ರಣ ಬಿಸಿಲು, ಅತಿವೃಷ್ಟಿ, ಅತಿಯಾದ ಚಳಿಯನ್ನು ವರ್ಷದುದ್ದಕ್ಕೂ ಆಯಾ ಕಾಲಮಾನಕ್ಕೆ ತಂದು ಕೊಟ್ಟ 2025ನೇ ವರ್ಷ ದಾವಣಗೆರೆ ಜಿಲ್ಲೆಗೆ ವಿಶೇಷವಾಗಿ ಕೊಟ್ಟಿದ್ದಕ್ಕಿಂತ ಕಸಿದುಕೊಂಡಿದ್ದೇ ಹೆಚ್ಚು ಎಂಬುದಕ್ಕೆ ವರ್ಷಾಂತ್ಯದ ಮಾಸವು ಸಾಕ್ಷಿಯಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಣ ಬಿಸಿಲು, ಅತಿವೃಷ್ಟಿ, ಅತಿಯಾದ ಚಳಿಯನ್ನು ವರ್ಷದುದ್ದಕ್ಕೂ ಆಯಾ ಕಾಲಮಾನಕ್ಕೆ ತಂದು ಕೊಟ್ಟ 2025ನೇ ವರ್ಷ ದಾವಣಗೆರೆ ಜಿಲ್ಲೆಗೆ ವಿಶೇಷವಾಗಿ ಕೊಟ್ಟಿದ್ದಕ್ಕಿಂತ ಕಸಿದುಕೊಂಡಿದ್ದೇ ಹೆಚ್ಚು ಎಂಬುದಕ್ಕೆ ವರ್ಷಾಂತ್ಯದ ಮಾಸವು ಸಾಕ್ಷಿಯಾಯಿತು.

ಜೀವಂತ ದಂತಕಥೆ ಅಂತಲೇ ಹೆಸರಾಗಿದ್ದ ಸಾಧಕ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ದಾವಣಗೆರೆ ಮತ್ತು ದಕ್ಷಿಣ ಕ್ಷೇತ್ರದ ಸೋಲಿಲ್ಲದ ಶಾಸಕರಂದೇ ಅಜೇಯರಾಗಿದ್ದ ಶಾಮನೂರು ಶಿವಶಂಕರಪ್ಪನವರನ್ನು ಕಸಿದುಕೊಂಡ ವರ್ಷವಾಗಿ 2025 ಸದಾ ಕಾಡಲಿದೆ.

ಹೊಸ ನಿರೀಕ್ಷೆ, ಹೊಸ ವಿಶ್ವಾಸ, ಹೊಸ ಆಲೋಚನೆ, ನವೀನ ಪ್ರಯತ್ನಗಳೊಂದಿಗೆ 2026ರ ಕ್ಯಾಲೆಂಡರ್ ವರ್ಷಕ್ಕೆ ಸ್ವಾಗತ ಕೋರಲು ನಗರ, ಜಿಲ್ಲೆಯ ಜನರು, ವಿದ್ಯಾರ್ಥಿ, ಯುವಜನರು ತುದಿಗಾಲಲ್ಲಿದ್ದಾರೆ. ಅದೇ ರೀತಿ ಇತಿಹಾಸವನ್ನು ಓದದವನು, ಇತಿಹಾಸ ರಚಿಸಲಾರ ಎಂಬ ಮಾತು ಇದೆ. ಹಾಗಾಗಿ 2025ನೇ ಸಾಲಿನಲ್ಲಿ ದಾವಣಗೆರೆ ನಗರ, ಜಿಲ್ಲೆಯ ಅನುಭವಿಸಿದ ಸಿಹಿ-ಕಹಿ ಅನುಭವ, ನೋವು-ನಲಿವುಗಳ ಹೂರಣ, ಮರೆಯಬೇಕಾದ ಘಟನೆಗಳು, ಮತ್ತೆಂದು ಮರುಕಳಿಸಬಾರದೆಂಬ ಘಟನೆಗಳತ್ತ ಒಂದು ದೃಷ್ಟಿ ಹರಿಸುವ ಪ್ರಯತ್ನ ಇದು.

ಪಂಚ ಪೀಠಾಧೀಶರ ಶೃಂಗಕ್ಕೆ ಶಕ್ತಿ ತುಂಬಿದ್ದ ಶಾಮನೂರು:

ದಾವಣಗೆರೆ ಅಭಿನವ ರೇಣುಕಾ ಮಂದಿರದಲ್ಲಿ ಜು.21ರಿಂದ ಎರಡು ದಿನ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆಯಿಂದ ಪಂಚ ಪೀಠಾಧೀಶ್ವರರ ಶೃಂಗ ಸಭೆ ನಡೆದಿತ್ತು. ಈ ಮೂಲಕ ಭಕ್ತರು ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಿದ್ದರು. ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿದ್ದ ಡಾ.ಶಾಮನೂರು ಶಿವಶಂಕರಪ್ಪ ಇಂತಹದ್ದೊಂದು ಐತಿಹಾಸಿಕ ಶೃಂಗಸಭೆಗೆ ಮತ್ತಷ್ಟು ಶಕ್ತಿ ತಂದಿದ್ದರು. ಅದೇ ವರ್ಷಾಂತ್ಯಕ್ಕೆ ಶಾಮನೂರು ಕ್ರಿಯಾ ಸಮಾಧಿ ಕಾರ್ಯಕ್ಕೆ ಪಂಚ ಪೀಠಾಧೀಶರು, ನಾಡಿನ ವೀರಶೈವ ಲಿಂಗಾಯತ ಸೇರಿದಂತೆ ವಿವಿಧ ಜಾತಿ ಸಮುದಾಯಗಳ ಮಠಾಧೀಶರು ಪಾಲ್ಗೊಂಡಿದ್ದರು. ಶಾಮನೂರು ಕೇವಲ ಶ್ರೀಮಂತರಷ್ಟೇ ಅಲ್ಲ, ಎಲ್ಲಾ ಮಠಾಧೀಶರು, ಹರ-ಗುರು-ಚರ-ಮೂರ್ತಿಗಳ ಮನ ಗೆದ್ದಿದ್ದರು ಎಂಬುದಕ್ಕೆ ಅಂತ್ಯಕ್ರಿಯೆಗೆ ಸೇರಿದ್ದ ಮಠಾಧೀಶರು, ಪೀಠಾಧೀಶರೆ ಸಾಕ್ಷಿಯಾಗಿದ್ದರು.

ತಾಲಿಬಾನ್ ಮಾದರಿಯಲ್ಲಿ ಚನ್ನಗಿರಿ ತಾ. ತಾವರಕೆರೆ ಗ್ರಾಮದ ಜಾಮೀಯಾ ಮಸೀದಿ ಎದುರಿನ ರಸ್ತೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದ ಪ್ರಕರಣ ಏಪ್ರಿಲ್ ತಿಂಗಳಲ್ಲಿ ವರದಿಯಾಗಿತ್ತು. ರಾಷ್ಟ್ರೀಯ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿತ್ತು. ಆಯೋಗದ ಸದಸ್ಯೆ ಅರ್ಚನಾ ಮಜುಂದಾರ್‌ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ, ಪರಿಶೀಲನೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನೂ ಬಂಧಿಸಲಾಗಿತ್ತು.

ಸಮೃದ್ಧಿ ಬೆಳೆ ಬಂದರೂ ಸಿಗದ ಬೆಲೆ:

ಭದ್ರಾ ನಾಲೆ ದಾವಣಗೆರೆ ಜಿಲ್ಲೆಯ ನರ ನಾಡಿಯಂತೆ ವ್ಯಾಪಿಸಿದೆ. ಅದೇ ರೀತಿ ತುಂಗಭದ್ರಾ ನದಿ ಈ ಜಿಲ್ಲೆಯ ಜೀವನದಿಯಾಗಿದೆ. ಆದರೂ, ಮಳೆಯಾಶ್ರಿತ ಪ್ರದೇಶವನ್ನೇ ಹೆಚ್ಚಾಗಿ ಹೊಂದಿರುವ ಮಧ್ಯ ಕರ್ನಾಟಕದ ಜಿಲ್ಲೆಗೆ 2025ರಲ್ಲಿ ಸಮೃದ್ಧ ಮಳೆಯಾಗಿತ್ತು. ಪರಿಣಾಮ ಕೆರೆ ಕಟ್ಟೆಗಳು ಕೋಡಿ ಬಿದ್ದರೆ, ಹಳ್ಳ ಕೊಳ್ಳಗಳು ಮೈದುಂಬಿ ಹರಿದಿದ್ದವು. ಸತತ ಮಳೆಯಿಂದ ಅಂತರ್ಜಲ ಅಭಿವೃದ್ಧಿಯಾಗಿ, ರೈತರ ಬದುಕು ಹಸನಾಗಿತ್ತು. ಉತ್ತಮ ಬೆಳೆ ಕೈಗೆ ಬಂದರೂ, ಹರಿಸಿದ ಬೆವರಿಗೆ ಸರಿಯಾದ ಕೂಲಿ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಲಿಲ್ಲವೆಂಬ ಕೊರಗು ವರ್ಷದ ಕೊನೆಯವರೆಗೂ ಅನ್ನದಾತರನ್ನು ಕಾಡಿತು. ಕೆಲ ತಾಲೂಕುಗಳಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿ ಸಂಭವಿಸಿದ್ದು, ರೈತರು ಪರಿಹಾರಕ್ಕಾಗಿ ಪರದಾಡಿದರು. ಬತ್ತಕ್ಕೆ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚು ದರವೇನೋ ಮಾರುಕಟ್ಟೆಯಲ್ಲಿ ಸಿಕ್ಕಿತ್ತು. ಆದರೆ, ರಾಜ್ಯದ ಮೆಕ್ಕೆಜೋಳದ ಕಣಜವಾದ ದಾವಣಗೆರೆ ರೈತರಿಗೆ ಮೆಕ್ಕೆಜೋಳಕ್ಕೆ ಬೆಲೆ ಸಿಗದ ಚಿಂತೆ ಕಾಡುತ್ತಲೇ ಇದೆ.

ಮಹಿಳೆ ಕೊಂದ ರಾಟ್‌ ವೀಲರ್‌ ನಾಯಿಗಳು:

ದಾವಣಗೆರೆ ತಾ.ಮಲ್ಲಶೆಟ್ಟಿಹಳ್ಳಿ ಗ್ರಾಮದಲ್ಲಿ ರಾಟ್ ನವೆಂಬರ್ ತಿಂಗಳಲ್ಲಿ ರಾಟ್ ವೀಲರ್ ಜೋಡಿ ನಾಯಿಗಳು ಮಹಿಳೆಯೊಬ್ಬಳ ಮೇಲೆರಗಿ ಆಕೆಯನ್ನು ಹರಿದು ಮುಕ್ಕಿ ಸಾಯಿಸಿದ್ದವು. ಮನೆಯಲ್ಲಿ ತಾವೇ ಸಾಕಿದ್ದ ನಾಯಿಗಳು ತಮ್ಮನ್ನೇ ಕಚ್ಚಿದ್ದರಿಂದ ಆಟೋ ರಿಕ್ಷಾವೊಂದರಲ್ಲಿ ಮಲ್ಲಶೆಟ್ಟಿಹಳ್ಳಿ ಬಿಟ್ಟು ಹೋಗಿದ್ದ ದಾವಣಗೆರೆ ದೇವರಾಜ ಅರಸು ಬಡಾವಣೆ ವಾಸಿ, ನಾಯಿ ಪ್ರೇಮಿ ಶೈಲೇಶಕುಮಾರ ಅದೇ ನಾಯಿಗಳ ಪೈಶಾಚಿಕ ಕೃತ್ಯದಿಂದ ಜೈಲು ಪಾಲಾಗಬೇಕಾಯಿತು.

ಬೆಚ್ಚಿಬೀಳಿಸಿದ ರೌಡಿಶೀಟರ್‌ ಹತ್ಯೆ:

ದಾವಣಗೆರೆ ರೌಡಿಶೀಟರ್ ಸಂತೋಷಕುಮಾರ ಅಲಿಯಾಸ್ ಕಣುಮ ಎಂಬಾತನನ್ನು ದಾವಣಗೆರೆ ಹದಡಿ ರಸ್ತೆಯ ಇಸ್ಪೀಟ್ ಕ್ಲಬ್‌ವೊಂದರಲ್ಲಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದ್ದು, ಈ ಪ್ರಕರಣದ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದರು. ಚನ್ನಗಿರಿಯಲ್ಲಿ ಔಷಧಿ ಅಂಗಡಿ ಮಾಲೀಕ, ದಾವಣಗೆರೆ ವಾಸಿ ಅಮ್ಜದ್ ಎಂಬಾತ ಅಪ್ರಾಪ್ತೆ ಸೇರಿದಂತೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿ, ಮೊಬೈಲ್ ನಲ್ಲಿ ಚಿತ್ರೀಕರಿಸಿ, ವಿಕೃತಿ ಮೆರೆಯುವ ಜೊತೆಗೆ ಸೋಷಿಯಲ್ ಮೀಡಿಯಾಗೆ ಹರಿಬಿಡುತ್ತಿದ್ದ ಪ್ರಕರಣದಲ್ಲೂ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದರು.

ಅಖಿಲ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಬಿಎಸ್ ಚನ್ನಬಸಪ್ಪ ಅಂಡ್‌ ಸನ್ಸ್ ಸಹಯೋಗದಲ್ಲಿ 7 ಕಿಮೀ ಉದ್ದದ ನಾಡ ಬಾವುಟ ವಿಶ್ವದಾಖಲೆಗೆ ಕಾರಣ‍ವಾಯಿತು. ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ ಇಂತಹದ್ದೊಂದು ಐತಿಹಾಸಿಕ ಪ್ರಯತ್ನ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ದಾಖಲೆಯಾಯಿತು. ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಹರಿಹರ ತಾ. ಗುತ್ತೂರಿನ ಸಚಿನ್ ಬಸವರಾಜ ದೇಶಕ್ಕೆ 41ನೇ ರ್ಯಾಂಗ್‌, ಚನ್ನಗಿರಿ ತಾ. ಮಾದೇನಹಳ್ಳಿ ಗ್ರಾಮ ಮೂಲದ ಮನೋರೋಗ ತಜ್ಞ ಡಾ.ದಯಾನಂದ ಸಾಗರ್ ದೇಶಕ್ಕೆ 615ನೇ ರ್‍ಯಾಂಕ್ ಪಡೆದಿದ್ದರು.

ಅಹಮ್ಮದ್ ಆಪ್ತ ಅನ್ವರ್ ಬಾಷಾ ಎಂಬಾತ ಸೇರಿದಂತೆ ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ. ಇನ್ನೂ ಈ ಜಾಲದ ಆಳಕ್ಕೆ ಇಳಿಯಲು ಇಲಾಖೆ ಸಜ್ಜಾಗಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಇಂತಹದ್ದೊಂದು ಕಾರ್ಯಾಚರಣೆ ಮೂಲಕ ಮನೆ ಮಾತಾಗುತ್ತಿದ್ದಾರೆ. ವೈಕುಂಠ ಏಕಾದಶಿ ಅಂಗವಾಗಿ ಮಂಗಳವಾರ ನಸುಕಿನ, ನಡುರಾತ್ರಿವರೆಗೆ ದಾವಣಗೆರೆ ನಗರ, ಜಿಲ್ಲಾದ್ಯಂತ ಶ್ರೀ ವೆಂಕಟೇಶ್ವರ, ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇಗುಲಗಳ ಮುಂದೆ ಭಕ್ತರ ಸಾಲುಗಟ್ಟಿ ನಿಂತು, ದರ್ಶನ ಪಡೆದರು. ಇನ್ನು ಹೊಸ ವರ್ಷಾಚರಣೆಗೆ ಅಮಲಿನಲ್ಲಿ ತೇಲಲು ವಿದ್ಯಾರ್ಥಿ, ಯುವ ಜನರು, ಪಾನಪ್ರಿಯರು ಸಿದ್ಧತೆಯಲ್ಲಿ ತೊಡಗಿದ್ದು ಮಾತ್ರ ಹೊಸ ವರ್ಷದ ಸ್ವಾಗತದ ಸಂಭ್ರಮಕ್ಕೆ ಕಪ್ಪು ಚುಕ್ಕೆಯಾಗಿ ಪ್ರತಿ ವರ್ಷ ಕಾಡುತ್ತಿದೆ.

ಮಾನವೀಯತೆ ಕೊಂಡಿ ಕಳಚಿಕೊಂಡ ಜಿಲ್ಲೆ

ದಾವಣಗೆರೆ ಇತಿಹಾಸ ದೊಡ್ಡದಲ್ಲದಿದ್ದರೂ ದಾವಣಗೆರೆ ಜನರ ಇತಿಹಾಸ ದೊಡ್ಡದು. ಅಂತಹ ಸಾಧಕ ಜನರ ಹೆಸರಿನ ಸಾಲಿನಲ್ಲಿ ಜೀವಂತ ದಂತಕಥೆಯಾಗಿದ್ದ ಶಾಮನೂರು ಶಿವಶಂಕರಪ್ಪ ತಮ್ಮ 95ನೇ ವಯಸ್ಸಿನಲ್ಲಿ ಬದುಕಿಗೆ ವಿದಾಯ ಹೇಳಿದ್ದು ಜಿಲ್ಲೆಯ ಪಾಲಿಗೆ ದೊಡ್ಡ ನಷ್ಟವೆಂದರೂ ಅತಿಶಯೋಕ್ತಿಯಲ್ಲ. ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಮಹಾರಾಜನಾಗಿ ಬಾಳಿ, ಕಡೆಗೆ ಕ್ರಿಯಾಸಮಾಧಿ ಸೇರಿದ ಶಾಮನೂರು ಶಿವಶಂಕರಪ್ಪನವರ ಸಾಧನೆ, ಕೊಡುಗೆ, ಮಾನವೀಯ ಕಳಕಳಿ ಅವಿಸ್ಮರಣೀಯವಾದುದು. ಶಾಮನೂರು ಅಗಲಿಕೆ ಕೇವಲ ಆ ಕುಟುಂಬಕ್ಕಷ್ಟೆಅಲ್ಲ, ಜಿಲ್ಲೆಯ ಜನತೆ, ವಿಶೇಷವಾಗಿ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ. ಬಡವರ ಪಾಲಿಗೆ ಆಸರೆಯಾಗಿದ್ದ ದೊಡ್ಡ ಆಲದ ಮರ ಇಲ್ಲದಂತಾಗಿದೆಯೆಂಬ ಮಾತು ಸಹಜವಾಗಿ ಎಲ್ಲರಿಂದ ಕೇಳಿ ಬರುತ್ತಿದೆ.

ದೇಶದ ಹುಬ್ಬೇರಿಸಿದ ನ್ಯಾಮತಿ ಬ್ಯಾಂಕ್‌ ದರೋಡೆ

ನ್ಯಾಮತಿ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಗೂ ಒಂದು ಸವಾಲೇ ಆಗಿತ್ತು. ಆದರೆ, ಇಡೀ ಪೊಲೀಸ್ ತಂಡ ತಮಿಳುನಾಡಿನ ಮಧುರೈ ಜಿಲ್ಲೆಯ ಕುಗ್ರಾಮವೊಂದರ ಪಾಳು ಬಾವಿಯಲ್ಲಿ ದರೋಡೆಕೋರರು ಬಚ್ಚಿಟ್ಟಿದ್ದ ಬ್ಯಾಂಕ್ ಗ್ರಾಹಕರ 17.1 ಕೆಜಿ ಚಿನ್ನವನ್ನು ಪತ್ತೆ ಮಾಡಿ, ನ್ಯಾಮತಿಯಲ್ಲಿ ಬೇಕರಿ ನಡೆಸುತ್ತಿದ್ದ ತಮಿಳುನಾಡು ಮೂಲದವರು, ಸ್ಥಳೀಯ ಆರೋಪಿಗಳನ್ನು ಬಂಧಿಸಿ, ಇಡೀ ಪ್ರಕರಣ ಭೇದಿಸಿತ್ತು. ಇದು ಪೊಲೀಸರನ್ನು ಜನ ಮೆಚ್ಚುವ ಕೆಲಸವಾದರೆ, ಮತ್ತೊಂದು ಕಡೆ ಹಾವೇರಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳಾದ ಪ್ರೊಬೇಷನರಿ ಪಿಎಸ್‌ಐ ಮಾಳಪ್ಪ ಚಿಪ್ಪಲಕಟ್ಟಿ, ಮತ್ತೋರ್ವ ಎಎಸ್‌ಐ, ಇಬ್ಬರು ಚಿನ್ನಾಭರಣ ವ್ಯಾಪಾರಿಗಳನ್ನು ಪೊಲೀಸರು ಬಂಧಿಸಿದ್ದರು. ಚಿನ್ನಾಭರಣ ತಯಾರಕನಬಳಿ ಇದ್ದ 76 ಗ್ರಾಂ ಚಿನ್ನ ದರೋಡೆ ಪ್ರಕರಣದ ಆರೋಪಿ ಪ್ರೊಬೇಷನರಿ ಎಸ್ಐ ಮಾಳಪ್ಪ ಚಿಪ್ಪಲಕಟ್ಟಿ ಸೇವೆಯಿಂದಲೇ ವಜಾ ಆಗಿದ್ದಾನೆ.

ದಾವಣಗೆರೆ ಪೊಲೀಸರ ಭರ್ಜರಿ ಡ್ರಗ್ಸ್‌ ಭೇಟಿ

ದಾವಣಗೆರೆ ನಗರದಲ್ಲಿ ವರ್ಷದ ಕೊನೆಯ 10 ದಿನಗಳಲ್ಲಿ ವಿದ್ಯಾನಗರ ಪೊಲೀಸರು ಭರ್ಜರಿ ಭೇಟೆಯಲ್ಲಿ ತೊಡಗಿದ್ದಾರೆ. ಗಾಂಜಾ ಸೇರಿದಂತೆ ಮಾದಕ ವಸ್ತುಗಳ ವಿರುದ್ಧ ತೀವ್ರ ಸ್ವರೂಪದ ಕಾರ್ಯಾಚರಣೆಗಿಳಿದ ಪೊಲೀಸರು ಡಿ.22ರಂದು ಕಾಂಗ್ರೆಸ್ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿ ವೇದಮೂರ್ತಿ ಅಲಿಯಾಸ್ ಶಾಮನೂರು ವೇದ ಸೇರಿದಂತೆ ನಾಲ್ವರನ್ನು ಬಂಧಿಸಿ, 1 ಲಕ್ಷ ರು. ನಗದು, 10 ಲಕ್ಷ ಮೌಲ್ಯದ ಮಾದಕವಸ್ತು ಜಪ್ತಿ ಮಾಡಿದ್ದರು. ಅಂದು ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿದ್ದ ತುರ್ಚಘಟ್ಟ ಗ್ರಾಮದ ಗುತ್ತಿಗೆದಾರ, ವಸತಿ ಸಚಿವ ಜಮೀರ್ ಅಹಮ್ಮದ್ ಆಪ್ತ ಅನ್ವರ್ ಬಾಷಾ ಎಂಬಾತ ಸೇರಿದಂತೆ ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ. ಇನ್ನೂ ಈ ಜಾಲದ ಆಳಕ್ಕೆ ಇಳಿಯಲು ಇಲಾಖೆ ಸಜ್ಜಾಗಿದ್ದಾರೆ.