ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಅಕ್ಟೋಬರ್ 9ಕ್ಕೆ ಬಾಗಿಲು ತೆಗೆಯುವ ಮೂಲಕ ಆರಂಭವಾದ ಹಾಸನಾಂಬೆ ದೇವಿ ದರ್ಶನವು ಗುರುವಾರ ಶಾಸ್ತ್ರೋಕ್ತವಾಗಿ ಕೊನೆಗೊಂಡಿತು. ಗಣ್ಯರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮಧ್ಯಾಹ್ನ 1.05ಕ್ಕೆ ೧೫ ದಿನದಿಂದ ನಡೆದ ಜಾತ್ರಾ ಮಹೋತ್ಸವಕ್ಕೆ ಗುರುವಾರದಂದು ಗರ್ಭಗುಡಿ ಬಾಗಿಲು ಮುಚ್ಚಿ ಬೀಗ ಹಾಕುವ ಮೂಲಕ ೨೦೨೫ರ ಹಾಸನಾಂಬ ಉತ್ಸವಕ್ಕೆ ತೆರೆ ಎಳೆಯಲಾಯಿತು. ಹಾಸನಾಂಬೆ ದೇವಾಲಯದ ಗರ್ಭಗುಡಿಯ ಬಾಗಿಲು ಹಾಕುವ ವೇಳೆ ಕೆಲ ಸಮಯದಲ್ಲಿ ನೆರೆದಿದ್ದ ಕರ್ತವ್ಯನಿರತ ಸಿಬ್ಬಂದಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬೆಳಗ್ಗೆ ಪೂಜೆ, ನೈವೇದ್ಯಕ್ಕಾಗಿ ಸಾರ್ವಜನಿಕ ದರ್ಶನ ಬಂದ್ ಆಗಿದ್ದರಿಂದ ಸಾವಿರಾರು ಭಕ್ತರು ದರ್ಶನ ಸಾಧ್ಯವಾಗದೇ ನಿರಾಸೆಗೊಂಡು ವಾಪಸ್ ಹೋಗಬೇಕಾಯಿತು.ಸಂಪ್ರದಾಯದಂತೆ ಪೂಜೆ, ನೈವೇದ್ಯ ನೆರವೇರಿಸಿದ ಅರ್ಚಕರು ನಂದಾದೀಪ ಹಚ್ಚಿಟ್ಟರು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ನಿಶ್ಚಲಾನಂದನಾಥ ಸ್ವಾಮೀಜಿ, ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಪಿ. ಸ್ವರೂಪ್, ಶಾಸಕ ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಪಂ ಸಿಇಒ ಬಿ.ಆರ್. ಪೂರ್ಣೀಮಾ, ದಕ್ಷಿಣ ವಲಯದ ಐಜಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತ, ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮಾರುತಿ, ಹುಡಾ ಅಧ್ಯಕ್ಷ ಪಟೇಲ್ ಶಿವಣ್ಣ, ಮೇಯರ್ ಗಿರೀಶ್ ಚನ್ನವೀರಪ್ಪ, ಉಪ ಮೇಯರ್ ಹೇಮಲತಾ ಕಮಲ್ ಕುಮಾರ್ ಮತ್ತಿತರರ ಸಮ್ಮುಖದಲ್ಲಿ ದೇವಾಲಯದ ಬಾಗಿಲು ಮುಚ್ಚಿ ಮುದ್ರೆ ಹಾಕಿ ಸೀಲ್ ಹಾಕಲಾಯಿತು. ಕೀಲಿ ಕೈ ಅನ್ನು ದೇವಾಲಯದ ಆಡಳಿತಾಧಿಕಾರಿಗೆ ಹಸ್ತಾಂತರಿಸಿದರು. ಇನ್ನು ಕಳೆದ ವರ್ಷ ೨೦ಲಕ್ಷ ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಈ ವರ್ಷ ೨೬ ಲಕ್ಷಕ್ಕೂ ಹೆಚ್ಚು ಜನ ಭಕ್ತರು ಆಗಮಿಸಿ ದೇವಿ ದರ್ಶನ ಪಡೆಯುವ ಮೂಲಕ ದಾಖಲೆ ಬರೆದಿದೆ.ಗರ್ಭಗುಡಿ ಬಾಗಿಲು ಮುಚ್ಚಿದ ನಂತರ ಮಾಧ್ಯಮದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಈ ಬಾರಿ ಹಾಸನಾಂಬೆ ಉತ್ಸವದಲ್ಲಿ ಸುಮಾರು ೨೬ ಲಕ್ಷದ ೧೩ ಸಾವಿರ ಭಕ್ತರು ದೇವರ ದರ್ಶನ ಪಡೆದಿದ್ದು, ೮೨ ಲಕ್ಷ ಟಿಕೆಟ್ ಮಾರಾಟದಿಂದ ೨೧ ಕೋಟಿ ರು. ಬಂದಿದೆ, ಹುಂಡಿ ಎಣಿಕೆ ಸೇರಿ ಅಂದಾಜು ೨೫ ಕೋಟಿ ಆದಾಯ ಬರುವ ನಿರೀಕ್ಷೆ ಇದೆ ಎಂದರು. ಶೇಕಡ ೯೮ರಷ್ಟು ಜನ ಹಾಸನಾಂಬೆ ತಾಯಿ ದರ್ಶನ ಮಾಡಿಕೊಂಡು ಹೋಗಿದ್ದಾರೆ. ಅದಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ. ಸಂಸದರು, ಶಾಸಕರು, ವಿಧಾನ ಪರಿಷತ್ತು ಸದಸ್ಯರು, ಮಾಜಿ ಶಾಸಕರು ಸಹಕಾರ ಕೊಟ್ಟಿದ್ದಾರೆ. ಶೇಕಡ ೯೫ ಭಾಗ ಕಾನೂನನ್ನು ಪಾಲಿಸಿದ್ದಾರೆ. ಎಲ್ಲೊ ಅಲ್ಲೊಂದು ಇಲ್ಲೊಂದು ಸಣ್ಣಪುಟ್ಟ ಸಮಸ್ಯೆ ಆಗಿರಬಹುದು. ಎಲ್ಲಾರ ಸಹಕಾರದಲ್ಲಿ ಕೆಲಸ ಮಾಡಿರುವುದಕ್ಕೆ ಯಶಸ್ವಿಯಾಗಿದೆ. ಮಳೆ ಬಂದು ನಾನಾ ಸಮಸ್ಯೆಗಳು ಎದುರಾಯಿತು. ಶುಕ್ರವಾರದಂದು ೩ ಲಕ್ಷದ ೬೨ ಸಾವಿರ ಜನ ಭಕ್ತರು ಬಂದು ಹಾಸನಾಂಬೆ ದರ್ಶನ ಮಾಡಿದ್ದಾರೆ. ಏನೇ ಇದ್ದರೂ ನಮಗೆ ಸಮಾಧಾನ ಇದೆ, ಸಂತೋಷ ಇದೆ ಎಂದರು. ಕಳೆದ ವರ್ಷದ ಕೆಲ ಅನುಭವ ನೋಡಿದಾಗ ಈ ವರ್ಷದಲ್ಲಿ ಅತ್ಯಂತ ಸುಗಮವಾಗಿ ಸಾಮಾನ್ಯ ಜನರು ಸಂತೋಷವಾಗಿ ಬಂದು ಹೋಗಿದ್ದಾರೆ. ಹಾಸನ ಜನರ ಗೌರವ ಇನ್ನಷ್ಟು ಹೆಚ್ಚಾಗಲಿ ಎಂದು ಹಾರೈಸಿದರು. ನಾವು ಈ ವರ್ಷ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇಟ್ಟು ಪ್ರಯೋಗ ಮಾಡಿದ್ದು, ಆದರೂ ಕನ್ವೆನ್ಸ್ ಆಗಲಿಲ್ಲ. ಪೊಲೀಸ್ ಮತ್ತು ಪಿಡಬ್ಲ್ಯೂ ಎಸ್ಟಿಮೆಂಟ್ ಮಾಡಿದಂತೆ ಅಂಕಿ ಅಂಶ ಕೊಡಲಾಗಿದೆ ಎಂದು ಮಾಹಿತಿ ನೀಡಿದರು. ೨೦೨೫ನೇ ವರ್ಷದ ಹಾಸನಾಂಬೆ ಜಾತ್ರ ಮಹೋತ್ಸವ ವಿದ್ಯುಕ್ತವಾಗಿ ಮುಕ್ತಾಯವಾಗಿದೆ, ಎಲ್ಲಾ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಎಲ್ಲಾ ಇಲಾಖೆ ಅಧಿಕಾರಿ ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಉತ್ಸವ ಯಶಸ್ವಿಯಾಗಿ ನಡೆದಿದ್ದು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದರು.ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಹಾಸನಾಂಬೆ ದೇವಿ ದರ್ಶನಕ್ಕೆ ಸಾಮಾನ್ಯ ಜನರಿಗೆ ಅಡಚಣೆಯಾಗದಂತೆ ವ್ಯವಸ್ಥೆಯನ್ನು ಮಾಡಲಾಗಿದೆ. ಕಳೆದ ವರ್ಷ ಅವ್ಯವಸ್ಥೆಯಾಗಿತ್ತು. ಈ ವರ್ಷ ಸರಿಪಡಿಸುವ ನಿಟ್ಟಿನಲ್ಲಿ ಶಾಂತಿಯುವಾಗಿ ಭಕ್ತರಿಗೆ ದರ್ಶನ ಕೊಡಿಸುವ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದ ಮೇಲೆ ಉತ್ತಮ ಕಾರ್ಯವೈಕರಿ ನಿರ್ವಹಿಸಿದ್ದಾರೆ. ಎಲ್ಲವನ್ನು ಕಾಲಕಾಲಕ್ಕೆ ಸರಿಪಡಿಸಿ ಯಶಸ್ವಿ ಕಾರ್ಯಕ್ರಮ ಮಾಡಿ ಜಿಲ್ಲೆಗೆ, ರಾಜ್ಯಕ್ಕೆ ಉತ್ತಮ ಹೆಸರು ತರುವಲ್ಲಿ ಕಾರಣೀಭೂತರಾಗಿದ್ದಾರೆ ಎಂದರು. ಅವರಿಗೆ ತಾಯಿ ಹಾಸನಾಂಬೆ ಮತ್ತು ಶ್ರಿ ಸಿದ್ದೇಶ್ವರ ಸ್ವಾಮಿ ಇನ್ನಷ್ಟು ಉತ್ತಮ ಅವಕಾಶ ನೀಡಿ ಸೇವೆ ಮಾಡುವ ಸೌಭಾಗ್ಯ ಕರುಣಿಸಲಿ ಎಂದು ಹಾರೈಸಿದರು. ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಕೇಂದ್ರ ಸಚಿರಾದ ಕುಮಾರಸ್ವಾಮಿ ಅವರು ಜಿಲ್ಲಾಡಳಿತ ಅವರನ್ನು ಸನ್ಮಾನಿಸದ ಬಗ್ಗೆ ನನಗೆ ವೈಯಕ್ತಿಕ ಬೇಸರವಿಲ್ಲ. ಆದರೆ ನಮ್ಮ ಕಾರ್ಯಕರ್ತರಿಗೆ ಅಸಮಾಧಾನ ಆಗಿದ್ದರಿಂದ ಚಿಕ್ಕದಾಗಿ ವಿರೋಧ ಕೇಳಿಬಂದಿತು. ದೊಡ್ಡದಾಗಿ ಕಾರ್ಯಕ್ರಮ ನಡೆದಾಗ ಚಿಕ್ಕಪುಟ್ಟ ಅಸಮಾಧಾನ ಆಗುವುದು ಸಹಜ. ಹಾಸನಾಂಬೆ ತಾಯಿ ಸಮಸ್ತ ಜನತೆಗೆ ಒಳ್ಳೆಯದನ್ನ ಮಾಡಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಹಾಸನಾಂಬೆಯ ಒಡವೆಗಳನ್ನು ಮುಖ್ಯ ಅರ್ಚಕರು ತಲೆ ಮೇಲೆ ಹೊತ್ತುಕೊಂಡು ದೇವಾಲಯದ ಸುತ್ತ ಮಂಗಳವಾದ್ಯದೊಡನೆ ಮೆರವಣಿಗೆ ನಡೆಸಿ ನಂತರ ಮೂಲ ಸ್ಥಾನಕ್ಕೆ ಇಡಲಾಯಿತು.
;Resize=(128,128))
;Resize=(128,128))
;Resize=(128,128))