ಸಾರಾಂಶ
ಸಂಡೂರು: ಇಲ್ಲಿನ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ಪಕ್ಷ ಹಾಗೂ ಸಂಡೂರಿನ ಪ್ರತಿಷ್ಠೆಯ ಚುನಾವಣೆಯಾಗಿದೆ. ಈ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣ ಅವರನ್ನು ಬಹುಮತದಿಂದ ಗೆಲ್ಲಿಸುವ ಮೂಲಕ ಸಂಡೂರಿನ ಪ್ರತಿಷ್ಠೆಯನ್ನು ಕಾಪಾಡಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಪಕ್ಷದ ಮುಖಂಡರು ಹಾಗೂ ಅಪಾರ ಕಾರ್ಯಕರ್ತರೊಂದಿಗೆ ಮೆರವಣಿಗೆಯ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದ ನಂತರ ಪಟ್ಟಣದ ವಿಜಯವೃತ್ತದಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.ಬಡವರ ಸೇವೆಗಾಗಿ ನಾವು ರಾಜಕಾರಣಕ್ಕೆ ಬಂದಿದ್ದೇವೆ. ರಾಜಕೀಯದಲ್ಲಿ ಧರ್ಮ ತರುತ್ತೇವೆಯೇ ಹೊರತು ಧರ್ಮದಲ್ಲಿ ರಾಜಕೀಯ ತರುವುದಿಲ್ಲ. ನಾನೆಂದು ಜನರ ಹೊಟ್ಟೆ ಹೊಡೆಯುವ ಕೆಲಸ ಮಾಡಿಲ್ಲ. ಸಂಸದ ಈ.ತುಕಾರಾಂ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಾರ್ಷಿಕ ₹೬೦ ಸಾವಿರ ಕೋಟಿಯವನ್ನು ಐದು ಭಾಗ್ಯಗಳಿಗಾಗಿ ಖರ್ಚು ಮಾಡುತ್ತಿದೆ. ಐದು ವರ್ಷದಲ್ಲಿ ವಿವಿಧ ಭಾಗ್ಯಗಳಿಗಾಗಿ ₹೩ ಲಕ್ಷ ಕೋಟಿ ಖರ್ಚು ಮಾಡುತ್ತಿದೆ. ಜನಪರ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯ ಭೇದ ಸಹಜ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಅಸಮಾಧಾನಿತರ ಮನವೊಲಿಸಿದ್ದೇವೆ. ಎಲ್ಲರೂ ಒಟ್ಟಾಗಿ ಚುನಾವಣೆಯನ್ನು ಎದುರಿಸಿ, ಗೆಲುವು ಸಾಧಿಸುತ್ತೇವೆ ಎಂದರು.₹೧೬೧೫ ಕೋಟಿ ಅನುದಾನ:
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಸಂಸದ ಈ.ತುಕಾರಾಂ ಪ್ರಸಕ್ತ ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ₹೧೬೧೫ ಕೋಟಿ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ. ಇಷ್ಟು ಅನುದಾನ ರಾಜ್ಯದ ಯಾವ ಕ್ಷೇತ್ರಕ್ಕೂ ಸಿಕ್ಕಿಲ್ಲ. ಸಿದ್ದರಾಮಯ್ಯನವರ ವಿವಿಧ ಭಾಗ್ಯಗಳನ್ನು ಜಾರಿಗೆ ತಂದಿರುವುದು ರಾಜಕೀಯ ಲಾಭಕ್ಕಲ್ಲ. ಬಡವರ ಅನುಕೂಲಕ್ಕಾಗಿ. ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕ್ರಮ ಹಾಗೂ ಸಾಧನೆಗಳನ್ನು ತೋರಿಸಿ ಮತ ಕೇಳುತ್ತಿದೆ ಎಂದು ತಿಳಿಸಿದರು.ಅನ್ನಪೂರ್ಣ ತುಕಾರಾಂ ೪೦-೫೦ ಸಾವಿರ ಲೀಡ್‌ನಿಂದ ಗೆಲುವು ಸಾಧಿಸಲಿದ್ದಾರೆ. ಕ್ಷೇತ್ರದಲ್ಲಿ ಜನತೆ ಈ. ತುಕಾರಾಂ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡುತ್ತಾರೆ. ಸಂಡೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದರು.
ಬಿಜೆಪಿಗೆ ಬೇಕಾಗಿರುವುದು ಅಧಿಕಾರ. ಸುಳ್ಳುಗಾರ ಜನಾರ್ದನ ರೆಡ್ಡಿ ಜಿಲ್ಲೆಯಲ್ಲಿ ಈ ಹಿಂದೆ ಲೂಟಿ ಹೊಡೆದಿದ್ದನ್ನು ಜನತೆ ಗಮನಿಸಿದ್ದಾರೆ. ಸಿದ್ದರಾಮಯ್ಯ ಅವರ ಏಳಿಗೆ ಸಹಿಸದೆ, ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ತುಕಾರಾಂ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಬೇಕು ಎಂದು ತಿಳಿಸಿದರು.ಜೋಡೆತ್ತುಗಳು:
ಅಭ್ಯರ್ಥಿ ಈ.ಅನ್ನಪೂರ್ಣ ತುಕಾರಾಂ ಮಾತನಾಡಿ, ಸಂತೋಷ್ ಲಾಡ್ ಹಾಗೂ ಈ.ತುಕಾರಾಂ ಜೋಡೆತ್ತುಗಳಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸಾಮಾಜಿಕ ಸಮಾನತೆ ಆಧಾರದ ಮೇಲೆ ಪಕ್ಷ ನನಗೆ ಈ ಬಾರಿ ಅವಕಾಶ ಕಲ್ಪಿಸಿದೆ. ಸಂತೋಷ್ ಲಾಡ್ ಹಾಗೂ ಈ. ತುಕಾರಾಂ ಅವರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಕನಸನ್ನು ನನಸಾಗಿಸಲು ಶ್ರಮಿಸುವೆ. ಜನತೆ ತಮ್ಮನ್ನು ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.ರಾಜಕೀಯ ನನಗೆ ಹೊಸದಲ್ಲ. ಪ್ರತಿದಿನ ಮನೆಯಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಯುತ್ತಿರುತ್ತವೆ. ೨೦೦೮ ರಿಂದಲೂ ಜನಾರ್ದನ ರೆಡ್ಡಿ ಅವರನ್ನು ಎದುರಿಸುತ್ತಾ ಬಂದಿದ್ದೇವೆ. ಜನರ ಆಶೀರ್ವಾದ ನಮ್ಮ ಜೊತೆಗಿದೆ. ನಮ್ಮ ಪಕ್ಷ ಮಹಿಳೆಯರಿಗೂ ಸಮಾನ ಸ್ಥಾನಮಾನ ಕೊಟ್ಟಿದೆ. ಅದಕ್ಕೆ ನಾನೇ ಸ್ಪಷ್ಟ ಉದಾಹರಣೆ. ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಉತ್ತಮ ಪಡೆ ಇದೆ. ಎಲ್ಲರೂ ಒಟ್ಟಾಗಿ ಚುನಾವಣೆಯನ್ನು ಎದುರಿಸಿ, ಗೆಲುವು ಸಾಧಿಸುತ್ತೇವೆ ಎಂದರು.
ಸಂಸದ ಈ. ತುಕಾರಾಂ ಮಾತನಾಡಿ, ಬಿಜೆಪಿಗೆ ಅಭಿವೃದ್ಧಿ ಕುರಿತು ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿಯರು ಆರೋಪ ಹಾಗೂ ಪ್ರತ್ಯಾರೋಪ ಮಾಡಿ ಸಮಯ ಕಳೆಯುತ್ತಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ದಿ.ಎಂ.ವೈ. ಘೋರ್ಪಡ ಕಾಲದಿಂದಲೂ ಒಂದು ಇತಿಹಾಸ ಹಾಗೂ ಉತ್ತಮ ಸಂಸ್ಕೃತಿ ಇದೆ. ಬಳ್ಳಾರಿಯ ಬಿಜೆಪಿ ನಾಯಕರು ಬರುತ್ತಿರುತ್ತಾರೆ. ನಾವು ಗೆಲ್ಲುತ್ತಿರುತ್ತೇವೆ. ಈ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ. ನಾನು ಹಾಗೂ ನನ್ನ ಪತ್ನಿ ಜೋಡೆತ್ತುಗಳಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.ಶಾಸಕ ಬಿ. ನಾಗೇಂದ್ರ, ಎಐಸಿಸಿ ಉಸ್ತುವಾರಿ ಗೋಪಿನಾಥ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಮಾತನಾಡಿದರು.
ಶಾಸಕರಾದ ಡಾ. ಶ್ರೀನಿವಾಸ್, ಬಿ.ಎನ್. ನಾಗರಾಜ್, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್, ಮುಖಂಡ ಟಿ.ಲಕ್ಷ್ಮಣ, ಸೇರಿದಂತೆ ಪಕ್ಷದ ಹಲವು ಮುಖಂಡರು, ಸಾವಿರಾರು ಕಾರ್ಯಕರ್ತರು ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದರು.