ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಗೌರಿ, ಗಣೇಶ ಹಬ್ಬದ ಸಂದರ್ಭ ಡಿಜೆ ಬಳಕೆಯಲ್ಲಿ ಹೆಚ್ಚಿನ ಶಬ್ಧ ಮಾಲಿನ್ಯ ಕಂಡುಬಂದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಖಡಕ್ ಎಚ್ಚರಿಕೆ ನೀಡಿದ್ದಾರೆ.ನಗರದ ಗೌಡ ಸಮಾಜ ಸಭಾಂಗಣದಲ್ಲಿ ವಿವಿಧ ಗಣೇಶೋತ್ಸವ ಸಮಿತಿ, ಸೌಂಡ್ಸ್ ಸಿಸ್ಟಮ್ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಡಿಜೆ ಧ್ವನಿ ಬಳಕೆ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.
ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದೆ. ಆದ್ದರಿಂದ ಹಬ್ಬದ ಸಂದರ್ಭ ಭಕ್ತಿ, ಭಾವ ಇರಬೇಕು. ಹಬ್ಬದ ಆಚರಣೆಯ ನೆಪದಲ್ಲಿ ಹೆಚ್ಚಿನ ಡಿಜೆ ಧ್ವನಿ ವರ್ಧಕ ಬಳಕೆ ಮಾಡಿ ಶಬ್ಧ ಮಾಲಿನ್ಯ ಉಂಟು ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಬಾರದೆಂದು ಸಲಹೆ ನೀಡಿದರು.ಅಬ್ಬರ ಡಿಜೆ ಧ್ವನಿ ಬಳಿಸದರೆ ಆರೋಗ್ಯದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ಧ್ವನಿವರ್ಧಕ ಬಳಕೆ ಮಾಡಿದರೆ ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ ತೊಂದರೆಯಾಗುತ್ತದೆ. ಈ ಬಗ್ಗೆ ಎಲ್ಲರೂ ಮಾಹಿತಿ ತಿಳಿದುಕೊಳ್ಳಬೇಕು. ಭವಿಷ್ಯದ ಮಕ್ಕಳ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ನಿಗದಿತ ಮಿತಿಗಿಂತ ಹೆಚ್ಚಿನ ಶಬ್ಧ ಸೂಸುವ ಧ್ವನಿ ವರ್ಧಕಗಳ ಬಳಕೆಗೆ ದೇವಾಲಯದ ಸಮಿತಿ ಸದಸ್ಯರು ಸ್ವಯಂ ನಿಯಂತ್ರಣ ಮಾಡಬೇಕು. ಇದನ್ನು ಹೊರತು ಪಡಿಸಿ ಡಿಜೆ ಮೂಲಕ ಅಬ್ಬರ ಶಬ್ಧ ಮಾಡಿದರೆ ಸ್ಥಳದಲ್ಲೇ ಶಿಸ್ತು ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.ಹೆಚ್ಚಿನ ಧ್ವನಿ ಬಳಕೆಯಿಂದ ಹೃದಯಾಘಾತ, ಕಿವಿ ಹಾನಿ, ಮಾನಸಿಕ ಸಮಸ್ಯೆ ಮತ್ತಿತರ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ. ಹೆಚ್ಚಿನ ಧ್ವನಿ ಬಳಕೆ ಕಂಡುಬಂದಲ್ಲಿ ಸಂಬಂಧಿಸಿದ ವಾಹನವನ್ನು ವಶಪಡಿಸಿಕೊಂಡು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರಾದ ಡಾ. ಶ್ರೀಕಾಂತ್ ಮಾತನಾಡಿ ಡಿಜೆ ಬಳಕೆಯ ಸಂದರ್ಭ ಹೆಚ್ಚಿನ ಶಬ್ಧ ಮಾಲಿನ್ಯ ಉಂಟಾಗುವುದರಿಂದ ಗರ್ಭಿಣಿಯರು, ಮಕ್ಕಳು, ವಯೋವೃದ್ಧರು, ಹೃದಯ ಸಂಬಂಧಿ ರೋಗಿಗಳು, ನವಜಾತ ಶಿಶುಗಳಿಗೆ ತೊಂದರೆಯಾಗುತ್ತದೆ. ಅಲ್ಲದೆ ಇದರಿಂದ ಹಲವು ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.ಧ್ವನಿ ವರ್ಧಕದಲ್ಲಿ 60ರಿಂದ 65 ಡೆಸಿಬಲ್ ಬಳಕೆ ಮಾಡಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಇದಕ್ಕಿಂತ ಹೆಚ್ಚಿನ ಡೆಸಿಬಲ್ ಬಳಕೆ ಮಾಡಿದರೆ ಹಲವು ಗಂಭೀರ ಸಮಸ್ಯೆ ಉಂಟಾಗುತ್ತದೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಮಾತನಾಡಿದರು. ಸಭೆಯ ನಂತರ ಡೆಸಿಬಲ್ ಮೀಟರ್ ಬಳಸಿ ಶಬ್ಧ ಮಾಲಿನ್ಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.