಗಳಿಗೆ ಎಲ್ಲಿ ಅನುದಾನ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಸರ್ಕಾರ ಆಶ್ರಯ ಯೋಜನೆ ಮನೆಗಳನ್ನು ಬಿಡುಗಡೆ ಮಾಡಿಲ್ಲ. ಗ್ರಾಮ ಪಂಚಾಯತಿಗಳಿಗೆ ಅನುದಾನ ನೀಡಿಲ್ಲ. ಇದರ ನಡುವೆ ಸಾರಿಗೆ ಬಸ್ ದರ ಕೂಡ ಏರಿಕೆ ಮಾಡಿದ್ದಾರೆ. ಸದ್ಯದಲ್ಲೇ ನೀರು ಹಾಗೂ ಹಾಲಿನ ದರ ಕೂಡ ಹೆಚ್ಚಳ ಮಾಡಲಿದ್ದಾರೆ. ಆದರೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿಲ್ಲ ಎಂದು ಹೇಳಿದರು.

ಸರ್ಕಾರ ಗ್ಯಾರಂಟಿ ಯೋಜನೆಯ 2 ಸಾವಿರ ರು.ಗಳಿಂದ ರಾಜ್ಯದ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವೇ ಎಂದು ಪ್ರಶ್ನಿಸಿದ ಸಚಿವರು, ಎರಡು ಸಾವಿರ ಕೊಟ್ಟು ಬೆನ್ನು ತಟ್ಟಿಕೊಳ್ಳುತ್ತಾರೆ. ರಾಜ್ಯ ಸರ್ಕಾರ ಇದೆಯೇ ಎಂದು ಯೋಚಿಸುವ ಸ್ಥಿತಿಗೆ ಜನರು ಬಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಂಚರತ್ನ ಯೋಜನೆ ಅರ್ಥ ಆಗಲಿಲ್ಲ:

ಜೆಡಿಎಸ್ ಅಧಿಕಾರಕ್ಕೆ ಬಂದಿದ್ದರೆ ಪಂಚರತ್ನ ಯೋಜನೆ ತರುವ ಬಲು ಆಸೆ ಇತ್ತು. ಈ ಮೂಲಕ ಶಾಲೆ, ಆಸ್ಪತ್ರೆ, ರೈತರಿಗೆ ಸಾಲ, ಪ್ರತಿ ಮನೆ ಸದಸ್ಯರಿಗೆ ಉದ್ಯೋಗ, ತಾಯಂದಿರಿಗೆ 4 ಸಾವಿರ ರು. ಕೊಡುವ ಯೋಚನೆ ಮಾಡಲಾಗಿತ್ತು. ಆದರೀಗ ಗ್ಯಾರಂಟಿ ಯೋಜನೆಗಳಿಗೆ ಮರಳಾಗಿ ಜನತೆ ಪಶ್ಚಾತ್ತಾಪ ಪಡುವಂತಾಗಿದೆ ನೊಂದು ನುಡಿದರು.

ಚುನಾವಣೆ ವೇಳೆ ಜೆಡಿಎಸ್ ನ ಪಂಚರತ್ನ ಯೋಜನೆ ಬಗ್ಗೆ ಜನರು ಅರ್ಥ ಮಾಡಿಕೊಳ್ಳಲಿಲ್ಲ. ನಮ್ಮ ಕಾರ್ಯಕ್ರಮಗಳ ಬಗ್ಗೆ ಜನರು ಚಿಂತನೆ ಮಾಡಲಿಲ್ಲ. ಇಂತಹ ಸರ್ಕಾರದ ಆಡಳಿತದ ಮಧ್ಯೆ ನಾವು ಬದುಕಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.