ಸಾರಾಂಶ
ಕಡೂರು ತಾಲೂಕಿನ ಸಿಂಗಟಗೆರೆಯಲ್ಲಿ ನಡೆದ ಸಮಾರಂಭದಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನೀಡಲಾಗುವ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಯುವ ಲೇಖಕ ಸಿಂಗಟಗೆರೆ ಶಶಿ ಅವರಿಗೆ ಪ್ರದಾನ ಮಾಡಿ ಮಾತನಾಡಿದ ಸಾಹಿತಿ ಬಿ. ತಿಪ್ಪೇರುದ್ರಪ್ಪ ಎಲೆ ಮರೆಯ ಕಾಯಿಯಂತೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವವರನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಸಮಾಜದಲ್ಲಿ ಸಾಹಿತಿಗಳ ಸಂಖ್ಯೆ ವೃದ್ಧಿಸುತ್ತದೆ ಎಂದರು.
ಸಿಂಗಟಗೆರೆ ಶಶಿ ಅವರಿಗೆ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಎಲೆ ಮರೆಯ ಕಾಯಿಯಂತೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವವರನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಸಮಾಜದಲ್ಲಿ ಸಾಹಿತಿಗಳ ಸಂಖ್ಯೆ ವೃದ್ಧಿಸುತ್ತದೆ ಎಂದು ಸಾಹಿತಿ ಬಿ. ತಿಪ್ಪೇರುದ್ರಪ್ಪ ಸಲಹೆ ಮಾಡಿದರು.
ಕಡೂರು ತಾಲೂಕಿನ ಸಿಂಗಟಗೆರೆಯಲ್ಲಿ ನಡೆದ ಸಮಾರಂಭದಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನೀಡಲಾಗುವ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಯುವ ಲೇಖಕ ಸಿಂಗಟಗೆರೆ ಶಶಿ ಅವರಿಗೆ ಪ್ರದಾನ ಮಾಡಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಪ್ರತಿಭೆಗಳಿವೆ. ಬಹಳಷ್ಟು ಜನ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ ಎಲೆ ಮರೆಯ ಕಾಯಿಯಂತೆ ಬದುಕುತ್ತಿರುವ ಅವರನ್ನು ಗುರುತಿಸಿ ಪ್ರೋತ್ಸಾಹಿಸುವವರಿಲ್ಲದೆ ಅವರ ಪ್ರತಿಭೆ ಕಮರಿ ಹೋಗುತ್ತಿವೆ ಎಂದು ವಿಷಾದಿಸಿದರು. ಅಂತಹವರನ್ನು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರೆ ಸಾಹಿತ್ಯ ಕೃಷಿ ಮಾಡಲು ಅವರಿಗೆ ಇನ್ನಷ್ಟು ಹುಮ್ಮಸ್ಸು ಬರುತ್ತದೆ. ಸಮಾಜದಲ್ಲಿ ಸಾಹಿತ್ಯ, ಸಾಹಿತಿಗಳ ಸಂಖ್ಯೆ ಹೆಚ್ಚುತ್ತದೆ ಎಂದು ತಿಳಿಸಿದರು. ಸಾಹಿತ್ಯ ಮನಸ್ಸಿಗೆ ಮುದ ನೀಡುತ್ತದೆ, ಸುಸಂಸ್ಕೃತ ಸಭ್ಯ ಸಮಾಜ ನಿರ್ಮಾಣ ಮಾಡುತ್ತದೆ, ನಮ್ಮ ಜ್ಞಾನ ಬೆಳೆಸುತ್ತದೆ ಎಂದರು. ಇತ್ತೀಚಿನ ವರ್ಷಗಳಲ್ಲಿ ಮೊಬೈಲ್, ಕಂಪ್ಯೂಟರ್, ವಾಟ್ಸ್ ಪ್, ಫೇಸ್ಬುಕ್ ಗೀಳಿನಿಂದಾಗಿ ಓದುವ ಪ್ರವೃತ್ತಿ ನಶಿಸುತ್ತಿದೆ, ಮಕ್ಕಳು ಅವುಗಳಿಂದ ದೂರವಿದ್ದು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ನಮ್ಮ ಮಕ್ಕಳು ಬತ್ತ ತುಂಬುವ ಚೀಲಗಳಾಗಬಾರದು, ಬತ್ತ ಬೆಳೆಯುವ ಗದ್ದೆಗಳಾಗಬೇಕು. ಹಾಗಾಗಬೇಕಾದರೆ ಶಿಕ್ಷಕರು ಮತ್ತು ಪೋಷಕರು ಅವರಿಗೆ ಬದುಕಿನ ಮೌಲ್ಯಗಳು ಕಲಿಸಬೇಕು ಎಂದು ಸಲಹೆ ಮಾಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಅಭಿವೃದ್ಧಿ ಸಮಿತಿ ಧರ್ಮದರ್ಶಿ ಬಿ.ಕೆ. ನಾಗರಾಜಪ್ಪ, ಗ್ರಾಮದ ಯುವಕ ಸಿಂಗಟಗೆರೆ ಶಶಿ ಅವರಿಗೆ ಪ್ರಶಸ್ತಿ ಬಂದಿರುವುದು ಗ್ರಾಮದ ಕೀರ್ತಿ ಹೆಚ್ಚಿಸಿದೆ ಎಂದರು. ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್. ಪ್ರಕಾಶ್ ಎಲೆಮರೆಯ ಕಾಯಿಯಂತೆ ಸಾಹಿತ್ಯ ಕೃಷಿ ಮಾಡುತ್ತಿರುವ ಸಿಂಗಟಗೆರೆ ಶಶಿ ಅವರಿಗೆ ಪ್ರಶಸ್ತಿ ಬಂದಿರುವುದು ಅರ್ಥಪೂರ್ಣ ಎಂದು ಹೇಳಿದರು. ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿ, ಎಲೆ ಮರೆಯ ಕಾಯಿಯಂತೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಸಾಧಕರ ಗುರುತಿಸಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಕೆಲಸ ಪ್ರತಿಷ್ಠಾನ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಮಾಡುತ್ತಿದೆ ಎಂದರು. ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಯುವ ಲೇಖಕ ಸಿಂಗಟಗೆರೆ ಶಶಿಯವರಿಗೆ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು, ಇದೇ ವೇಳೆ ವಿವಿಧ ಸಂಘಟನೆಗಳ ಮುಖಂಡರು ಶಶಿ ಅವರನ್ನು ಅಭಿನಂದಿಸಿದರು. ಸಮಾರಂಭದ ನಡುವೆ ಶಿಕ್ಷಕ ಬಿ.ಡಿ. ಚಂದ್ರಶೆಟ್ಟಿ, ಸಿಂಗಟಗೆರೆ ಕಲ್ಲೇಶಪ್ಪ, ಮಲ್ಲೇನಹಳ್ಳಿ ನಾಗರಾಜ್ ಅವರಿಂದ ಗೀತ ಗಾಯನ ನಡೆಯಿತು. ಕಡೂರು ತಾಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ವೈ.ಎಸ್. ರವಿಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷೆ ಲಲಿತಮ್ಮ ಕಲ್ಲೇಶಪ್ಪ, ಬಿ.ಪಿ. ದೇವಾನಂದ್, ರಾಜಾ ನಾಯಕ್, ಗಂಗಾಧರ್, ಕೆ. ವಿರೂಪಾಕ್ಷಪ್ಪ ಸಿಂಗಟಗೆರೆ ರವಿ ಉಪಸ್ಥಿತರಿದ್ದರು. 4 ಕೆಸಿಕೆಎಂ 2ಕಡೂರು ತಾಲೂಕಿನ ಸಿಂಗಟಗೆರೆಯಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಯುವ ಲೇಖಕ ಸಿಂಗಟಗೆರೆ ಶಶಿ ಅವರಿಗೆ ಸಾಹಿತಿ ತಿಪ್ಪೇರುದ್ರಪ್ಪ ಅವರು ಪ್ರದಾನ ಮಾಡಿದರು.