ಇದು ಜಾತಿ ಗಣತಿ ಅಲ್ಲ, ತಪ್ಪಾಗಿ ಅರ್ಥೈಸಬೇಡಿ: ಶಿವರಾಜ ತಂಗಡಗಿ

| Published : Apr 15 2025, 12:58 AM IST

ಸಾರಾಂಶ

ಜಾತಿ ಸಮೀಕ್ಷೆ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ವರದಿಯ ಕುರಿತು ಬಿಜೆಪಿಯವರು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಅವರಿಗೆ ಬರೀ ಮುಸ್ಲಿಂರು ಮಾತ್ರ ಕಾಣುತ್ತಿದ್ದಾರೆ.

ಕೊಪ್ಪಳ:

ಕಾಂತರಾಜ ವರದಿ ಜಾತಿ ಗಣತಿ ಅಲ್ಲವೇ ಅಲ್ಲ. ಅದು ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ವರದಿ ಅಷ್ಟೇ. ಮತ್ತೊಮ್ಮೆ ವಿನಂತಿ ಮಾಡಿಕೊಳ್ಳುತ್ತೇನೆ, ಇದು ಜಾತಿ ಗಣತಿ ವರದಿ ಅಲ್ಲ ಎಂದು ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಸಮೀಕ್ಷೆ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ವರದಿಯ ಕುರಿತು ಬಿಜೆಪಿಯವರು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಅವರಿಗೆ ಬರೀ ಮುಸ್ಲಿಂರು ಮಾತ್ರ ಕಾಣುತ್ತಿದ್ದಾರೆ ಎಂದರು.

ಕಾಂತರಾಜ ವರದಿ ಬಿಡುಗಡೆ ಮಾಡಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್. ಅಶೋಕ ಹೇಳಿದ್ದರು. ಆದರೆ, ಕಾಂಗ್ರೆಸ್ ಬದ್ಧತೆ ಇರುವ ಪಕ್ಷವಾಗಿದ್ದು, ನಾವು ಬಿಡುಗಡೆ ಮಾಡಿದ್ದೇವೆ ಎಂದ ಅವರು, ಬಿಜೆಪಿಯವರಿಗೆ ಒಂದು ಮಾತು ಕೇಳುತ್ತೇನೆ. ಲಿಂಗಾಯತರು ಮತ್ತು ಒಕ್ಕಲಿಗರಲ್ಲಿ ಬಡವರು ಇಲ್ಲವೇ? ಎಂದು ಪ್ರಶ್ನಿಸಿದರು. ಸರ್ವೇಯ ಪ್ರತಿ ಫೈಲ್‌ಗೂ ಸಹಿ ಇದೆ. ಯಾರು ಸಹ ವಿರೋಧಿಸಿಲ್ಲ. ಮೊದಲು ವರದಿ ಓದಲಿ ಎಂದ ಅವರು, ಗ್ಯಾರಂಟಿ ಯೋಜನೆಯ ಹಣವನ್ನು ನೇರವಾಗಿ ಕೊಡುತ್ತಿರುವುದು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಇನ್ನಿಲ್ಲದ ಟೀಕೆ ಮಾಡುತ್ತಾರೆ ಎಂದರು.

ಹುಬ್ಬಳ್ಳಿಯಲ್ಲಿ ಕೊಪ್ಪಳ ಮೂಲಕ ಐದು ವರ್ಷದ ಬಾಲಕಿ ಮೇಲೆ ಲೈಗಿಂಕ ದೌರ್ಜನ್ಯ ನಡೆದಿರುವುದನ್ನು ಸಹಿಸಿಕೊಳ್ಳಲು ಆಗದು ಎಂದರು.