ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಮ್ಮ ಜಿಲ್ಲೆಯವರು ಸಿಎಂಯಾದರೆ ನಮಗೆ ಖುಷಿ ಇದೆ. ಪಕ್ಷಕ್ಕಾಗಿ ಶ್ರಮಪಟ್ಟವರು ಆಗಲಿ, ಯೋಗ್ಯ ಅಲ್ಲದವರು ಸಿಎಂ ಸ್ಥಾನ ಕೇಳಬಾರದು. ಜಿಲ್ಲೆಗೆ ಯೋಗ್ಯವಾಗದವರು ರಾಜ್ಯ ಆಳಲು ಹೋಗ್ತಿವಿ ಎಂದು ಹೇಳಿಕೊಳ್ಳಬಾರದು. ವಾಸ್ತವಿಕತೆ ಅರಿತು ಸಿಎಂ ಸ್ಥಾನ ಕೇಳಲಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಟಾಂಗ್ ನೀಡಿದರು.ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಿಎಂ ರೇಸ್‌ನಲ್ಲಿರೋ ವಿಚಾರ ಕುರಿತು ಮಾತನಾಡಿದ ಅವರು, ಸಿಎಂ ಆಗಲು ಕನಿಷ್ಠ 50 ಶಾಸಕರಾದರು ಜತೆಗೆ ಬೇಕು. ನಿಮ್ಮ ಸಾಮರ್ಥ್ಯ ಏನು? ನಿಮ್ಮ ಸಂಖ್ಯೆ ಏನು? ರಾಜ್ಯದ 31 ಜಿಲ್ಲೆಯಲ್ಲಿ ನಿಮ್ಮ ಪ್ರಭಾವ ಏನು ಅರಿತು ಸಿಎಂ ಸ್ಥಾನ ಕೇಳಿ. ನಾಳೆ ಎಲೆಕ್ಷನ್‌ನಲ್ಲಿ ನಿಮ್ಮ ಮುಖ ತೋರಿಸಿದರೇ ರಾಜ್ಯದಲ್ಲಿ ಓಟು ಬರುತ್ವಾ? ಮಂತ್ರಿ ಆಗೋರು, ಮುಖ್ಯಮಂತ್ರಿಗಳು ಆಗೋರು ತಮ್ಮ ಇತಿ-ಮಿತಿ ತಿಳಿದು ಮಾತನಾಡಲಿ ಎಂದರು.ಸಿಎಂ ಡಿಸಿಎಂ ಪವರ್ ಶೇರಿಂಗ್ ವಿಚಾರ ಅದು ನನಗೆ ಗೊತ್ತಿಲ್ಲ. ನನ್ನ ಮುಂದೆ ನಡೆದಿರುವ ಬಗ್ಗೆ ಹೇಳಲು ಹಕ್ಕಿದೆ. ಉಳಿದದ್ದು ಸಂಬಂಧ ಪಟ್ಟವರಿಗೆ ಕೇಳಿ. ಸಿಎಂ ಯಾರಾಗ್ತಾರೆನ್ನುವ ನಿರ್ಣಯ ರಾಹುಲ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನನ್ನ ಮುಂದೆ ಕುಳಿತು ನಿರ್ಣಯ ಮಾಡಿಲ್ಲ. ಅದು ಅವರವರಿಗೆ ಗೊತ್ತು. ಯಾರಿಗೆ ಅರ್ಹತೆ ಇದೆ, ಅವರಿಗೆ ಅವಕಾಶ ಸಿಕ್ಕರೇ ಖುಷಿ ಪಡೋಣ ಎಂದರು.ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರವಾಗಿದ್ದು, ಅವರು ಯಾರಿಗೆ ಮಾತು ಕೊಟ್ಟಿದ್ದರೋ ಅವರನ್ನು ಮರೆಯಬಾರದು. ಸಂಪುಟ ಪುನರ್ ರಚನೆ ಅನ್ನೋದಾದರೇ ಸಿಎಂ ಕೊಟ್ಟ ಮಾತು ನೆನಪಿನಲ್ಲಿ ಇಟ್ಟುಕೊಳ್ಳಲಿ. ಯಾರ್ಯಾರಿಗೆ ಏನೇನು ಮಾತು ಕೊಟ್ಟಿದ್ದಾರೆ ಅದನ್ನು ನೆನಪಿನಲ್ಲಿಟ್ಟುಕೊಂಡು ಪುನರ್ ರಚನೆ ಮಾಡ್ತಾರೆನ್ನುವ ವಿಶ್ವಾಸವಿದೆ ಎಂದರು.ಪಾರ್ಟಿಯಿಂದ ಏನೇನು ಕಮಿಟ್ಮೆಂಟ್ ಇವೆ, ನಮಗೆ ಮೂವರಿಗೆ ಸಮನಾಗಿ ಅಧಿಕಾರಿ ಹಂಚಿಕೆ ಎಂದಿದ್ದರು. ಚುನಾವಣೆಗೂ ಮೊದಲು ನಮ್ಮ ಮೂವರನ್ನು (ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ) ಕರೆದು ಚೆನ್ನಾಗಿ ಎಲೆಕ್ಷನ್ ಮಾಡಿ ಎಂದಿದ್ದರು. ಮೂವರಿಗೂ ಇಕ್ವಲ್ ಪವರ್ ಶೇರಿಂಗ್ ಎಂದಿದ್ದರು. ಇದು ಎಂದು ಅವರಿಗೆ ನೆನಪಾಗುತ್ತದೋ ಅಂದು ಅವರು ಮಾಡಲಿ ಎಂದರು.
ನನ್ನ ಸಚಿವ ಮಾಡದೆ ಇದ್ದರೂ ಮಾತು ತಪ್ಪಿದಂಗೆ ಆಗಲ್ಲ. ನಾನು ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ನಾವು ಪ್ರಬುದ್ಧರು, ನಮಗೆ ತಾಳ್ಮೆ, ಸಹನೆ ಇದೆ.-ಯಶವಂತರಾಯಗೌಡ ಪಾಟೀಲ,
ಶಾಸಕರು.ಶೇ.81 ರಷ್ಟು ತೊಗರಿ ಬೆಳೆ ಹಾನಿ: ಶಾಸಕ ಯಶವಂತರಾಯಗೌಡಜಿಲ್ಲಾದ್ಯಂತ ಈ ಬಾರಿ ಅತಿ ಹೆಚ್ಚು ಅಂದರೆ 5,34,565 ಹೆಕ್ಟೇರ್ ತೊಗರಿ ಬಿತ್ತನೆ ಮಾಡಲಾಗಿದ್ದು, ಅದರಲ್ಲಿ ಶೇ.81 ರಷ್ಟು ತೊಗರಿ ಬೆಳೆ ಹಾನಿಯಾಗಿದೆ. ಬಿತ್ತನೆ, ಎಂಎಸ್‌ಪಿ ಯಲ್ಲಿ ಉತ್ತಮ ದರ ಇರುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ. ಹೀಗಾಗಿ ರೈತರು ಈ ಬಾರಿ ಇಂಡಿ ತಾಲೂಕಿನಲ್ಲಿ 1,21,426 ಹೆಕ್ಟೇರ್, ಮುದ್ದೇಬಿಹಾಳ ತಾಲೂಕಿನಲ್ಲಿ 1,15,766 ಹೆಕ್ಟೇರ್, ಸಿಂದಗಿ ತಾಲೂಕಿನಲ್ಲಿ 1,09,486 ಹೆಕ್ಟೇರ್ ವಿಜಯಪುರ ತಾಲೂಕಿನಲ್ಲಿ 1,06,614 ಹೆಕ್ಟೇರ್, ಬಸವನಬಾಗೇವಾಡಿ ತಾಲೂಕಿನಲ್ಲಿ 81,271 ಹೆಕ್ಟೇರ್ ತೊಗರಿ ಬಿತ್ತನೆ ಮಾಡಲಾಗಿದೆ. ಕಳೆದ ಬಾರಿ ಬರಗಾಲ ಇತ್ತು. ಈ ಬಾರಿ ಪ್ರಾಕೃತಿಕ ವೈಪರಿತ್ಯ ಸೇರಿದಂತೆ ವಿವಿಧ ಕಾರಣಗಳಿಂದ ರೈತರಿಗೆ ಹಾನಿಯಾಗಿದೆ. ಇದೆಲ್ಲದರ ಕುರಿತು ಸಮಗ್ರ ತನಿಖೆ ಮಾಡಬೇಕು, ನಾನು ಸಹ ಈ ವಿಚಾರವನ್ನು ಅಧಿವೇಶನದಲ್ಲಿ ಗಮನ ಸೆಳೆಯುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.ಈಗಾಗಲೇ ಹಾನಿಗೊಳಗಾಗಿರುವ ತೊಗರಿ ಬೆಳೆಗಾರರ ರೈತರ ಸಹಾಯಕ್ಕೆ ಸರ್ಕಾರ ಬರಬೇಕಿದೆ. ಅದರ ಜತೆಗೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಬೆಳೆಗಳು ಹಾನಿಯಾಗಿದ್ದರೂ ಅವುಗಳಿಗೂ ಸಹ ಪರಿಹಾರ ಕೊಡುವ ಕೆಲಸ ಆಗಬೇಕು. ಪ್ರತಿ ಕ್ವಿಂಟಲ್‌ಗೆ ₹7 ಸಾವಿರ ರುಪಾಯಿಯಂತೆ ಲೆಕ್ಕ ಹಾಕಿದರು. ರೈತರಿಗೆ ₹4 ಸಾವಿರ ಕೋಟಿ ಹಾನಿಯಾಗಲಿದೆ. ಸರಿಯಾದ ಮಳೆ, ಕಳಪೆಬೀಜ, ನಿರ್ವಹಣೆಯ ಸಮಸ್ಯೆ ಸೇರಿದಂತೆ ನಾನಾ ಕಾರಣಗಳಿದ್ದು, ಈಗಾಗಲೇ ಕೃಷಿ ಇಲಾಖೆ ಅಧಿಕಾರಿಗಳು ಜಿಲ್ಲೆಯ 17 ಗ್ರಾಮಗಳ 28 ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಸಂಪೂರ್ಣ ತನಿಖೆ ನಡೆಸಿ ಪರಿಹಾರ ಕೊಡುವ ಕೆಲಸ ತ್ವರಿತಗತಿಯಲ್ಲಿ ಆಗಬೇಕು ಎಂದರು.ನಿಂಬೆ ಅಭಿವೃದ್ಧಿ ಮಂಡಳಿಗೆ ಸಾಕಷ್ಟು ಶ್ರಮಿಸಿ ಜಿಐ ಟ್ಯಾಗ್ ಕೊಡಿಸಿದ್ದೇನೆ. ಆದರೆ, ಅದಕ್ಕೆ ಸೂಕ್ತ ಪ್ರೋತ್ಸಾಹ ಕೊಡುವ ಕೆಲಸ ಆಗಬೇಕಿದೆ. ಇಂಡಿ ಪ್ರತ್ಯೇಕ ಜಿಲ್ಲೆ ಮಾಡುವ ಆದ್ಯತೆ ಇದೆ. ನಾನು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇನೆ. ಸರ್ಕಾರ ಸಕಾರಾತ್ಮಕ ಪ್ರತಿಕ್ರಿಯೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಜಿಲ್ಲೆಗಳ ರಚನೆ ಮಾಡುವ ಸಂದರ್ಭ ಬಂದಾಗ ಇಂಡಿ ಕೈ ಬಿಟ್ಟರೆ ನಾನು ಅದಕ್ಕೆ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.ಆಲಮಟ್ಟಿಗೆ ಅವಳಿ ಜಿಲ್ಲೆಗಳ ಜನರು ತ್ಯಾಗ ಮಾಡಿದ್ದಾರೆ. ಆದಷ್ಟು ಬೇಗ ಆಲಮಟ್ಟಿ ಎತ್ತರ 524 ಗೆ ಏರಿಸುವ ಕೆಲಸ ಆಗಬೇಕಿದೆ. ಬೇರೆ ಎಲ್ಲ ಯೋಜನೆಗಳನ್ನು 4 ವರ್ಷ ಸ್ಥಗಿತಗೊಳಿಸಿಯಾದರೂ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ನೀರಾವರಿ ಮಾಡೋಣ. ರಾಜ್ಯ ಸರ್ಕಾರದಿಂದ ಡ್ಯಾಂ ಎತ್ತರ 524 ಮಾಡುವ ನಿರ್ಧಾರವಿದೆ. ಆದರೆ, ಈ ಕುರಿತು ರೈತರಲ್ಲಿ ಆತಂಕ ಮೂಡಿದ್ದು, ಸರ್ಕಾರ ಅಧಿವೇಶನದಲ್ಲಿ ಸ್ಪಷ್ಟಪಡಿಸಲಿದೆ ಎಂದರು.ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯ ಚಿಂತನೆ ಮೂಡಿಸೋ ಕಾರಣದಿಂದಲೇ ಬೆಳಗಾವಿ ಅಧಿವೇಶನ ನಡೆಸಲಾಗುತ್ತದೆ. ನಂತರ ಸಮಗ್ರ ಕರ್ನಾಟಕದ ಅಭಿವೃದ್ಧಿ ಚಿಂತನೆ ಮಾಡಲೇಬೇಕಾಗುತ್ತದೆ. ವಿಧಾನಸಭೆ ಅಖಂಡ ರಾಜ್ಯದ ಅಭಿವೃದ್ಧಿಯ ಚಿಂತನೆ ಮಾಡಬೇಕಾಗುತ್ತದೆ. ಪ್ರಥಮ ಆದ್ಯತೆ ಉತ್ತರ ಕರ್ನಾಟಕಕ್ಕೆ ಮೀಸಲಾಗಿರುತ್ತದೆ ಎಂದು ಡಿ.9 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುವುದರ ಕುರಿತು ಪ್ರತಿಕ್ರಿಯಿಸಿದರು.
;Resize=(128,128))
;Resize=(128,128))