ರಾಜ್ಯನಾಯಕ ಎಂದು ಬೀಗಿದವರು ಸೋತು ಕುಸಿದುಬಿದ್ದಿದ್ದಾರೆ: ಲಕ್ಷ್ಮಿ ಅರುಣಾ

| Published : Jan 12 2024, 01:46 AM IST

ರಾಜ್ಯನಾಯಕ ಎಂದು ಬೀಗಿದವರು ಸೋತು ಕುಸಿದುಬಿದ್ದಿದ್ದಾರೆ: ಲಕ್ಷ್ಮಿ ಅರುಣಾ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿಯ ಇಬ್ಬರು ನಾಯಕರನ್ನು ಬೆಳೆಸಿದ್ದೇ ಜನಾರ್ದನ ರೆಡ್ಡಿ. ಆದರೆ, ಇವರಿಗೆ ರೆಡ್ಡಿಯೇ ಶತ್ರುವಾಗಿದ್ದಾರೆ. ನಮ್ಮ ಶತ್ರುಗಳ ಜತೆ ಕೈಜೋಡಿಸಲು ಹೋಗಿ ತಾವೇ ಸೋತರು. ನನ್ನನ್ನು ಸೋಲಿಸಿದರು.

ಬಳ್ಳಾರಿ: ಮಾಜಿ ಸಚಿವ ಬಿ. ಶ್ರೀರಾಮುಲು ಹಾಗೂ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ವಿರುದ್ಧ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಜನಾರ್ದನ ರೆಡ್ಡಿ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಕೈಯಲ್ಲಿ ಬೆಳೆದು ನಗರಸಭೆ ಅಧ್ಯಕ್ಷ, ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷರಾದವರು ಕೃತಜ್ಞತೆ ಇಲ್ಲದೆ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಹೆಸರು ಎತ್ತದೇ ಪರೋಕ್ಷವಾಗಿ ಟೀಕಿಸಿದರು.ರಕ್ತ ಹಂಚಿಕೊಳ್ಳದೇ ಇದ್ದರೂ ಹಂಚಿಕೊಂಡವರಿಗಿಂತ ಹೆಚ್ಚು ಪ್ರೀತಿಯಿಂದಯಿದ್ದವರು ರೆಡ್ಡಿಯ ಕೃಪೆಯಿಂದ ನಗರಸಭೆ ಸದಸ್ಯರಾಗಿ, ಸಂಸದರಾಗಿ, ಮಂತ್ರಿಗಳೂ ಆದರು. ರಾಜ್ಯಮಟ್ಟದ ನಾಯಕ ಎಂದ ಬೀಗಿ, ಕೊನೆಗೂ ಕುಸಿದು ಬಿದ್ದಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧವೂ ಹೆಸರೇಳದೆ ವಾಗ್ದಾಳಿ ನಡೆಸಿದರು.

ಬಳ್ಳಾರಿಯ ಇಬ್ಬರು ನಾಯಕರನ್ನು ಬೆಳೆಸಿದ್ದೇ ಜನಾರ್ದನ ರೆಡ್ಡಿ. ಆದರೆ, ಇವರಿಗೆ ರೆಡ್ಡಿಯೇ ಶತ್ರುವಾಗಿದ್ದಾರೆ. ನಮ್ಮ ಶತ್ರುಗಳ ಜತೆ ಕೈಜೋಡಿಸಲು ಹೋಗಿ ತಾವೇ ಸೋತರು. ನನ್ನನ್ನು ಸೋಲಿಸಿದರು. ಕೊನೆಗೆ ಎಲ್ಲ ಶತ್ರುಗಳು ಒಂದಾದರು. ಆದರೆ, ಜನಾರ್ದನ ರೆಡ್ಡಿ ಸಿಂಹ ಇದ್ದಂತೆ. ಸಿಂಹ ಒಂಟಿಯಾಗಿ ಹೋರಾಡುವಂತೆ ರೆಡ್ಡಿ ಕೂಡ ಒಂಟಿಯಾಗಿ ರಾಜಕೀಯ ಹೋರಾಟ ನಡೆಸುತ್ತಾರೆ. ಸಿಂಹ ಸಿಂಗಲ್ ಆಗಿಯೇ ಬರುತ್ತದೆ ಎಂದರು.ಇದೇ ವೇಳೆ ರಾಜ್ಯದ ಅನೇಕರು ಜನಾರ್ದನ ರೆಡ್ಡಿಯ ಕೃಪೆಯಿಂದ ಶಾಸಕ, ಸಂಸದ, ಮಂತ್ರಿ, ಮುಖ್ಯಮಂತ್ರಿಯೂ ಆದರು ಎಂದು ಹೇಳಿದರು. ಲಕ್ಷ್ಮಿ ಅರುಣಾ ಅವರ ಸಿನಿಮೀಯ ಶೈಲಿಯ ಭಾಷಣಕ್ಕೆ ನೆರೆದಿದ್ದ ನೂರಾರು ಕಾರ್ಯಕರ್ತರು ಕೇಕೆ, ಚಪ್ಪಾಳೆಗಳನ್ನು ಹಾಕಿ ಸಂಭ್ರಮಿಸಿದರು.

ರೆಡ್ಡಿ ಜನ್ಮದಿನದ ಪ್ರಯುಕ್ತ ವಿಶೇಷ ಪೂಜೆ

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ 57ನೇ ಜನ್ಮದಿನವನ್ನು ನಗರದಲ್ಲಿ ಆಚರಿಸಲಾಯಿತು.ಕಲ್ಯಾಣರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರು ಇಲ್ಲಿನ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ 1001 ತೆಂಗಿನಕಾಯಿ ಸಮರ್ಪಿಸಿದರು. ಬಳಿಕ ಜನಾರ್ದನ ರೆಡ್ಡಿ ನಿವಾಸದ ಬಳಿ ಜರುಗಿದ ಕಾರ್ಯಕ್ರಮದಲ್ಲಿ 57 ಕೆಜಿಯ ಕೇಕ್ ಕತ್ತರಿಸಿ ಕಾರ್ಯಕರ್ತರಿಗೆ ಹಂಚಿಕೆ ಮಾಡಲಾಯಿತು.

ಇದೇ ವೇಳೆ ಮಾತನಾಡಿದ ಲಕ್ಷ್ಮಿ ಅರುಣಾ ಅವರು, ಕೆಆರ್‌ಪಿ ಪಕ್ಷದಿಂದ ಬಳ್ಳಾರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರಗಳಿಂದ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದರು.ಜನಾರ್ದನ ರೆಡ್ಡಿ ದೋಷಮುಕ್ತರಾಗಿ ಮತ್ತೆ ಬಳ್ಳಾರಿಗೆ ಬರಲಿದ್ದಾರೆ ಎಂದು ಇದೇ ವೇಳೆ ಲಕ್ಷ್ಮಿ ಅರುಣಾ ಹೇಳಿದರು. ರೆಡ್ಡಿ ಜನ್ಮದಿನದ ಹಿನ್ನೆಲೆಯಲ್ಲಿ ರಕ್ತದಾನ, ಆಸ್ಪತ್ರೆಗಳಲ್ಲಿ ಹಣ್ಣು ವಿತರಣೆ, ಅನಾಥ ಆಶ್ರಮದಲ್ಲಿ ಊಟ ವಿತರಣೆ ಮಾಡಲಾಯಿತು. ಪಕ್ಷದ ಕಾರ್ಯಕರ್ತರು ನಗರದಲ್ಲಿ ಬೈಕ್ ರ್ಯಾಲಿ ನಡೆಸಿದರು.ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಜನ್ಮದಿನ ಹಿನ್ನೆಲೆಯಲ್ಲಿ ಬಳ್ಳಾರಿಯ ಕನಕ ದುರ್ಗಮ್ಮ ದೇವಿ ದೇವಸ್ಥಾನದಲ್ಲಿ 1001 ತೆಂಗಿನಕಾಯಿ ಸಮರ್ಪಿಸಲಾಯಿತು.