ಕನ್ನಡಪ್ರಭ ವಾರ್ತೆ ಕಾಗವಾಡ ಕಳೆದ 30 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದು, ಐದು ಬಾರಿ ಶಾಸಕನಾಗಿದ್ದೇನೆ. ಮುಖ್ಯಮಂತ್ರಿಗಳು ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವ ತಾಕತ್ತು ನನ್ನ ಬಳಿ ಇದೆ. ಈ ಬಾರಿ ನನಗೂ ಸಚಿವ ಸ್ಥಾನ ಬೇಕು ಎಂದು ಕಾಗವಾಡ ಶಾಸಕ ರಾಜು ಕಾಗೆ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಕಾಗವಾಡ
ಕಳೆದ 30 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದು, ಐದು ಬಾರಿ ಶಾಸಕನಾಗಿದ್ದೇನೆ. ಮುಖ್ಯಮಂತ್ರಿಗಳು ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವ ತಾಕತ್ತು ನನ್ನ ಬಳಿ ಇದೆ. ಈ ಬಾರಿ ನನಗೂ ಸಚಿವ ಸ್ಥಾನ ಬೇಕು ಎಂದು ಕಾಗವಾಡ ಶಾಸಕ ರಾಜು ಕಾಗೆ ಆಗ್ರಹಿಸಿದರು.ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಮದಭಾವಿ, ಹಣಮಾಪೂರ, ನಾಗನೂರ ಪಿಎ ಹಾಗೂ ಕಲ್ಲೂತ್ತಿ ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿ ಈ ವೇಳೆ ಸಚಿವ ಸ್ಥಾನ ಕುರಿತು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕ ಲಕ್ಷ್ಮಣ ಸವದಿ ಮತ್ತು ಕಾರ್ಯಕರ್ತರ ಮಧ್ಯೆ ಉಂಟಾದ ವಾಗ್ವಾದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಮತ್ತು ಲಕ್ಷ್ಮಣ ಸವದಿ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರು ಸುಮಾರು 35 ವರ್ಷಗಳ ಗೆಳೆಯರಿದ್ದೇವೆ. ನಮ್ಮಿಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯವಿದ್ದು, ಮಾಧ್ಯಮದವರೇ ಭಿನ್ನಾಭಿಪ್ರಾಯ ಸೃಷ್ಟಿ ಮಾಡುತ್ತಿದ್ದಾರೆ. 2028ರ ಚುನಾವಣೆಗೆ ಕಾಗವಾಡ ಮತಕ್ಷೇತ್ರದಿಂದ ನಾನು ಮತ್ತೆ ಅಭ್ಯರ್ಥಿಯಾಗುವ ಹಾಗೂ ಶಾಸಕನಾಗುವ ವಿಶ್ವಾಸ ಇದೆ ಎಂದರು.ಇನ್ನು, ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಡುವ ವಿಚಾರವಾಗಿ, ಈ ಬಗ್ಗೆ ಸದನದಲ್ಲೂ ನಾನು ಪ್ರಸ್ತಾಪಿಸಿದ್ದೇನೆ. ಶೀಘ್ರದಲ್ಲೇ ಕೃಷ್ಣಾ ನದಿಗೆ ನೀರು ಮಹಾರಾಷ್ಟ್ರದ ಕೊಯ್ನಾ ಇಲ್ಲವೇ ಕಾಳಮ್ಮವಾಡಿ ಜಲಾಶಯದಿಂದ 2 ಟಿಎಂಸಿ ನೀರು ಪೂರೈಕೆ ಸಾಧ್ಯತೆ ಇದೆ. ಅಭಿವೃದ್ಧಿ ಕಾರ್ಯಗಳು ಹಾಗೂ ನೀರಿನ ವಿಚಾರದಲ್ಲಿ ತಮ್ಮ ಬದ್ಧತೆಯನ್ನು ಮುಂದುವರಿದಿದೆ. ಕಾಗವಾಡ ಮತಕ್ಷೇತ್ರದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಸಿ, ಅವುಗಳಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಕೃಷ್ಣಾ ನದಿ ತೀರದ ಸಾವಿರಾರು ಎಕರೆ ಸವಳು ಮತ್ತು ಜವಳು ಭೂಮಿಯನ್ನು ಫಲವತ್ತತೆ ಮಾಡಲು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡದೇ, ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಿ, ಯೋಜನೆ ಸಿದ್ಧಪಡಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಅಭಿಯಂತರ ಮಲ್ಲಿಕಾರ್ಜುನ ಮಗದುಮ್, ಮುಖಂಡರಾದ ರಾವಸಾಹೇಬ ಐಹೊಳಿ, ಬಸನಗೌಡ ಪಾಟೀಲ, ರವಿಕಾಂತ ಪಾಟೀಲ, ಕೆ.ಆರ್.ಪಾಟೀಲ, ಮಲ್ಲಿಕಾರ್ಜುನ ದಳವಾಯಿ, ಬಸು ನಾಯಿಕ, ಉದಯ ಅವಳೆ, ಗುತ್ತಿಗೆದಾರರಾದ ರಾಜು ಆಲಬಾಳ, ತಿಪ್ಪಣ್ಣ ಪೂಜಾರಿ, ಶಿವಪುತ್ರ ನಾಯಿಕ, ಸಿದ್ದಾರೂಢ ನ್ಯಾಮಗೌಡ್ರ, ಅಮಸಿದ್ದ ಮಂಗಳೂರ, ರಾಜು ಮರಡಿ, ಬಸವರಾಜ ಮಗದುಮ್, ಅನೀಲ ಶಿಂಧೆ, ಬಸನಗೌಡ ಪಾಟೀಲ ಸೇರಿ ಅನೇಕರು ಇದ್ದರು.-----------ಕೋಟ್
ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗೆ ಮಂತ್ರಿಗಿರಿ ನೀಡುವಂತೆ ಹೈಕಮಾಂಡ್‌ಗೆ 31 ಜನ ಶಾಸಕರು ಪತ್ರ ಬರೆದಿದ್ದಾರೆ. ಅವರಿಗೆ ನೀಡಲಿ. ಆದರೆ, ನಮಗೂ ಸಾಮರ್ಥ್ಯ ಇದೆ. ನಾನೂ ಬಿಎಸ್ಸಿ ಪದವಿಧರನಿದ್ದೇನೆ. 5 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಉತ್ತರ ಕರ್ನಾಟಕದಲ್ಲಿಯೇ ಹಿರಿಯ ಶಾಸಕನಾಗಿದ್ದು, ಹಿರಿತನದ ಆಧಾರದ ಮೇಲೆ ನನಗೆ ಯಾವ ಇಲಾಖೆ ಕೊಟ್ಟರು ನಿಭಾಯಿಸುತ್ತೇನೆ.- ರಾಜು ಕಾಗೆ, ಕಾಗವಾಡ ಶಾಸಕ