ಇದು ಗ್ಯಾರಂಟಿ ಸರ್ಕಾರವಲ್ಲ, ಪಂಕ್ಚರ್ ಸರ್ಕಾರ: ಮಾಗನೂರು

| Published : Sep 06 2025, 01:00 AM IST

ಸಾರಾಂಶ

ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಸಾವಿರಾರು ಎಕರೆಗಳಲ್ಲಿ ಬೆಳೆ ಹಾನಿಯಾಗಿದ್ದು, ರೈತರ ನೆರವಿಗೆ ಧಾವಿಸಬೇಕಾದ ಕಾಂಗ್ರೆಸ್ ಸರ್ಕಾರ ಮೌನವಾಗಿದೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ತೀವ್ರವಾಗಿ ಖಂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಸಾವಿರಾರು ಎಕರೆಗಳಲ್ಲಿ ಬೆಳೆ ಹಾನಿಯಾಗಿದ್ದು, ರೈತರ ನೆರವಿಗೆ ಧಾವಿಸಬೇಕಾದ ಕಾಂಗ್ರೆಸ್ ಸರ್ಕಾರ ಮೌನವಾಗಿದೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ತೀವ್ರವಾಗಿ ಖಂಡಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಜಿಲ್ಲೆಯಲ್ಲಿ 4.08 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದ್ದರೂ ಮಳೆಯಿಂದ ಹತ್ತಿ, ಹೆಸರು, ತೊಗರಿ, ಜೋಳ, ಸಜ್ಜೆ ಸೇರಿದಂತೆ ಹಲವು ಬೆಳೆಗಳು ಹಾನಿಯಾಗಿವೆ. ರೈತರು ರಸಗೊಬ್ಬರ ಕೇಳಿದರೂ ಸರ್ಕಾರ ಕೊಡಲಿಲ್ಲ. ನೀರಾವರಿ, ಕೃಷಿ, ಕಂದಾಯ ಇಲಾಖೆಗಳು ರಸಗೊಬ್ಬರ ಸಮಸ್ಯೆ ಬಗ್ಗೆ ಚರ್ಚಿಸಲಿಲ್ಲ. ಜಿಲ್ಲಾಡಳಿತ ನಾಲ್ಕು ಗೋಡೆಗಳ ಮಧ್ಯೆ ಸಭೆ ನಡೆಸುವುದರಿಂದ ರೈತರ ಸಂಕಷ್ಟ ಅರಿಯಲು ಸಾಧ್ಯವಿಲ್ಲ. ಹಾಗೆಯೇ ಇದ್ದರಿಂದ ಸರ್ವೇ ಕೂಡ ಆಗುವುದಿಲ್ಲ ಎಂದ ಅವರು, ಜಿಲ್ಲಾಡಳಿತವಾಗಲಿ, ಉಸ್ತುವಾರಿ ಸಚಿವರಾಗಲಿ, ಶಾಸಕರಾಗಲಿ ಯಾರೂ ಹೊಲಗಳಿಗೆ ಕಾಲಿಟ್ಟಿಲ್ಲ, ರೈತರ ನೋವಿಗೆ ಸ್ಪಂದಿಸದ ಈ ಸರ್ಕಾರಕ್ಕೆ ಕಣ್ಣೂ ಇಲ್ಲ, ಕಿವಿಯೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವತಃ ಯಾದಗಿರಿ ಜಿಲ್ಲೆಗೆ ಬಂದು ಎಲ್ಲಾ ಹಳ್ಳಿಗಳಿಗೆ ತೆರಳಿ ಸರ್ವೇ ಮಾಡಿ, ಜಿಲ್ಲಾಡಳಿತ ಭವನದಲ್ಲೇ ಕ್ಯಾಬಿನೆಟ್ ಸಭೆ ನಡೆಸಿ ಪ್ರತಿ ಎಕರೆಗೆ 25 ಸಾವಿರ ರು. ಪರಿಹಾರ ಘೋಷಿಸಿದ್ದರು. ಇಂದಿನ ಸರ್ಕಾರ ಅದರಿಂದ ಪಾಠ ಕಲಿಯಬೇಕು ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಪಂಚ ಗ್ಯಾಂರಂಟಿಗಳನ್ನು ಘೋಷಿಸಿ ರೈತರ ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳನ್ನು ಪಂಚರ್ ಮಾಡಿದೆ. ಇದು ಗ್ಯಾರಂಟಿ ಸರ್ಕಾರವಲ್ಲ, ಪಂಚರ್ ಸರ್ಕಾರ ಎಂದು ಕಿಡಿಕಾರಿದರು.

ಇಂದಿನ ಪರಿಸ್ಥಿತಿಯಲ್ಲಿ ರೈತರು ನಷ್ಟದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸರ್ಕಾರ ತಕ್ಷಣ ಪ್ರತಿ ಎಕರೆಗೆ 50 ಸಾವಿರ ರು. ಪರಿಹಾರ ನೀಡಬೇಕು. ಇಲ್ಲದಿದ್ದರೆ ರೈತರ ಪರವಾಗಿ ಭಾರೀ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಮಾತನಾಡಿ, ಕೇಂದ್ರ ಸರ್ಕಾರ ದೀಪಾವಳಿ ಉಡುಗೊರೆಯಾಗಿ ಜಿಎಸ್‌ಟಿಯಲ್ಲಿ ಕೆಲ ಅಗತ್ಯ ವಸ್ತುಗಳ ಮೇಲಿನ ಸೆಸ್ ಕಡಿತಗೊಳಿಸಿ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ನೆರವಾಗಿದೆ. ವಿಶೇಷವಾಗಿ ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಈ ನಿರ್ಧಾರ ಜನಪರವಾಗಿದೆ ಎಂದರು.

ಸಭೆಯಲ್ಲಿ ಪ್ರಮುಖರಾದ ಬಿಜೆಪಿ ಮುಖಂಡ ರಾಚಣಗೌಡ ಮುದ್ನಾಳ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ನಾಗರತ್ನ ಕುಪ್ಪಿ, ಸಂಗಮೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

-----------

ಜಿಲ್ಲೆಯಲ್ಲಿ ಬಿಜೆಪಿ ತಂಡಗಳನ್ನು ರಚಿಸಿ ಗ್ರಾಮೀಣ ಭಾಗಗಳಲ್ಲಿ ಬೆಳೆ ಹಾನಿ ಕುರಿತು ಮಾಹಿತಿ ಸಂಗ್ರಹಿಸಿ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುತ್ತೇವೆ.. : ಚಂದ್ರಶೇಖರಗೌಡ ಮಾಗನೂರ, ಮಾಜಿ ಜಿಲ್ಲಾ ಅಧ್ಯಕ್ಷ, ಬಿಜೆಪಿ.