ಇದು ಬಿಎಸ್‌ವೈ ಕುಟುಂಬ ವೈಭವೀಕರಣ ಯಾತ್ರೆ

| Published : Apr 23 2025, 12:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬದ ವೈಭವೀಕರಣದ ಯಾತ್ರೆಯೇ ಈ ಜನಾಕ್ರೋಶ ಯಾತ್ರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬದ ವೈಭವೀಕರಣದ ಯಾತ್ರೆಯೇ ಈ ಜನಾಕ್ರೋಶ ಯಾತ್ರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ಜನಾಕ್ರೋಶ ಯಾತ್ರೆ ಬಗ್ಗೆ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧದ ಬಿಜೆಪಿ ಜನಾಕ್ರೋಶ ಯಾತ್ರೆಯ ಬಗ್ಗೆ ವ್ಯಂಗ್ಯವಾಡಿದರು. ವಿಜಯೇಂದ್ರ 60 ವಾಹನಗಳನ್ನು ತೆಗೆದುಕೊಂಡು ಅಡ್ಡಾಡ್ತಿದ್ದಾನೆ. ದಾವಣಗೆರೆಯಲ್ಲಿ 60 ವಾಹನಗಳ ಸಮೇತ ಅಡ್ಡಾಡಿದ್ದಾನೆ. ಸಾವಿರಕ್ಕಿಂತ ಹೆಚ್ಚು ಜನ ಎಲ್ಲಿಯೂ ಸೇರಿಲ್ಲ ಎಂದು ಆರೋಪಿಸಿದರು. ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ವೇಳೆ ಜನ ಇರಲಿಲ್ಲ. ಐದು ಸಾವಿರ ಕೆಪಾಸಿಟಿ ಗ್ರೌಂಡ್‌ನಲ್ಲಿ ಶೇ.25 ರಷ್ಟು ಚೇರ್ ಇರಲಿಲ್ಲ. ನನ್ನ ಉಚ್ಚಾಟನೆ ಆಕ್ರೋಶ ಕಡಿಮೆ ಮಾಡಲು ಈ ಯಾತ್ರೆ ಮಾಡಿದ್ದಾರೆ. ಜನಾಕ್ರೋಶ ಯಾತ್ರೆ ಕಾಂಗ್ರೆಸ್ ವಿರುದ್ಧ ಅಲ್ಲ, ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಅಲ್ಲ. ಯಾವುದೇ ಕಾರಣಕ್ಕೂ ಆ ಕುಟುಂಬವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ತಮಿಳುನಾಡು ಅಧ್ಯಕ್ಷನನ್ನು ತೆಗೆದಂತೆ ತನ್ನನ್ನು ತೆಗೆಯುತ್ತಾರೆ ಎಂದು ವಿಜಯೇಂದ್ರಗೆ ಭಯ ಕಾಡುತ್ತಿದೆ ಮತ್ತೆ ಯತ್ನಾಳ ಹರಿಹಾಯ್ದರು.

ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರ ಹಾಗೂ ಕೇಂದ್ರದಲ್ಲಿ ಸಚಿವರಾಗಿರುವವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದಲ್ಲಿ ಏನು ನಡೆದಿದೆ ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು.

ನಾಳೆ ಹಾವೇರಿಯಲ್ಲಿ ಈಶ್ವರಪ್ಪ ಹಾಗೂ ನಾನು ಸಮಾವೇಶ ಮಾಡುತ್ತಿದ್ದೇವೆ. ಹಿಂದೂ ಯುವತಿಯರ ಮೇಲೆ ದೌರ್ಜನ್ಯವಾಗುತ್ತಿದೆ. ಅತ್ಯಾಚಾರ, ಲವ್ ಜಿಹಾದ್ ಇವುಗಳನ್ನು ಖಂಡಿಸಿ ಸಮಾವೇಶ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳ ರಕ್ಷಣೆ ಮಾಡಲಾಗುತ್ತಿಲ್ಲ. ಸರ್ಕಾರ ಒಂದೊಂದು ಸಮುದಾಯಗಳನ್ನು ಟಾರ್ಗೆಟ್ ಮಾಡುತ್ತಿದೆ. ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದರು. ಬಸವಾದಿ ಪ್ರಮುಖರೆಂದು ಹೇಳಿ ವಿಭೂತಿ ಹಾಗೂ ಲಿಂಗವನ್ನೂ ತೆಗೆಯಿರಿ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇದು ಹಿಂದೂ ವಿರೋಧಿ ಸರ್ಕಾರ. ಈ ಸರ್ಕಾರವನ್ನು ಎದುರಿಸುವ ಸಾಮರ್ಥ್ಯ ಬಿಜೆಪಿ ರಾಜ್ಯಾಧ್ಯಕ್ಷನಿಗೆ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಸಂಪೂರ್ಣ ವಿಫಲವೆಂದು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜನಾಕ್ರೋಶ ಯಾತ್ರೆಗೆ ಆರ್‌.ಅಶೋಕ, ಅಶ್ವತ್ಥ ನಾರಾಯಣ ಬರುತ್ತಿಲ್ಲ, ಶ್ರೀರಾಮುಲು ಕಾಟಾಚಾರಕ್ಕೆ ಬರುತ್ತಾರೆ ಎಂದು ದೂರಿದರು.

-------

ಕೋಟ್‌

ನಾನು ಪಕ್ಷದಿಂದ ಉಚ್ಚಾಟನೆಯಾದ ಬಳಿಕ ಯಾರ ಸಂಪರ್ಕದಲ್ಲಿಲ್ಲ. ನಾನು ರಾಜ್ಯದಲ್ಲಿ ಓಡಾಡುತ್ತಿದ್ದೇನೆ. ಹಳ್ಳಿ ಹಳ್ಳಿಯಲ್ಲಿ ನನಗೆ ಉತ್ತಮ ಬೆಂಬಲ ಸಿಗುತ್ತಿದೆ. ನಿಮ್ಮ ನಿರ್ಣಯಕ್ಕೆ ಬದ್ಧವೆಂದು ಜನರು ಹೇಳುತ್ತಿದ್ದಾರೆ. ಹಳ್ಳಿಗಳಲ್ಲಿ ಜನ ಸೇರುತ್ತಾರೆ. ಹಿಂದುತ್ವ ಉಳಿಯುವಂತಹ ನಿರ್ಣಯ ಮಾಡಬೇಕೆಂದು ಹೇಳುತ್ತಿದ್ದಾರೆ. ಮೂರು ರಾಜಕೀಯ ಪಕ್ಷಗಳ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ನಾನು ವಿಜಯದಶಮಿವರೆಗೂ ರಾಜ್ಯ ಸುತ್ತುತ್ತೇನೆ.

ಬಸನಗೌಡ ಪಾಟೀಲ ಯತ್ನಾಳ, ಶಾಸಕ