ಆಹಾರ ಉದ್ಯಮದಲ್ಲಿ ತೊಡಗಿರುವವರು ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸಲು ಆದ್ಯತೆ ನೀಡಬೇಕು ಎಂದು ಎಫ್.ಎಸ್.ಎಸ್.ಎ.ಐ ಜಿಲ್ಲಾ ಅಂಕಿತಾಧಿಕಾರಿ ಡಾ.ಜೆ.ಎಸ್.ನಾಗರಾಜ ಸೂಚಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಆಹಾರ ಉದ್ಯಮದಲ್ಲಿ ತೊಡಗಿರುವವರು ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸಲು ಆದ್ಯತೆ ನೀಡಬೇಕು ಎಂದು ಎಫ್.ಎಸ್.ಎಸ್.ಎ.ಐ ಜಿಲ್ಲಾ ಅಂಕಿತಾಧಿಕಾರಿ ಡಾ.ಜೆ.ಎಸ್.ನಾಗರಾಜ ಸೂಚಿಸಿದರು.ಇಲ್ಲಿನ ರೋಟರಿ ಬಾಲಭವನದಲ್ಲಿ ಶುಕ್ರವಾರ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಗ್ಲೋಬಲ್ ಇನ್ಸ್ಟಿಟ್ಯೂಟ್ ಫಾರ್ ಎಜುಕೇಷನ್ ಅಂಡ್ ರಿಸರ್ಚ್ ಫೌಂಡೇಷನ್, ಜಿಲ್ಲಾ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಕೇಂದ್ರದ ವತಿಯಿಂದ ಆಯೋಜಿಸಿದ್ದ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣಪತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಹಾರ ಉತ್ಪನ್ನಗಳ ತಯಾರಿಕೆಯಿಂದ ಹಿಡಿದು ಮಾರಾಟ, ಬಳಕೆಯವರೆಗೂ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳಬೇಕೆಂಬ ಉದ್ದೇಶದಿಂದ 2006ರಲ್ಲಿ ಫುಡ್ ಸೇಫ್ಟಿ ಆಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ ಅಸ್ತಿತ್ವಕ್ಕೆ ಬಂದಿದೆ. 2011ರಲ್ಲಿ ಇದರ ನಿಯಮಗಳನ್ನು ರೂಪಿಸಲಾಗಿದೆ. ಆಹಾರ ಉದ್ಯಮದಲ್ಲಿರುವವರು ನಿಯಮ ಪಾಲನೆ ಮಾಡಬೇಕು. ನಿಗದಿತ ಸಮಯಕ್ಕೆ ಪರವಾನಿಗೆ ನವೀಕರಣ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಎಫ್.ಎಸ್.ಎಸ್.ಎ.ಐ ಜಿಲ್ಲಾ ಆಹಾರ ಸುರಕ್ಷತಾಧಿಕಾರಿ ಗವಿರಂಗಪ್ಪ ಮಾತನಾಡಿ, ಹೋಟೆಲ್‌ಗಳಲ್ಲಿ ಹೊರಗೆ ಮಾತ್ರ ಸ್ವಚ್ಛತೆ ಕಾಪಾಡಿಕೊಂಡರೆ ಸಾಲದು. ಅಡುಗೆ ಮನೆಯೂ ಸ್ವಚ್ಛತೆಯಿಂದ ಕೂಡಿರಬೇಕು. ಕಲರ್ ಹಾಗೂ ಟೇಸ್ಟಿಂಗ್ ಪೌಡರ್‌ನ್ನು ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಬಾರದು. ಆಹಾರ ಗುಣಮಟ್ಟದಿಂದ ಕೂಡಿದ್ದರೆ ಜನರೇ ಹುಡುಕಿಕೊಂಡು ಬರುತ್ತಾರೆ. ಆಗ ವ್ಯಾಪಾರವೂ ವೃದ್ಧಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಎಫ್.ಎಸ್.ಎಸ್.ಎ.ಐ ಹೊನ್ನಾಳಿ ತಾಲೂಕು ಆರೋಗ್ಯಾಧಿಕಾರಿ ಹಾಗೂ ಆಹಾರ ಸುರಕ್ಷತಾಧಿಕಾರಿ ನವೀನ್ ಕುಮಾರ್, ತರಬೇತುದಾರರಾದ ಡಿ.ಬಿ.ಸವಿತ, ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಕೇಂದ್ರದ ಜಿಲ್ಲಾ ಸಂಯೋಜಕ ಬಿ.ಎಸ್.ವಿನೀತ್ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.