ಸಾರಾಂಶ
ಶಿಗ್ಗಾಂವಿ: ಇದು ಕೇವಲ ಉಪಚುನಾವಣೆಯಲ್ಲ. ನನಗೆ, ನನ್ನ ಸರ್ಕಾರಕ್ಕೆ ಹೆಚ್ಚಿನ ಶಕ್ತಿ ನೀಡುವ ಮಹತ್ವದ ಚುನಾವಣೆ. ಕ್ಷೇತ್ರಕ್ಕೆ ಏನೂ ಕೆಲಸ ಮಾಡದ ಬೊಮ್ಮಾಯಿ ಪುತ್ರನಿಗೆ ಮತ ಹಾಕುವುದರಲ್ಲಿ ಅರ್ಥವೇ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ್ ಅವರನ್ನು ಗೆಲ್ಲಿಸಿ ನನಗೆ ಶಕ್ತಿ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಹುಲಗೂರು, ಹುರಳಿಕುಪ್ಪಿ, ಬಂಕಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು. ನಾವು ನುಡಿದಂತೆ ನಡೆದಿದ್ದೇವೆ. ಸರ್ಕಾರ ಬಂದ ೮ ತಿಂಗಳಲ್ಲೇ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇಡೀ ರಾಜ್ಯದ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುತ್ತಿದ್ದೇವೆ. ಇದಕ್ಕಾಗಿ ಗ್ಯಾರಂಟಿ ಯೋಜನೆಗಳಿಗಾಗಿ ₹೫೬ ಸಾವಿರ ಕೋಟಿಗಳನ್ನು ನೇರವಾಗಿ ರಾಜ್ಯದ ಜನರ ಖಾತೆಗೆ ಹಾಕಿದ್ದೇವೆ ಎಂದರು.ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿ, ಗೃಹ ಸಚಿವರಾಗಿ, ಮುಖ್ಯಮಂತ್ರಿಯಾಗಿ ಕ್ಷೇತ್ರಕ್ಕೆ ಏನು ನೀಡಿದ್ದಾರೆ? ಹುಡುಕಿ ಹೇಳಿ, ೪೦ ವರ್ಷದಲ್ಲಿ ಸಣ್ಣ ಕಪ್ಪುಚುಕ್ಕೆ ಕೂಡ ಇಲ್ಲದ ನನ್ನನ್ನು ಕೇವಲ ಷಡ್ಯಂತ್ರದಿಂದ ಕೆಳಗಿಳಿಸಲು ಪಿತೂರಿ ಮಾಡುತ್ತಿದ್ದಾರೆ. ಇದಕ್ಕೆ ನೀವು ಅವಕಾಶ ನೀಡ್ತೀರಾ? ಬಿಜೆಪಿ ಷಡ್ಯಂತ್ರ ಸೋಲಬೇಕು ಎಂದಾದರೆ ಶಿಗ್ಗಾಂವಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು ಎಂದರು.
ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡ್ತಾರೆ ಎಂದು ವಿಜಯೇಂದ್ರ, ಆರ್.ಅಶೋಕ, ಯತ್ನಾಳ್ ಎಲ್ಲರೂ ಬೊಬ್ಬೆ ಹೊಡೆಯುತ್ತಿದ್ದಾರೆ. ರಾಜ್ಯದ ಜನರ ನೈತಿಕ ಶಕ್ತಿ ನನ್ನ ಜತೆಗೆ ಇರುವವರೆಗೂ ನಾನು ಬಿಜೆಪಿ ಪರಿವಾರದ ಷಡ್ಯಂತ್ರಕ್ಕೆ ಹೆದರುವ, ಬೆದರುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಐದಕ್ಕೆ ಐದೂ ವರ್ಷ ಪೂರೈಸುವುದು ಶತಸಿದ್ಧ ಎಂದರು.ವಕ್ಫ್ ಆಸ್ತಿ ಸರ್ಕಾರದ ಆಸ್ತಿ ಅಲ್ಲ. ಅದು ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿ. ಈ ಆಸ್ತಿ ಒತ್ತುವರಿ ಮಾಡಿದವರನ್ನು ತೆರವುಗೊಳಿಸಲು ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಅವಧಿಯಲ್ಲೂ ನೋಟಿಸ್ ನೀಡಿದ್ದಾರೆ. ಒತ್ತುವರಿ ತೆರವುಗೊಳಿಸಿದ್ದಾರೆ. ಆದರೆ ನಮ್ಮ ಸರ್ಕಾರ ಮಾತ್ರ ಯಾವುದೇ ರೈತರಿಗೂ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿ ನೋಟಿಸ್ ವಾಪಸ್ ಪಡೆಯಲು ಸ್ಪಷ್ಟ ನಿರ್ದೇಶನ ನೀಡಿದ್ದೇನೆ ಎಂದರು.