ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಹೆಸರಲ್ಲಿ ಸಮಾಜ ಒಡೆಯುವ, ಬೆಂಕಿ ಹಚ್ಚುವ ಕೆಲಸ ಹಾಗೂ ದ್ವೇಷದ ರಾಜಕಾರಣಕ್ಕಿಳಿದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ, ಮೋದಿಯವರ ಅಂತ್ಯಕಾಲವಿದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ರಾಯಚೂರು-ಯಾದಗಿರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ನಿವೃತ್ತ ಐಎಎಸ್ ಅಧಿಕಾರಿ ಜಿ. ಕುಮಾರನಾಯಕ ಪರ ಚುನಾವಣಾ ಪ್ರಚಾರದಂಗವಾಗಿ, ಬುಧವಾರ ಸಂಜೆ ಇಲ್ಲಿನ ವನಿಕೇರಿ ಲೇಔಟಿನಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, 10 ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ನಡೆಸಿದ ನರೇಂದ್ರ ಮೋದಿಯವರ ಸುಳ್ಳು ಹೇಳಿಕೆಗಳಿಗೆ ಜನರು ಈ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದರು.
ದ್ವೇಷದ ರಾಜಕೀಯ ಹಾಗೂ ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಟ್ಟು, ಜಾತಿ ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ದೇಶ ಒಡೆಯುವ ಕೆಲಸ ಮಾಡುತ್ತಿರುವ ಬಿಜೆಪಿ ಭಾವನಾತ್ಮಕ ಹಾಗೂ ಸುಳ್ಳುಗಳ ಮೂಲಕ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ ಎಂದು ಜರಿದರು.ಮೇ 7 ರಂದು ಕರ್ನಾಟಕದಲ್ಲಿ 2ನೇ ಹಂತದ ಲೋಕಸಭೆ ಚುನಾವಣೆ ನಡೆಯಲಿದೆ. ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಮೇ 26 ರಂದು ಚುನಾವಣೆ ನಡೆದಿದ್ದು, ಇನ್ನುಳಿದ 14 ಲೋಕಸಭೆ ಕ್ಷೇತ್ರಗಳಿಗೆ ಮೇ 7 ರಂದು ಮತದಾನ ನಡೆಯಲಿದೆ.
ದೇಶದಲ್ಲಿ ಈಗಾಗಲೇ ನಡೆದಿರುವ ಎರಡೂ ಹಂತದ ಚುನವಣೆಗಳಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟಕ್ಕೆ ಹೆಚ್ಚು ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎಗೆ ಕಡಮೆ ಸ್ಥಾನಗಳ ಬರುವುದಾಗಿ ಅನೇಕ ಏಜೇನ್ಸಿಗಳ ಸಮೀಕ್ಷೆಗಳ ನೀಡಿರುವುದು ಪ್ರಧಾನಿ ಮೋದಿ ಅವರಿಗೆ ಗೊತ್ತಾಗಿದೆ. ಇದರಿಂದ ಹತಾಶರಾಗಿರುವ ಪ್ರಧಾನಿ ಮೋದಿ ಅವರು, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ, ಬರೀ ಸುಳ್ಳುಗಳನ್ನೇ ಹೇಳುತ್ತಿದ್ದಾರೆಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.ಗ್ಯಾರಂಟಿಗಳಿಂದ ಖಜಾನೆ ಖಾಲಿಯಾಗಿಲ್ಲ: ಸಿದ್ದು
ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳ ಬಗ್ಗೆ ಪ್ರಧಾನಿ ಮೋದಿ ಲಘುವಾಗಿ ಮಾತನಾಡಿದ್ದರು. ಗ್ಯಾರಂಟಿಗಳನ್ನು ಜಾರಿ ಮಾಡಲು ಆಗುವುದಿಲ್ಲ, ಒಂದು ವೇಳೆ ಜಾರಿ ಮಾಡಿದರಾದರೂ ಖಜಾನೆ ಖಾಲಿಯಾಗುತ್ತದೆ ಎಂದು ಅಪಹಾಸ್ಯ ಮಾಡಿದ್ದರು. ಆದರೆ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆಯಲ್ಲದೆ, 2024-25 ವರ್ಷದಲ್ಲಿ ಈ ಯೋಜನೆಗಳಿಗೆ 54 ಸಾವಿರ ಕೋಟಿ ರು.ಗಳನ್ನು ಇಟ್ಟಿದ್ದೇವೆ ಎಂದರು.ಕರ್ನಾಟಕದ ಖಜಾನೆ ಖಾಲಿಯಾಗಿದೆ, ಕರ್ನಾಟಕದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಎಂಟೇ ತಿಂಗಳಲ್ಲಿ ತಿಂಗಳಲ್ಲಿ ಜನರಿಗೆ ಕೊಟ್ಟಂತಹ ಭರವಸೆಗಳು, 5 ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಈ ಗ್ಯಾರಂಟಿಗಳ ಘೋಷಣೆ ಮುಂಚಿತವಾಗಿಯೇ ಲೆಕ್ಕ ಹಾಕಿಯೇ ಈ ಗ್ಯಾರಂಟಿಗಳ ಕೊಡಲು ಸಾಧ್ಯ ಎಂದು ಭರವಸೆ ಕೊಟ್ಟಿದ್ದೆವು ಎಂದರು.
ಖಜಾನೆ ಖಾಲಿಯಾಗಿದ್ದರೆ ಇವುಗಳನ್ನೆಲ್ಲ ಜಾರಿ ಮಾಡಲು ಆಗುತ್ತಿತ್ತೇ? ಸಂಬಳ ಕೊಟ್ಟಿಲ್ಲ ಅಂತ ಸರ್ಕಾರಿ ನೌಕರರು ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು, ಯೋಜನೆಗಳ ಜಾರಿ ಮಾಡಿದ ಮೇಲೆಯೂ ಸರ್ಕಾರದ ಖಜಾನೆ ಖಾಲಿ ಆಗಿಲ್ಲ, ಎಲ್ಲ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ, ಯಾವುದೇ ಕೆಲಸ ನಿಲ್ಲಿಸಿಲ್ಲ, ದುಡ್ಡಿಲ್ಲ ಎಂದು ಹೇಳಿ ಮುಂದೂಡಿಲ್ಲ ಎಂದರು.ಪ್ರಧಾನಿಯಾಗಿ ಮೋದಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. 10 ವರ್ಷಗಳ ಕಾಲ ಪ್ರಧಾನಿಯಾದ ಮೋದಿಯವರು ತಮ್ಮ ಸರ್ಕಾರ ಈ ಅವಧಿಯಲ್ಲಿ ಏನು ಸಾಧನೆ ಮಾಡಿರುವೆವು ಅನ್ನೋದನ್ನ ಜನರ ಮುಂದಿಸಬೇಕು, ಎಷ್ಟು ಯೋಜನೆಗಳು ಆದವು, ಇನ್ನೂ ಎಷ್ಟು ಯೋಜನೆಗಳು ಬಾಕಿಯಿವೆ, ಇದ್ದರೆ ಅದಕ್ಕೇನು ಕಾರಣ ಎಂದು ಜನರಿಗೆ ಚುನಾವಣೆ ವೇಳೆ ಪ್ರಚಾರದಲ್ಲಿ ವಿವರಿಸಬೇಕು. ಅದು ಬಿಟ್ಟು, ದ್ವೇಷ ಭಾವನೆಗಳ ಕೆರಳಿಸುವ ಮಾತುಗಳ ಮೂಲಕ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.
ವಿದೇಶದಿಂದ ಕಪ್ಪು ಹಣ ತರುವ ಭರವಸೆ ನೀಡಿದ್ದರು, 15 ಲಕ್ಷ ರು.ಗಳನ್ನು ಕೊಟ್ಟರೇ? ವರ್ಷದಲ್ಲಿ 2 ಕೋಟಿಯಂತೆ 10 ವರ್ಷಗಳಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಯಾಯಿತೇ? ರೈತರ ಆದಾಯ ದುಪ್ಪಟ್ಟಾಯಿತೇ? ಅಗತ್ಯ ವಸ್ತುಗಳ ಬೆಲೆ ಇಳಿಸಲಿಲ್ಲ, ರುಪಾಯಿ ಮೌಲ್ಯ ಹೆಚ್ಚಿಸಲಿಲ್ಲ, ಪೆಟ್ರೋಲ್ ಡೀಸೆಲ್ ಗ್ಯಾಸ್, ಅಡುಗೆ ಅನಿಲ ಬೆಲೆ ತಗ್ಗಲಿಲ್ಲ, ಅಚ್ಛೇ ದಿನ್ ಬರಲೇ ಇಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.