ಇದು ಜಾತಿ, ಧರ್ಮ, ಅಸೂಯೆಯ ಗೆಲುವು: ಡಿಕೆ ಸುರೇಶ್

| Published : Jun 11 2024, 01:35 AM IST

ಸಾರಾಂಶ

ರಾಜಕಾರಣದಲ್ಲಿ ಜಾತಿ ಇಷ್ಟೊಂದು ಪ್ರಮುಖ ವಿಚಾರ ಆಗುತ್ತದೆ ಅಂತ ಭಾವಿಸಿರಲಿಲ್ಲ. ನಾನು ಜಾತಿ , ಧರ್ಮದ ದೃಷ್ಟಿಯಲ್ಲಿ ರಾಜಕಾರಣ ಮಾಡಿವನಲ್ಲ. ಭಾವನಾತ್ಮಕ ವಿಚಾರಗಳನ್ನು ಬಳಸಿಕೊಂಡವನಲ್ಲ. ಜಿಲ್ಲೆಯ ಜನರ ವೈಯಕ್ತಿಕ ಕಷ್ಟ- ಸುಖ, ರೈತರ ಸಮಸ್ಯೆ, ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂಬ ದೃಷ್ಟಿಯಲ್ಲಿ ಕೆಲಸ ಮಾಡಿದವನು.

ಕನ್ನಡಪ್ರಭ ವಾರ್ತೆ ರಾಮನಗರ

ನನಗೆ ಯಾರು ಹಿತಶತ್ರುಗಳಿಲ್ಲ. ನನಗೆ ನಾನೇ ಶತ್ರು. ಅಷ್ಟಕ್ಕೂ ಇದು ಬಿಜೆಪಿ - ಜೆಡಿಎಸ್ ಗೆಲುವು ಅಲ್ಲ. ಜಾತಿ, ಧರ್ಮ, ಭಾವನಾತ್ಮಕ ವಿಚಾರ ಹಾಗೂ ಅಸೂಯೆಯ ಗೆಲುವು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ 5 ಗ್ಯಾರಂಟಿಗಳನ್ನು ಮೀರಿ ಜಾತಿ, ಧರ್ಮ, ಭಾವನಾತ್ಮಕ ವಿಚಾರ ಹಾಗೂ ಅಸೂಯೆ ಪ್ರಬಲವಾಗಿತ್ತು. ಅದು ಹೇಗೆಂಬುದನ್ನು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ ಎಂದರು.

ರಾಜಕಾರಣದಲ್ಲಿ ಜಾತಿ ಇಷ್ಟೊಂದು ಪ್ರಮುಖ ವಿಚಾರ ಆಗುತ್ತದೆ ಅಂತ ಭಾವಿಸಿರಲಿಲ್ಲ. ನಾನು ಜಾತಿ , ಧರ್ಮದ ದೃಷ್ಟಿಯಲ್ಲಿ ರಾಜಕಾರಣ ಮಾಡಿವನಲ್ಲ. ಭಾವನಾತ್ಮಕ ವಿಚಾರಗಳನ್ನು ಬಳಸಿಕೊಂಡವನಲ್ಲ. ಜಿಲ್ಲೆಯ ಜನರ ವೈಯಕ್ತಿಕ ಕಷ್ಟ- ಸುಖ, ರೈತರ ಸಮಸ್ಯೆ, ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂಬ ದೃಷ್ಟಿಯಲ್ಲಿ ಕೆಲಸ ಮಾಡಿದವನು. ಜನರು ನಿರೀಕ್ಷೆ ಮಾಡುವುದಕ್ಕಿಂತ ಮುಂಚಿತವಾಗಿ ಅವರ ಕಷ್ಟಗಳಿಗೆ ಸ್ಪಂದಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಇಟ್ಟುಕೊಂಡು ಕೆಲಸ ಮಾಡಿದವನು. ಜನರು ಅದು ಬೇಡವೆಂದು ತೀರ್ಪು ನೀಡಿದ್ದಾರೆ. ಆ ತೀರ್ಪನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದರು.

ಜನರಿಂದ ನನ್ನ ಕೆಲಸ , ನನ್ನನ್ನು ತಿರಸ್ಕಾರ :

ನಾನು ಸಂಸದನಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ, ಅದರಲ್ಲೂ ರಾಮನಗರ ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಆ ಆತ್ಮತೃಪ್ತಿ, ಸಂತೋಷ ನನಗಿದೆ. 4ನೇ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ನಾನು ಮಾಡಿದ ಕೆಲಸ ಕಾರ್ಯಗಳನ್ನು ಜನರ ಮುಂದಿಟ್ಟು ಕೂಲಿ ಕೇಳಿದೆ. ಬೇರೆಯವರ ಹೆಸರಿನಲ್ಲಿ ಮತ ಕೇಳಲಿಲ್ಲ. ಜನರು ಸಾರಾಸಗಟಾಗಿ ತಿರಸ್ಕಾರ ಮಾಡಿದ್ದಾರೆ.

ರಾಜಕಾರಣದಲ್ಲಿ ಸೋಲು, ಗೆಲುವು ಸಹಜ. ನಾನು ಹೊಸದಾಗಿ ಬಂದಾಗ ಹೊಸಬ ಅಂತ ಅವಕಾಶ ನೀಡಿದರು. ಈಗ ನನಗಿಂತ ಚೆನ್ನಾಗಿ ಕೆಲಸ ಮಾಡುತ್ತಾರೆ, ಡಾಕ್ಟರ್, ವಿದ್ಯಾವಂತರು ಅಂತ ಭಾವಿಸಿ ಜನರು ಮತ ನೀಡಿದ್ದಾರೆ. ನೂತನ ಸಂಸದರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಎಲ್ಲಾದಕ್ಕೂ ಫುಲ್ ಸ್ಟಾಪ್ ಎಂಬುದು ಇರುತ್ತದೆ. ಜನರು ನನ್ನ ಕೆಲಸ , ನನ್ನನ್ನು ತಿರಸ್ಕಾರ ಮಾಡಿ ವಿರಾಮ ನೀಡಿದ್ದಾರೆ. ಆ ವಿರಾಮವನ್ನು ನಾನೂ ನಿರೀಕ್ಷೆ ಮಾಡುತ್ತಿದ್ದೆ. ಈಗ ಆ ವಿರಾಮ ಸಿಕ್ಕಿದ್ದು, ವಿರಾಮ ತೆಗೆದುಕೊಳ್ಳುತ್ತೇನೆ. ಈ ಚುನಾವಣೆಯ ಸೋಲು ನನ್ನ ವೈಯಕ್ತಿಕ ಸೋಲು. ಅದನ್ನು ಬೇರೆಯವರ ಮೇಲೆ ಹೇರುವುದಿಲ್ಲ ಎಂದು ತಿಳಿಸಿದರು.

ಪಕ್ಷದೊಳಗೆ ಏನೂ ವ್ಯತ್ಯಾಸಗಳು ಆಗಿಲ್ಲ. ಮುಖಂಡರು , ಕಾರ್ಯಕರ್ತರು ಸಾಮೂಹಿಕವಾಗಿ ಬೆಂಬಲ ನೀಡಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಎಲ್ಲಾ ಸಮುದಾಯಗಳೂ ಸಹಕಾರ ನೀಡಿವೆ. ವಿರೋಧ ಪಕ್ಷದವರು ತಮಗೆ ಇಷ್ಟ ಬಂದಂತೆ ಮಾತನಾಡುತ್ತಾರೆ. ನನ್ನ ಸೋಲಿಗೆ ನಾನೇ ಕಾರಣ, ಬೇರೆ ಯಾರೂ ಕಾರಣ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ತೃಪ್ತಿ:

ನನಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ನಾನು ಅನಿರೀಕ್ಷಿತವಾಗಿ ರಾಜಕಾರಣಕ್ಕೆ ಬಂದವನು. ಮೊದಲ ಬಾರಿ ಸಂಸದನಾಗಿದ್ದಾಗ 8 ತಿಂಗಳು ಮಾತ್ರ ಯುಪಿಎ ಸರ್ಕಾರ ಇತ್ತು. ನನಗೆ 5 ತಿಂಗಳು ಕೆಲಸ ಮಾಡಲು ಅವಕಾಶ ಸಿಕ್ಕಿತು. ಆಗಲೂ ಕ್ಷೇತ್ರ ಸುತ್ತಿ ಕೆಲಸ ಮಾಡಿದ್ದೇನೆ. ತದ ನಂತರ ಎನ್ ಡಿಎ ನೇತೃತ್ವದ ಸರ್ಕಾರ ಬಂದ ಮೇಲೂ 2014-19 ರಿಂದ 2019 -2024ರವರೆಗೆ ವಿರೋಧ ಪಕ್ಷದ ಸಂಸದನಾಗಿ ರಾಜ್ಯ ಹಾಗೂ ಜಿಲ್ಲೆಯ ಹಿತಕ್ಕಾಗಿ ಏನೆಲ್ಲ ಕೆಲಸ ಕಾರ್ಯ ಮಾಡಲು ಸಾಧ್ಯವಿತ್ತೋ ಅದನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ.

ಸಂಸದನಾಗಿ 10 ವರ್ಷ 8 ತಿಂಗಳು ಜಿಲ್ಲೆಯ ಅಭಿವೃದ್ಧಿಗೆ, ರೈತರು, ಬಡವರು, ದೀನ ದಲಿತರು, ಹಿಂದುಳಿದ ವರ್ಗಗಳು, ಮಹಿಳೆಯರ ಕಲ್ಯಾಣದ ದೃಷ್ಟಿಯಿಂದ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಪ್ರತಿ ಮನೆಗೆ ತಲುಪಿಸುವ ಕೆಲಸ ಮಾಡಿರುವುದಾಗಿ ಸುರೇಶ್ ಹೇಳಿದರು.

ಜಿಲ್ಲೆಯ ಅಭಿವೃದ್ಧಿ ವೇಗ ಕಡಿಮೆ ಆಗಲ್ಲ:

ರಾಮನಗರ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟಿರುವ ಮಾತನ್ನು ಈಡೇರಿಸುತ್ತೇವೆ. ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾವ ಕಾರಣಕ್ಕೂ ಜಿಲ್ಲೆಯ ಅಭಿವೃದ್ಧಿ ವೇಗ ಕಡಿಮೆ ಆಗುವುದಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.ಜಿಲ್ಲೆಯನ್ನು ಅಭಿವೃದ್ಧಿಯಲ್ಲಿ ಮುಂಚೂಣಿಗೆ ತರುವ ಮಾತನ್ನು ಈಡೇರಿಸುತ್ತೇವೆ. ಸಾಮಾನ್ಯ ಪ್ರಜೆಯಾಗಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಮ್ಮ ಶಾಸಕರು ಸಹಕಾರ , ಸಲಹೆ ಕೇಳಿದರೆ ಅವರೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಅಧಿಕಾರಿಗಳು - ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೋರುವೆ:ರಾಮನಗರ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಸರ್ಕಾರಿ ಅಧಿಕಾರಿಗಳು ಸಾಕಷ್ಟು ಸಹಕಾರ ನೀಡಿದ್ದಾರೆ. ನಾನೇನು ವೈಯಕ್ತಿಕವಾಗಿ ಯಾರ ಮೇಲೂ ಆರೋಪ ಮಾಡಲಿಲ್ಲ. ಯಾರಿಗೂ ತೊಂದರೆ ಕೊಟ್ಟವನಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿ, ರೈತರ ಕಷ್ಟ ನಿವಾರಿಸುವ ಗುರಿ ಇಟ್ಟುಕೊಂಡು ಕೆಲಸ ಮಾಡಿದೆ. ವೈಯಕ್ತಿಕ ಲಾಭಕ್ಕಾಗಿ ಎಂದೂ ಕೆಲಸ ಮಾಡಿದವನಲ್ಲ. ಅವರ ಮನಸ್ಸಿಗೆ ನೋವು ಆಗಿದ್ದರೆ, ಪಕ್ಷದ ಮುಖಂಡರು , ಕಾರ್ಯಕರ್ತರಿಗೆ ಬೇಸರ ಆಗಿದ್ದರೆ ನಾನು ಅವರಲ್ಲಿ ಕ್ಷಮೆ ಕೋರುತ್ತೇನೆ.

ಕಾರ್ಯಕರ್ತರ ರಕ್ಷಣೆಯೇ ನನ್ನ ಗುರಿ

ಕಾಂಗ್ರೆಸ್ ಕಾರ್ಯಕರ್ತರ ಬೆನ್ನ ಹಿಂದೆ ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ. ಯಾರು ಕೂಡ ಅಂಜುವುದು, ಏನೋ ಆಗಿ ಹೋಗಿದೆ. ಡಿ.ಕೆ.ಸುರೇಶ್ ನನ್ನು ಸೋಲಿಸಿ ಬಿಟ್ಟಿದ್ದೇವೆ. ಇನ್ನೇನೂ ಮಾಡಲು ಆಗಲ್ಲ ಅಂದು ಕೊಂಡಿದ್ದರೆ ಅದು ಅವರ ಭ್ರಮೆ. ಪ್ರತಿ ಕಾರ್ಯಕರ್ತರ ರಕ್ಷಣೆ ನನ್ನ ಗುರಿ. ಈ ಚುನಾವಣೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಅವರಿಗೆಲ್ಲ ಧನ್ಯವಾದ ತಿಳಿಸುತ್ತೇನೆ. 10 ವರ್ಷ 8 ತಿಂಗಳು ಅವಕಾಶ ಮಾಡಿಕೊಟ್ಟಿದ್ದಕ್ಕೆ ಜನರಿಗೂ ಧನ್ಯವಾದ ತಿಳಿಸುತ್ತೇನೆ.

ಕೇಂದ್ರ ಸಚಿವರಿಂದ ಅನ್ಯಾಯ ತಪ್ಪುವ ವಿಶ್ವಾಸ :

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರು ರಾಮನಗರ ಜಿಲ್ಲೆ ಪ್ರತಿನಿಧಿಸುತ್ತಿದ್ದರು. ಈಗ ಮಂಡ್ಯ ಸಂಸತ್ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿದ್ದಾರೆ. ಅವರು ಸೇರಿ ಕರ್ನಾಟಕ ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರು ಕರ್ನಾಟಕಕ್ಕೆ ಆಗುವ ಅನ್ಯಾಯವನ್ನು ತಪ್ಪಿಸುತ್ತಾರೆಂಬ ವಿಶ್ವಾಸವಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದರು.

ಕರ್ನಾಟಕಕ್ಕೆ ಕೇಂದ್ರದಿಂದ ತೆರಿಗೆ ಹಣ ಹಂಚಿಕೆ ವಿಚಾರದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿದೆ. ಇಡೀ ರಾಷ್ಟ್ರದಲ್ಲಿ ಟೀಕೆಯನ್ನು ಎದುರಿಸಿದೆ. ಆದರೆ, ನಮ್ಮ ಹಕ್ಕುಗಳನ್ನು ಪ್ರತಿಪಾದನೆ ಮಾಡಲು ಅವಕಾಶ ಇದೆ. ಕರ್ನಾಟಕದ ಪಾಲು ಏನು ಬರಬೇಕಿತ್ತು. ಅದು ಸಿಗಬೇಕಾದದ್ದು ಪ್ರಮುಖ ವಿಚಾರ. ಅದರಲ್ಲಿ ನಾನು ವೈಯಕ್ತಿಕವಾಗಿ ಧ್ವನಿ ಎತ್ತಲು ಈಗಲೂ ಸಿದ್ದನಿದ್ದೇನೆ ಎಂದರು.

ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ, ಕೆ.ರಾಜು, ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಜಿಯಾವುಲ್ಲಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ನಗರಸಭೆ ಸದಸ್ಯ ಕೆ.ಶೇಷಾದ್ರಿ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್ , ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜು ಮತ್ತಿತರರು ಇದ್ದರು.

ಚನ್ನಪಟ್ಟಣ ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿ :

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ. ಸಾಮಾನ್ಯ ಕಾರ್ಯಕರ್ತನಾಗಿ , ಪಕ್ಷಕ್ಕಾಗಿ ದುಡಿಯುತ್ತೇನೆ. ನಮ್ಮ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಗಳಿದ್ದಾರೆ. ಉಪಚುನಾವಣೆಯಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕೊಡುತ್ತೇವೆ.

- ಡಿ.ಕೆ.ಸುರೇಶ್ , ಮಾಜಿ ಸಂಸದರು.