ಕಾಂಗ್ರೆಸ್ಸೇತರ ಶಾಸಕರ ಕ್ಷೇತ್ರಗಳಿಗೆ ಈ ಸರ್ಕಾರ ಅನುದಾನವನ್ನೇ ಕೊಡುತ್ತಿಲ್ಲ

| Published : Nov 26 2024, 12:48 AM IST

ಕಾಂಗ್ರೆಸ್ಸೇತರ ಶಾಸಕರ ಕ್ಷೇತ್ರಗಳಿಗೆ ಈ ಸರ್ಕಾರ ಅನುದಾನವನ್ನೇ ಕೊಡುತ್ತಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಅಭಿವೃದ್ಧಿ ಕೆಲಸವನ್ನು ಸಂಪೂರ್ಣ ಕಡೆಗಣಿಸಿರುವ ಜತೆಗೆ ಬೇರೆ ಪಕ್ಷದ ಶಾಸಕರು ಇರುವ ತಾಲೂಕುಗಳಿಗೆ ಹಣವನ್ನೇ ಕೊಡುತ್ತಿಲ್ಲವೆಂದು ಶಾಸಕ ಎಚ್.ಡಿ. ರೇವಣ್ಣ ದೂರಿದರು. ಇಡೀ ಊರಿಗೆ ಹೊಸದಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ೯೦ ಕೋಟಿ ಬಿಡುಗಡೆ ಮಾಡಿಸಿದ್ದೆ. ಆ ಹಣ ಹಣಕಾಸು ಇಲಾಖೆಯ ಅನುಮೋದನೆಗೆ ಹೋಗಿದ್ದು ಕಾಂಗ್ರೆಸ್ ಸರ್ಕಾರ ಹಣವನ್ನು ತಡೆ ಹಿಡಿದಿದ್ದು, ಅಲ್ಲಿಂದ ಅನುಮೋದನೆ ಆಗಿ ಬಂದಿಲ್ಲ. ಅವರು ಕೊಡದಿದ್ದರೆ ನಾನು ಬಿಡುವುದಿಲ್ಲ. ಹೋರಾಟ ಮಾಡಿಯಾದರೂ ಈ ಹಣ ತರುತ್ತೇನೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ನಮ್ಮೂರ ಪುರಸಭೆಗೆ ಕಳೆದ ವರ್ಷ ೧೨.೦೫ ಲಕ್ಷ ರು.ಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಜತೆಗೆ ರಾಜ್ಯದ ಅಭಿವೃದ್ಧಿ ಕೆಲಸವನ್ನು ಸಂಪೂರ್ಣ ಕಡೆಗಣಿಸಿರುವ ಜತೆಗೆ ಬೇರೆ ಪಕ್ಷದ ಶಾಸಕರು ಇರುವ ತಾಲೂಕುಗಳಿಗೆ ಹಣವನ್ನೇ ಕೊಡುತ್ತಿಲ್ಲವೆಂದು ಶಾಸಕ ಎಚ್.ಡಿ. ರೇವಣ್ಣ ದೂರಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಮಾತನಾಡಿ, ನಮ್ಮ ಊರಿಗೆ ೧೯೭೨ರಲ್ಲಿ ೫೪ ವರ್ಷಗಳ ಹಿಂದೆ ಒಳಚರಂಡಿ ಕಲ್ಪಿಸಲಾಗಿತ್ತು. ಅದೆಲ್ಲಾ ಸಂಪೂರ್ಣ ಹಾಳಾಗಿ ಇಡೀ ಊರಿಗೆ ಹೊಸದಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ೯೦ ಕೋಟಿ ಬಿಡುಗಡೆ ಮಾಡಿಸಿದ್ದೆ. ಆ ಹಣ ಹಣಕಾಸು ಇಲಾಖೆಯ ಅನುಮೋದನೆಗೆ ಹೋಗಿದ್ದು ಕಾಂಗ್ರೆಸ್ ಸರ್ಕಾರ ಹಣವನ್ನು ತಡೆ ಹಿಡಿದಿದ್ದು, ಅಲ್ಲಿಂದ ಅನುಮೋದನೆ ಆಗಿ ಬಂದಿಲ್ಲ. ಅವರು ಕೊಡದಿದ್ದರೆ ನಾನು ಬಿಡುವುದಿಲ್ಲ. ಹೋರಾಟ ಮಾಡಿಯಾದರೂ ಈ ಹಣ ತರುತ್ತೇನೆ ಎಂದು ಹೇಳಿದರು.

೭.೫ ಕೋಟಿ ರು. ವೆಚ್ಚದಲ್ಲಿ ಹಳೇಕೋಟೆ ಸಮೀಪ ಫ್ಲೈ ಓವರ್ ನಿರ್ಮಾಣ ಆಗುತ್ತದೆ. ಎಳ್ಳೇಶಪುರದಿಂದ ಪೆದ್ದನಹಳ್ಳಿವರೆಗೆ ೫೩೦ ಕೋಟೆ ವೆಚ್ಚದಲ್ಲಿ ೯ ಕಿ.ಮೀ ರಿಂಗ್ ರೋಡ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಇಲ್ಲಿನ ಚೆನ್ನಾಂಬಿಕ ವೃತ್ತದಿಂದ ಕನಕಭವನದವರೆಗೆ ೨೫ ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ವಸತಿ ರಹಿತರಿಂದ ೩೭೦೦ ನಿವೇಶನಗಳಿಗೆ ಅರ್ಜಿ ನೀಡಿದ್ದು, ರೈಲ್ವೆ ಟ್ರ್ಯಾಕ್ ಪಕ್ಕ ಮಲ್ಲಪ್ಪನಹಳ್ಳಿ ರಸ್ತೆಯಲ್ಲಿ ಇದಕ್ಕೆ ತಕ್ಕ ನಿವೇಶನವನ್ನು ಮಾಲೀಕರ ಒಪ್ಪಿಗೆ ಪಡೆದು ವಶಪಡಿಸಿಕೊಳ್ಳಲು ನಿರ್ಣಯಿಸಲಾಗಿದೆ. ಈ ಸಭೆಯಲ್ಲಿ ವಿವಿಧ ಬಡಾವಣೆಗಳಲ್ಲಿ ಚರಂಡಿ ನಿರ್ಮಾಣ, ರಸ್ತೆ ಅಭಿವೃದ್ಧಿ, ಸಿ.ಸಿ. ಕ್ಯಾಮರಾ ಅಳವಡಿಕೆ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಹಾಗೂ ಇನ್ನಿತರ ಟೆಂಡರ್‌ಗಳನ್ನು ನೀಡಲು ಯಾವುದೇ ವಿರೋಧ ಚರ್ಚೆ ಇಲ್ಲದೆ ಅನುಮೋದನೆ ಆಯಿತು. ಬಹುತೇಕ ಕಾಮಗಾರಿಗಳನ್ನು ಟೆಂಡರ್ ಮೂಲಕ ನಿಗಧಿತ ಗುದ್ದಿಗೆದಾರರೇ ಪಡೆದುಕೊಂಡಿದ್ದಾರೆ.

ಬೆಳಿಗ್ಗೆ ೧೦.೧೫ಕ್ಕೆ ಕರೆದಿದ್ದ ಮಾಸಿಕ ಸಭೆಗೆ ಶಾಸಕ ಎಚ್.ಡಿ. ರೇವಣ್ಣ ನಿಗದಿತ ಸಮಯಕ್ಕೆ ಸರಿಯಾಗಿ ಆಗಮಿಸಿ ಸಭೆಯನ್ನು ಬೇಗ ಮುಗಿಸಿದರು. ಪುರಸಭೆಯಲ್ಲಿ ೨೩ ಸದಸ್ಯರಿದ್ದು ಉಪಾಧ್ಯಕ್ಷೆ ಸೇರಿದಂತೆ ೧೦ ಸದಸ್ಯರು ಸಭೆಗೆ ಗೈರಾಗಿದ್ದರು. ಕೆ.ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್‌ ಉಪಸ್ಥಿತರಿದ್ದರು. ರಮೇಶ್ ಸಭೆಯ ನಡಾವಳಿಗಳನ್ನು ಓದಿದರು.