ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವ ಹೆಣ್ಣಿನ ಮೇಲೆ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಮಹಿಳಾ ದಿನಾಚರಣೆಯ ನಿಜವಾದ ಅರ್ಥ, ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಿಕೊಡುವುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವ ಆರೋಪಿಗಳಿಗೆ ಶೀಘ್ರ ಶಿಕ್ಷೆಯಾಗಲು ಅಗತ್ಯ ಕ್ರಮ ವಹಿಸಬೇಕಿದೆ ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಮಹಿಳಾ ಘಟಕ ಅಧ್ಯಕ್ಷೆ ಸಿ.ಜೆ.ಸುಜಾತಾಕೃಷ್ಣ ಅಭಿಪ್ರಾಯಪಟ್ಟರು.ನಗರದ ಕಲ್ಲಹಳ್ಳಿಯ ಗ್ಲೋಬಲ್ ಮಹೇಶ್ ಪಿಯು ಕಾಲೇಜು ಸಭಾಂಗಣದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಮಹಿಳೆಯರಿಗೆ ದೌರ್ಜನ್ಯ, ಅತ್ಯಾಚಾರ ಮತ್ತು ದೈಹಿಕ ಹಲ್ಲೆ ಪ್ರಕರಣಗಳು ನಡೆದು ಸಂತ್ರಸ್ತರಿಗೆ ನ್ಯಾಯ ಸಿಗಲು ವರ್ಷಗಟ್ಟಲೇ ಕಾಯಬೇಕಿದೆ. ವಿಳಂಬ ನ್ಯಾಯವು ನ್ಯಾಯ ನಿರಾಕರಣೆಗೆ ಸಮಾನ. ಅಪರಾಧಿಗಳಿಗೆ ಶಿಕ್ಷೆಯಾಗುವಲ್ಲಿ ವಿಳಂಬವಾದರೆ ಅವರಲ್ಲಿ ಕಾನೂನಿನ ಭಯ ಕಡಿಮೆಯಾಗಿ ಇಂತಹ ಸಮಾಜಘಾತುಕ ಕೃತ್ಯಗಳು ಮರುಕಳಿಸುತ್ತವೆ ಎಂದು ಎಚ್ಚರಿಸಿದರು.ಶೀಘ್ರ ವಿಚಾರಣೆ ನಡೆದು ಆರೋಪಿಗಳ ವಿರುದ್ಧ ದೌರ್ಜನ್ಯ ಪ್ರಕರಣಗಳನ್ನು ಫಾಸ್ಟ್- ಟ್ರ‍್ಯಾಕ್ ಕೋರ್ಟ್ ಮೂಲಕ ವಿಚಾರಣೆ ನಡೆಸಿ, ಕೆಲವೇ ತಿಂಗಳುಗಳಲ್ಲಿ ಅಂತಿಮ ತೀರ್ಪು ನೀಡಿ ಗಲ್ಲು, ಜೀವಾವಧಿ, ಕೋಟ್ಯಾಂತರ ಪರಿಹಾರ, ದಂಢ ವಿದಿಸಿದರೆ ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವ ಹೆಣ್ಣಿನ ಮೇಲೆ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಮಹಿಳಾ ದಿನಾಚರಣೆಯ ನಿಜವಾದ ಅರ್ಥ, ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಿಕೊಡುವುದು ಎಂದು ಹೇಳಿದರು.ಇದೇ ವೇಳೆ ಸಾಧಕ ಮಹಿಳೆಯರಿಗೆ ಗೌರವ ಸಲ್ಲಿಸಲಾಯಿತು, ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಅಶ್ವಿನಿ ಯೋಗಾನಂದ್, ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶುಭದಾಯಿನಿ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಜಿಲ್ಲಾಧ್ಯಕ್ಷ ಕೆ.ಸಿ.ರವೀಂದ್ರ ಕಲ್ಲಹಳ್ಳಿ, ಪ್ರಚಾ ರ ಸಮಿತಿ ಅಧ್ಯಕ್ಷ ಅಭಿಲಾಷ್, ಸರಸ್ವತಿ, ಕಸಾಪ ಮಾಜಿ ಕೋಶಾಧ್ಯಕ್ಷ ಡಾ.ಕೃಷ್ಣೇಗೌಡ ಹುಸ್ಕೂರು ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು.