ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ಬರ ಘೋಷಣೆಗೆ ಆಗ್ರಹಿಸಿ ನಡೆದಿರುವ ಬಿಜೆಪಿಯ ಎರಡನೇ ದಿನದ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಈ ಹೋರಾಟ ಎ.ಎಸ್. ಪಾಟೀಲ ನಡಹಳ್ಳಿಯ ಹೋರಾಟವಲ್ಲ. ಇದು ತಾಲೂಕಿನ ರೈತರ ಬದುಕಿನ ಹೋರಾಟ. ರೈತರು ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಸರ್ಕಾರದ ಕೊರಳುಪಟ್ಟಿ ಹಿಡಿದು ಕೇಳೋಣ. ತಾಲೂಕನ್ನು ಬರಪೀಡಿತ ಎಂದು ಯಾಕೆ ಘೋಷಣೆ ಮಾಡುತ್ತಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಬರ ಘೋಷಣೆಗೆ ಆಗ್ರಹಿಸಿ ನಡೆದಿರುವ ಬಿಜೆಪಿ ಹಮ್ಮಿಕೊಂಡಿರುವ ಎರಡನೇ ದಿನದ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಮಂಗಳವಾರ ಅವರು ಮಾತನಾಡಿದರು.ನಿಯಮಾವಳಿ ಪ್ರಕಾರ ಎಲ್ಲ ಅಂಶಗಳು ಬರ ಘೋಷಣೆಗೆ ಅರ್ಹ ತಾಲೂಕು ಎಂದು ಹೇಳುತ್ತಿದ್ದರೂ ರೈತರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಉಸ್ತುವಾರಿ ಸಚಿವರು-ಕ್ಷೇತ್ರದ ಶಾಸಕರು ನಿಮ್ಮ ರಾಜಕೀಯ ಜಗಳವನ್ನು ರಾಹುಲ್ ಗಾಂಧಿ, ಮುಖ್ಯಮಂತ್ರಿಗಳ ಮುಂದೆ ಮಾಡಿ. ರೈತರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಿ. ಅದು ಉಸ್ತುವಾರಿ ಮಂತ್ರಿಗಳು, ಶಾಸಕರ ಜವಾಬ್ದಾರಿ. ರೈತರ ಹೋರಾಟ ಆರಂಭವಾದ ನಂತರ ಅಪ್ಪಾಜಿ ನಾಡಗೌಡರು ಹಸಿ ಸುಳ್ಳು ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳ ಜತೆಗೆ ಮಾತನಾಡಿದ್ದೇನೆ. ಆದಷ್ಟು ಶೀಘ್ರ ಬರಗಾಲ ಘೊಷಣೆ ಆಗುತ್ತದೆ ಎಂದು ಒಂದು ಕಡೆ ಹೇಳಿದರೆ ಸತ್ಯಾಗ್ರಹ ಮಾಡುತ್ತೇನೆ ಎಂದು ಮತ್ತೊಮ್ಮೆ ಹೇಳುತ್ತಾರೆ ಎಂದು ಟೀಕಿಸಿದರು.

ರೈತರು ಸಾಲ ಕಟ್ಟಲು ಹೋಗಬೇಡಿ. ಬೆಳೆ ಬೆಳೆಯುವುದಕ್ಕೆ ನಮ್ಮ ರೈತ ಸಾಲ ಮಾಡಿದ್ದಾನೆ. ಅದನ್ನು ಕಟ್ಟುವ ಅವಶ್ಯಕತೆ ಇಲ್ಲ. ಸರ್ಕಾರ ₹5 ಲಕ್ಷದವರೆಗೆ ಬೆಳೆಸಾಲ ಮನ್ನಾ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆದಿರುವ ಪಾದಯಾತ್ರೆಯಲ್ಲಿ ಹಕ್ಕೊತ್ತಾಯ ಮಾಡಲಾಗಿದೆ. ರೈತರಿಗೆ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ನಡಹಳ್ಳಿ ಆಗ್ರಹಿಸಿದರು.

ಮುಖಂಡರಾದ ಮಲಕೇಂದ್ರಗೌಡ ಪಾಟೀಲ, ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ, ಪ್ರೇಮಸಿಂಗ ಚವ್ಹಾಣ, ಸೋಮನಗೌಡ ಬಿರಾದಾರ ಕವಡಿಮಟ್ಟಿ, ಅಕ್ಷಯ ನಾಡಗೌಡ, ನಿಖಿಲ್‌ಗೌಡ ಪಾಟೀಲ, ಗಿರೀಶಗೌಡ ಪಾಟೀಲ, ಮದನ್‌ಸ್ವಾಮಿ ಹಿರೇಮಠ, ಸಂಗನಗೌಡ ಪಾಟೀಲ, ಬಸವರಾಜ ನಂದಿಕೇಶ್ವರಮಠ, ಪುರಸಭೆ ಮಾಜಿ ಸದಸ್ಯೆ ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ಸುಭಾಷ ಕಟ್ಟಿಮನಿ, ಸಂಗು ಹತ್ತಿ, ಗುರುನಾಥ ದೇಶಮುಖ ಮತ್ತಿತರರು ಪಾಲ್ಗೊಂಡಿದ್ದರು.

ಹೋರಾಟದಲ್ಲಿ ಯುವಕರು ಭಾಗಿಯಾಗಲು ಭರತಗೌಡ ಕರೆ: ಬೆಂಗಳೂರಿನಿಂದ ಆಗಮಿಸಿದ್ದ ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ದೇಶದ ಬೆನ್ನೆಲುಬು ರೈತ. ಅವರಿಗೆ ಸಂಕಷ್ಟ ಎದುರಾದಾಗ ಅವರ ಬೆನ್ನಿಗೆ ನಿಲ್ಲುವ ಕೆಲಸವನ್ನು ಯುವ ಸಮೂಹ ಮಾಡಬೇಕು. ಕ್ಷೇತ್ರದ ಶಾಸಕರು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಸರ್ಕಾರವನ್ನು ಎಚ್ಚರಿಸಲು ಯುವ ಸಮೂಹ ರೈತರ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.

ತಾಲೂಕಿನ ದುರದೃಷ್ಟ, ನಾನೀಗ ವಿಧಾನಸಭೆಯ ಒಳಗಿಲ್ಲ. ನಾನು ಶಾಸಕನಿದ್ದ ಸಮಯದಲ್ಲಿ ಕೆರೆ ತುಂಬಿಸುವ ಕೆಲಸ ಮಾಡಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿಸಿದ್ದೇವೆ. ಕೊರೊನಾ, ಅತಿವೃಷ್ಟಿ ಸಮಯದಲ್ಲಿ ನಮ್ಮ ಕುಟುಂಬದಿಂದ ಹಗಲಿರುಳು ನೊಂದವರ, ಸಂಕಷ್ಟಕ್ಕೀಡಾದವರಿಗೆ ನೆರವಿನ ಸಹಾಯಹಸ್ತ ಚಾಚಿದ್ದೇವೆ. ರೈತರ ಇಂತಹ ಸಂಕಷ್ಟದ ಸಮಯದಲ್ಲಿ ನನಗೆ ಆಶೀರ್ವಾದ ಮಾಡಬೇಕಿತ್ತು.

-ಎ.ಎಸ್‌. ಪಾಟೀಲ ನಡಹಳ್ಳಿ ಅಧ್ಯಕ್ಷರು ಬಿಜೆಪಿ ರಾಜ್ಯ ಯುವ ಮೋರ್ಚಾ ಘಟಕ